ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿ

68

Get real time updates directly on you device, subscribe now.


ತುಮಕೂರು: ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು, ಕೆಲಸದ ಸಂದರ್ಭದಲ್ಲಿ ಗಾಯಗೊಂಡು ಮೃತಪಟ್ಟ ನೌಕರರಿಗೆ ಪರಿಹಾರ ನೀಡಬೇಕು ಹಾಗೂ ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಅಕ್ಷರ ದಾಸೋಹ ಬಿಸಿಯೂಟ ತಯಾರಕರು ಇತ್ತೀಚಗೆ ಸಾಂಬಾರ್ ಪಾತ್ರೆ ಇಳಿಸುವಾಗ ನಡೆದ ಅವಘಡದಲ್ಲಿ ಮೃತಪಟ್ಟ ಮುಂಡಗೋಡದ ಅನ್ನಪೂರ್ಣಮ್ಮ ಅವರ ಕುಟುಂಬಕ್ಕೆ ಪರಿಹಾರವಾಗಿ 25ಲಕ್ಷ ರೂ. ನೀಡಬೇಕು, ಹಾಗೆಯೇ ಇದುವರೆಗೂ ಕೆಲಸದ ವೇಳೆ ಅವಘಡಕ್ಕೆ ಈಡಾಗಿ ಮೃತರಾದವರ ಕುಟುಂಬಗಳಿಗೆ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಅಕ್ಷರ ದಾಸೋಹ ಬಿಸಿಯೂಟ ನೌಕರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಕಾಂತರಾಜು, ಕಳೆದ 25 ವರ್ಷಗಳಿಂದ ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ನಿಗದಿಗೊಳಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ, ಆದರೆ ಇದುವರೆಗೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ, ಮಾಸಿಕ 6500 ರೂ.ಗಳ ಅತ್ಯಂತ ಕಡಿಮೆ ವೇತನಕ್ಕೆ ಇಡೀ ದಿನ ದುಡಿಯುತಿದ್ದಾರೆ, ಇದರ ಮಧ್ಯೆ ಎಸ್ಡಿಎಂಸಿ ಅವರ ಕಿರುಕುಳವೂ ನಿಂತಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಐಟಿಯುಸಿಯ ಅಶ್ವಥ ನಾರಾಯಣ್ ಮಾತನಾಡಿ, ಅಕ್ಷರ ದಾಸೋಹ ಬಿಸಿಯೂಟ ನೌಕರರು ಬೆಂಕಿ ಅನಾಹುತ, ಮತ್ತಿತರ ಅವಘಡಗಳಿಂದ ಮೃತಪಟ್ಟವರಿಗೆ, ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂಬುದು ಎಐಟಿಯುಸಿಯ ಆಗ್ರಹವಾಗಿದೆ, ಅಲ್ಲದೆ ಮುಖ್ಯೋಪಾಧ್ಯಾಯ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆ ರದ್ದು ಪಡಿಸಿ ಈ ಹಿಂದಿನಂತೆ ಮುಖ್ಯೋಪಾಧ್ಯಾಯ ಮತ್ತು ಮುಖ್ಯ ಅಡುಗೆಯವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಮುಂದುವರೆಸಬೇಕು, 2022- 23ನೇ ಸಾಲಿನ ಬಜೆಟ್ನಲ್ಲಿ ಸರಕಾರ ಘೋಷಿಸಿದ್ದ ಒಂದು ಸಾವಿರ ರೂ. ವೇತನ ಹೆಚ್ಚಳವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಬಿಸಿಯೂಟ ತಯಾರಕರ ಒತ್ತಾಯವಾಗಿದೆ, ಸರಕಾರ ಕೂಡಲೇ ಇವರ ಬೇಡಿಕೆ ಈಡೇರಿಸ ಬೇಕೆಂದರು.

ಈ ಸಂಬಂಧ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶಶಿಕಾಂತ್, ಜಿಲ್ಲಾಧ್ಯಕ್ಷರಾದ ರಾಧಮ್ಮ, ಎ.ಬಿ.ಉಮಾದೇವಿ, ಗುಬ್ಬಿ ವನಜಾಕ್ಷಿ, ಶಿರಾ ಪುಷ್ಪಲತಾ, ಸಾವಿತ್ರಮ್ಮ, ಲಕ್ಷ್ಮಿದೇವಿ, ಚಿ.ನಾ.ಹಳ್ಳಿ ಲಕ್ಷ್ಮಿದೇವಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!