ಹಾಸ್ಟೆಲ್ಗಳಲ್ಲಿ ಸೌಲಭ್ಯ ಕಲ್ಪಿಸದಿದ್ರೆ ಕ್ರಮ: ಜಿಲ್ಲಾಧಿಕಾರಿ

76

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ಭೋಜನ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ಮತ್ತಿತರ ಅಗತ್ಯ ಸೌಲಭ್ಯಗಳ ಕೊರತೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯ, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಒದಗಿಸಬೇಕು, ಎಲ್ಲಾ ವಸತಿ ನಿಲಯಗಳಿಗೂ ಕಡ್ಡಾಯವಾಗಿ ಆವರಣ ಗೋಡೆ ನಿರ್ಮಿಸಬೇಕು, ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಆದ್ಯತೆ ಮೇಲೆ ಆವರಣ ಗೋಡೆ ನಿರ್ಮಿಸಬೇಕು, ವಿದ್ಯಾರ್ಥಿ ನಿಲಯಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಲು ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಡಳಿತ ಸುಧಾರಣೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಜನಸಂಪರ್ಕ ಸಭೆ ನಡೆಸಬೇಕು, ಸಭೆಯ ದಿನಾಂಕಕ್ಕೂ ಮುನ್ನ ಜನರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಂಡು ಸಭೆಯ ದಿನದಂದು ಅಹವಾಲುದಾರರಿಗೆ ಕ್ರಮವಹಿಸಿದ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ 9 ತಾಲ್ಲೂಕುಗಳಲ್ಲಿ ತೀವ್ರ ಬರಪರಿಸ್ಥಿತಿ ಎದುರಾಗಿದ್ದು, ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ರೈತರಿಗೆ ಸಲಹೆ ನೀಡಬೇಕು, ಖಾಸಗಿ ಲೇವಾದೇವಿದಾರರು ರೈತರಿಂದ ಸಾಲ ಮರುಪಾವತಿ ಮಾಡುವಂತೆ ಪೀಡಿಸಬಾರದು, ಸಾಲದ ಹೊರೆಯಿಂದ ಯಾವುದೇ ರೈತ ಆತ್ಮಹತ್ಯೆ ಮಾಡಿಕೊಳ್ಳದಂತೆ ಬರಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ಅಧಿಕಾರಿಗಳು ರೈತರಿಗೆ ಭರವಸೆ ಮೂಡಿಸಿ ಆತ್ಮಸ್ಥೈರ್ಯ ನೀಡಬೇಕೆಂದು ತಿಳಿಸಿದರು.

