ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಒಪ್ಪಿಗೆ

75

Get real time updates directly on you device, subscribe now.


ತುಮಕೂರು: ಬಿಜೆಪಿಯೊಂದಿಗೆ ಮೈತ್ರಿ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಲು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿ,ಚರ್ಚೆ ಮಾಡಿ ಮೈತ್ರಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ.ಅಂಜನಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರ ಸ್ವಾಮಿ ಅವರ ಸೂಚನೆಯಂತೆ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ, ಎಲ್ಲರು ಕೂಡ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ, ಆದರೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟು ಕೊಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಮೈತ್ರಿ ಅನಿವಾರ್ಯ ವಾಗಿದೆ, ಇದು ನಮ್ಮ ಪಕ್ಷದ ವಿಚಾರವಾಗಿದೆ, ಆದರೆ ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎಂಬಂತಹ ಕೀಳು ಮಟ್ಟದ ಮಾತುಗಳಲ್ಲಿ ಕಾಂಗ್ರೆಸ್ ಟೀಕೆ ಮಾಡಿರುವುದು ಸರಿಯಲ್ಲ, 2018ರ ಚುನಾವಣೆಯಲ್ಲಿ ಜೆಡಿಎಸ್ನೊಂದಿಗೆ ಮೈತ್ರಿಗೆ ಬಂದಾಗ ಯಾರ ಅನ್ನ ಹಸಿದಿತ್ತು ಎಂಬುದನ್ನು ಕಾಂಗ್ರೆಸ್ ತಿಳಿಸಬೇಕು, ಅಲ್ಲದೆ ಈಗ 28 ರಾಜಕೀಯ ಪಕ್ಷಗಳೊಂದಿಗೆ ವ್ಯೂಹ ರಚನೆ ಮಾಡಿ ಹೊರಟಿದ್ದೀರಲ್ಲ, ನಿಮಗೆ ಅಧಿಕಾರದ ದಾಹವಿಲ್ಲವೇ ಎಂದು ಪ್ರಶ್ನಿಸಿದರು.

ತುಮಕೂರು ಲೋಕಸಭಾ ಕ್ಷೇತ್ರದಿಂದ ಈ ಹಿಂದೆಯೂ ದೇವೇಗೌಡರು ಸ್ಪರ್ಧಿಸಿದ್ದರು, ಈ ಭಾರಿಯೂ ದೇವೇಗೌಡರು ಸ್ಪರ್ಧಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ, ಒಂದು ವೇಳೆ ಹೆಚ್.ಡಿ.ದೇವೇಗೌಡರು ಬರದಿದ್ದರೆ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಬೇಕೆಂಬುದು ನಮ್ಮ ಅಭಿಪ್ರಾಯ, ಇಲ್ಲವೇ ಜೆಡಿಎಸ್ ಪಕ್ಷ ಯಾರಿಗೆ ಲೋಕಸಭಾ ಟಿಕೆಟ್ ನೀಡಿದರೂ ಬಿಜೆಪಿಯೊಂದಿಗೆ ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ, ಅನಿವಾರ್ಯವಾಗಿ ಬಿಜೆಪಿಗೆ ಟಿಕೆಟ್ ನೀಡದರೆ, ಆಗಲೂ ಸಹ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ತಿಳಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜಕಾರಣದಲ್ಲಿ ಯಾರು ಶಾಶ್ವತ ವೈರಿಗಳಲ್ಲ, ಮಿತ್ರರೂ ಅಲ್ಲ, ಅನಿವಾರ್ಯ ಕಾರಣಗಳಿಂದ ಮೈತ್ರಿಗೆ ಹೈಕಮಾಂಡ್ ಮುಂದಾಗಿದೆ, ತಳಮಟ್ಟದಲ್ಲಿ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಕುಳಿತು ಮಾತನಾಡಿ ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮುಂದಾಗುತ್ತೇವೆ, ಸರಕಾರ ಬೀಳಿಸಿದವರೊಂದಿಗೆ ಮೈತ್ರಿ ಎಂದು ಹೇಳುವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅಧಿಕಾರ ಅನುಭವಿಸಿದವರನ್ನು ಮತ್ತೆ ಪಕ್ಷಕ್ಕೆ ಕರೆತರುತ್ತಿರುವುದು ಯಾವ ಉದ್ದೇಶದಿಂದ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಡಿ.ನಾಗರಾಜಯ್ಯ ಮಾತನಾಡಿ, ನಮ್ಮ ಪಕ್ಷದಿಂದ ಗೌರಿಶಂಕರ್ ಸೇರಿದಂತೆ ಯಾರೊಬ್ಬರು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂಬ ನಂಬಿಕೆ ನಮ್ಮದು, ಒಂದು ವೇಳೆ ಹೋದರೆ ಏನು ಮಾಡಲು ಸಾಧ್ಯ, ಇರುವವರನ್ನೇ ಹುರಿದುಂಬಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪರಾಜಿತ ಅಭ್ಯರ್ಥಿಗಳಾದ ಗುಬ್ಬಿ ನಾಗರಾಜು, ಶಿರಾ ಉಗ್ರೇಶ್, ತಿಪಟೂರು ಶಾಂತರಾಜು, ಮುಖಂಡರಾದ ಮುದಿಮಡು ರಂಗಸ್ವಾಮಿ, ಟಿ.ಆರ್.ನಾಗರಾಜು, ವಿಜಯಗೌಡ, ರಂಗನಾಥ್, ತಾಹೀರಾಭಾನು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!