ಕುಣಿಗಲ್: ಸೆಪ್ಟೆಂಬರ್ 22ರ ಶುಕ್ರವಾರದಿಂದ ಮಾರ್ಕೋನಹಳ್ಳಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ರಾಗಿ ಬೆಳೆಗೆ ನೀರು ಹರಿಸಲಾಗುವುದೆಂದು ಶಾಸಕ ಡಾ.ರಂಗನಾಥ್ ಹೇಳಿದರು.
ಗುರುವಾರ ಕಾವೇರಿ ನೀರಾವರಿ ನಿಗಮದ ಮಾರ್ಕೋನಹಳ್ಳಿ ಜಲಾಶಯ ಆವರಣದಲ್ಲಿ ಮಾರ್ಕೋನಹಳ್ಳಿ, ಮಂಗಳ, ಮುತ್ತುರಾಯನ ಕೆರೆ ಹಾಗೂ ಕೆಎಚ್ ಹಳ್ಳಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ನೀರಾವರಿ ಸಲಹಾ ಸಮಿತಿ ಸಭೆ ಉದ್ದೇಶಿಸಿ ಮಾತನಾಡಿ ರೈತರೊಂದಿಗೆ ಸಂವಾದ ನಡೆಸಿದ ಶಾಸಕರು, ಹಾಲಿ ಇರುವ ನೀರು ಜನ, ಜಾನುವಾರುಗಳ ಕುಡಿಯುವ ಬಳಕೆಗೆ ಮೊದಲ ಆದ್ಯತೆ ಮೇರೆಗೆ ಮೀಸಲಿಸಬೇಕಿದೆ, ನಂತರ ಕೃಷಿ ಉದ್ದೇಶಕ್ಕೆ ಬಳಕೆ ಮಾಡಬೇಕಿದೆ, ಹವಾಮಾನ ವೈಪರಿತ್ಯದಿಂದಾಗಿ ತಾಲೂಕು ಸೇರಿದಂತೆ ರಾಜ್ಯದಲ್ಲಿ ಸಮರ್ಪಕ ಮಳೆ ಆಗುತ್ತಿಲ್ಲ, ಮುಂದಿನ ದಿನಗಳಲ್ಲೂ ಸಹ ಮಳೆ ಆಗುವ ಭರವಸೆ ಇಲ್ಲ, ರಾಜ್ಯದಲ್ಲಿ ಈಗಾಗಲೇ ಬರ ಪೀಡಿತ ಪ್ರದೇಶಗಳ ಘೋಷಣೆಯಾಗಿದೆ, ರೈತರು ಸಹಕಾರ ನೀಡಿದರೆ ರಾಗಿ ಬೆಳೆಗೆ ನೀರು ಹರಿಸಲು ಪೂರಕ ಕ್ರಮ ಕೈಗೊಳ್ಳದಾಗಿ ತಿಳಿಸಿದರು.
ಹೇಮಾವತಿ ನಾಲವಲಯದ ಎಇಇ ರುದ್ರೇಶ್, ಜಲಾಶಯದಲ್ಲಿ ಹಾಲಿ 2.2 ಟಿಎಂಸಿ ನೀರು ಲಭ್ಯವಿದ್ದು, 5492 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಗೆ 1.2 ಟಿಎಂಸಿ ನೀರು, ಭತ್ತದ ಬೆಳೆಗೆ 3.2 ಟಿಎಂಸಿ ನೀರು ಅಗತ್ಯತೆ ಇದೆ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗನಾಥ್ ಮಾತನಾಡಿ, ಪ್ರಸ್ತುತ ವಾತಾವರಣದಲ್ಲಿ ಅಲ್ಪಾವಧಿ ರಾಗಿ ಬೆಳೆಗೆ ಕ್ರಮ ಕೈಗೊಳ್ಳುವುದೆ ಸೂಕ್ತ ಎಂದು ಅಭಿಪ್ರಾಯ ಮಂಡಿಸಿದರು.
ಅಲ್ಪಾವಧಿ ರಾಗಿ ಬೆಳೆಯ ಬಿತ್ತನೆ ಬೀಜವನ್ನು ಈಗಾಗಲೇ ಸಂಗ್ರಹಿಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ, ರೈತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಅಚ್ಚು ಕಟ್ಟು ಪ್ರದೇಶದ ವಿವಿಧ ರೈತರು ತಮ್ಮ ಸಮಸ್ಯೆ ಹೇಳಿಕೊಂಡರು. ನಾಗಮಂಗಲ ತಾಲೂಕಿನ ರೈತರು ತಾವು ಅಚ್ಚುಕಟ್ಟು ಪ್ರದೇಶಕ್ಕೆ ಬರಲಿದ್ದು ಕೊನೆ ಪ್ರದೇಶವಾದ್ದರಿಂದ ಸಮರ್ಪಕ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಶಾಸಕ, ರೈತರು ಎಂದರೆ ಎಲ್ಲರೂ ಒಂದೇ, ಯಾವ ತಾಲೂಕಿನವರು ಎಂಬುದು ಇಲ್ಲಿ ವಿಷಯವಲ್ಲ, ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತರಿಗೂ ರಾಗಿ ಬೆಳೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು, ರೈತರು ಸಹ ನೀರನ್ನು ಪೋಲು ಮಾಡದೆ ಮಿತ ಬಳಕೆ ಮಾಡಿ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ಮಳೆ ಕೊರತೆ ಕಾಡುವ ಕಾರಣ ಅಗತ್ಯ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು, ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಹಾಗೂ ಉಪ ವಿಭಾಗಾಧಿಕಾರಿ ಗೌರವ ಕುಮಾರ ಶೆಟ್ಟಿ, ತಹಶೀಲ್ದಾರ್ ವಿಶ್ವನಾಥ್, ಡಿವೈಎಸ್ಪಿ ಲಕ್ಷ್ಮಿಕಾಂತ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಭಾಗ್ಯಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
Comments are closed.