ಬರ ಪರಿಸ್ಥಿತಿ ಎದುರಿಸುವ ದೃಷ್ಟಿಯಿಂದ ವೈದ್ಯರು ಸೇರಿದಂತೆ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಲೇಬೇಕು ಎಂದು ತಿಳಿಸಿದರಲ್ಲದೆ ಶಾಲೆ, ವಸತಿ ನಿಲಯ, ಅಂಗನವಾಡಿಗಳ ಸ್ವಂತ ಕಟ್ಟಡ ನಿರ್ಮಿಸಲು ಒಂದು ವಾರದೊಳಗೆ ನಿವೇಶನ ಗುರುತಿಸಿ ವರದಿ ಸಲ್ಲಿಸಬೇಕು, ಅಂಗನವಾಡಿ ಕಟ್ಟಡಕ್ಕೆ ಈವರೆಗೂ ಜಾಗ ಗುರುತಿಸದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಪ್ರತೀ ಗ್ರಾಮಗಳಲ್ಲಿ ಫಾಗಿಂಗ್ ಮಾಡಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಜನರಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್. ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ರಸಗೊಬ್ಬರ ಮಾರಾಟ ಮಾಡುವವರು ಎಂಆರ್ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆಂದು ದೂರುಗಳು ಬರುತ್ತಿವೆ, ಬರಗಾಲದಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದು, ಮತ್ತಷ್ಟು ಆರ್ಥಿಕ ಹೊರೆಯಾಗಬಾರದು, ಈ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಹೆಚ್ಚಿನ ದರದಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎನ್.ರಮೇಶ್ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯ 9 ತಾಲೂಕುಗಳಲ್ಲಿ ತೀವ್ರ ಬರ ಘೋಷಣೆಯಾಗಿರುವುದರಿಂದ ರೈತರಿಗೆ ಸಾಲ ಮರುಪಾವತಿ ಮಾಡುವಂತೆ ಯಾವುದೇ ಸೊಸೈಟಿ, ರಾಷ್ಟ್ರೀಕೃತ ಬ್ಯಾಂಕುಗಳು ನೋಟೀಸ್ ನೀಡುವಂತಿಲ್ಲ ಎಂದು ತಿಳಿಸಿದರಲ್ಲದೆ ರೈತರ ಯಾವುದೇ ಬೆಳೆಯನ್ನು ಕೈಬಿಡದಂತೆ ಬೆಳೆ ಸಮೀಕ್ಷೆ ನಡೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಳೆದ ಸಾಲುಗಳಲ್ಲಿ ಮಳೆಯಿಂದ ಹಾನಿಯಾದ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡಗಳು ಈವರೆಗೂ ದರುಸ್ತಿಯಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಡಿಡಿಪಿಐ, ಸಿಡಿಪಿಓಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮಗಳು ಪೋಡಿ ಮುಕ್ತವಾಗಬೇಕು, ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಕಡಿಮೆ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ರೈತರನ್ನು ನೋಂದಣಿ ಮಾಡಿಸುವಂತೆ ಯೋಜನೆ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವ ಮುನ್ನ ಕುಡಿಯುವ ನೀರು ಹಾಗು ಗ್ಯಾಸ್ ಪೈಪು, ಚರಂಡಿ, ಮತ್ತಿತರ ಸೌಲಭ್ಯಗಳನ್ನು ಯೋಜಿತ ರೀತಿಯಲ್ಲಿ ಕಲ್ಪಿಸಿರಬೇಕು, ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಚರಂಡಿ ನೀರು ಕುಡಿಯುವ ನೀರಿನ ಪೈಪಿನೊಳಗೆ ಮಿಶ್ರಣವಾಗದಂತೆ ಪ್ರತ್ಯೇಕವಾಗಿ ಅಳವಡಿಸಬೇಕು, ಇಲ್ಲದಿದ್ದಲ್ಲಿ ಕುಡಿಯುವ ನೀರು ಕಲುಷಿತವಾಗಿ ಜನರಿಗೆ ರೋಗ-ರುಜಿನ ತಗಲುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಪ್ರಸಕ್ತ ವರ್ಷ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಜಿಲ್ಲೆಯಲ್ಲಿಯೇ ಮೇವು ಉತ್ಪಾದನೆ ಮಾಡಬೇಕು, ಹೊರಗಿನಿಂದ ಮೇವನ್ನು ಆಮದು ಮಾಡಿಕೊಳ್ಳದಂತೆ ಪಶು ಸಂಗೋಪನೆ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಸರ್ಕಾರಿ ಗೋಮಾಳದಲ್ಲಿ ಮೇವು ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ದೃಷ್ಟಿಯಿಂದ ಎಲ್ಲಾ ತಾಲ್ಲೂಕು ತಹಶೀಲ್ದಾರರು ಆಯಾ ತಾಲ್ಲೂಕಿನ ಅಧಿಕಾರಿಗಳೊಂದಿಗೆ ಟಾಸ್ಕ್ ಫೋರ್ಸ್ (ಕಾರ್ಯಪಡೆ) ಸಭೆ ನಡೆಸಿ ಕುಡಿಯುವ ನೀರು, ಜಾನುವಾರುಗಳ ಮೇವು, ಬೆಳೆ ನಷ್ಟ ಪರಿಹಾರ ವಿತರಣೆ, ನರೇಗಾ ಯೋಜನೆಯಡಿ ಕಾಮಗಾರಿ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್ ಹಾಗೂ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!