ತುಮಕೂರು: ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಡಿಸೆಂಬರ್ ಮಾಹೆಯ ಅಂತ್ಯದವರೆಗೆ ವಾರಕ್ಕೊಮ್ಮೆ ಪ್ರತೀ ಮಂಗಳವಾರ ಆಯುಷ್ಮಾನ್ ಮೇಳ ಹಮ್ಮಿಕೊಳ್ಳಲಾಗುವುದೆಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ತಿಳಿಸಿದರು.
ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದ ರಾಷ್ಟ್ರ ಮಟ್ಟದ ಆಯುಷ್ಮಾನ್ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಈ ಮೇಳದಲ್ಲಿ ಆಯುಷ್ಮಾನ್ ಕಾರ್ಡುಗಳನ್ನು ವಿತರಿಸುವ ಸಲುವಾಗಿ ಜನ ಸಾಮಾನ್ಯರ ಹೆಸರನ್ನು ನೋಂದಣಿ ಮಾಡಲಾಗುವುದು, ಈವರೆಗೂ ಆಯುಷ್ಮಾನ್ ಕಾರ್ಡ್ಗಾಗಿ ನೋಂದಾಯಿಸಿಕೊಳ್ಳದಿರುವ ಅರ್ಹ ಫಲಾನುಭವಿಗಳು ಪಿಎಂಜೆಎಐ ಯೋಜನೆಯಡಿ ನೋಂದಣಿ ಮಾಡಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್.ಮಂಜುನಾಥ್ ಮಾತನಾಡಿ ಆರೋಗ್ಯ ಸೇವೆಯನ್ನು ಜನಮುಖಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಾರ್ವತ್ರಿಕ ಆರೋಗ್ಯ ಪಾಲನೆಯ ಭಾಗವಾಗಿ ಪ್ರಧಾನ ಮಂತ್ರಿ-ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಪ್ರಧಾನ ಮಂತ್ರಿ- ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ- ಡಿಜಿಟಲ್ ಮಿಷನ್ ಮತ್ತು ಪ್ರಧಾನ ಮಂತ್ರಿ- ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ಗಳ ಉಪ ಕ್ರಮಗಳನ್ನು ಜಾರಿಗೊಳಿಸಿದ್ದು, ಈ ಉಪಕ್ರಮಗಳು ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸೇವೆಗಳ ಪೂರೈಕೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ಮಾಹಿತಿ ನೀಡಿದರಲ್ಲದೆ ಆಯುಷ್ಮಾನ್ ಮೇಳದಲ್ಲಿ ಜನ ಸಮಾನ್ಯರಿಗೆ ರಾಷ್ಟ್ರೀಯ ಆರೋಗ್ಯ ಯೋಜನೆಗಳಾದ ಆಯುಷ್ಮಾನ್ ಕಾರ್ಡ್ ಮತ್ತು ಆಭಾ ಐಡಿ ವಿತರಣೆ, ಅಸಾಂಕ್ರಾಮಿಕ ರೋಗಗಳು, ಲಸಿಕಾ ಕಾರ್ಯಕ್ರಮ, ಕ್ಷಯ ರೋಗ, ರಕ್ತಹೀನತೆ, ಸ್ವಚ್ಛತಾ ಆಂದೋಲನ, ರಕ್ತದಾನ, ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ವೀಣಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವಾಸಿ ವೈದ್ಯಕೀಯ ಅಧಿಕಾರಿ ಡಾ.ಚೇತನ್, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಮೋಹನ್ದಾಸ್.ಆರ್.ವಿ, ಜಿಲ್ಲಾ ಮಲೇರಿಯಾ ನಿಯಂತ್ರಾಣಾಧಿಕಾರಿ ಡಾ.ಚಂದ್ರಶೇಖರ್ ಹಾಗೂ ಜಿಲ್ಲಾ ಶುಶ್ರೂಷಕರು ತರಬೇತಿ ಕೇಂದ್ರದ ವಿದ್ಯಾರ್ಥಿಗಳು, ವಿವಿಧ ಅಧಿಕಾರಿ ಮತ್ತು ಸಿಬ್ಬಂದಿ ಹಾಜದ್ದರು.
Comments are closed.