ತುಮಕೂರು: ಇತ್ತೀಚೆಗೆ ನವದೆಹಲಿಯಲ್ಲಿ ಮುಕ್ತಾಯಗೊಂಡ ಜಿ.20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾರತದ ಕೃಷಿ ಸೇರಿದಂತೆ ಹಲವಾರು ವಿಚಾರಗಳಲ್ಲಿ ಕೆಲವು ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ ಬೆಯರ್ಸ್ ಮತ್ತು ಮಾನ್ಸಂಟೋ ಕಂಪನಿಯೊಂದಿಗೆ ಇಂಡಿಯನ್ ಕೌನ್ಸಿಲ್ ಅಫ್ ಅಗ್ರಿಕಲ್ಚರ್ ರಿಸರ್ಚ್ (ಐಸಿಎಆರ್) ಮಾಡಿಕೊಂಡಿರುವ ಒಪ್ಪಂದ ಭವಿಷ್ಯದಲ್ಲಿ ಭಾರತೀಯ ಕೃಷಿಕರ ಮೇಲಾಗುವ ಪರಿಣಾಮಗಳ ಕುರಿತು ಬಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಬೆಯರ್ಸ್ ಮತ್ತು ಮಾನ್ಸೆಂಟೋ ಸಂಸ್ಥೆಗಳು, ಐಸಿಎಆರ್ ಸಂಸ್ಥೆಯೊಂದಿಗೆ ಸೇರಿ ದೇಶದ ಕೃಷಿಕರಿಗೆ ನೈಸರ್ಗಿಕ ಮತ್ತು ಪರಿಸರ ವಿಜ್ಞಾನಿಗಳೊಂದಿಗೆ ನಿಕಟ ಸಂಪರ್ಕ, ಪುನರುತ್ಪಾದಕ ಕೃಷಿ, ಸುಸ್ಥಿರ ಕೃಷಿ, ಹವಾಮಾನ ಸ್ಥಿತಿ ಸ್ಥಾಪಕತ್ವ, ಪೌಷ್ಠಿಕಾಂಶ ಭದ್ರತೆ, ಸಣ್ಣ ರೈತರ ಸಬಲೀಕರಣ, ಕಾರ್ಬನ್ ಕ್ರೆಡಿಲ್ ಮಾರುಕಟ್ಟೆಗಳು, ಸಾಮರ್ಥ್ಯ ವೃದ್ಧಿಯ ಜೊತೆಗೆ ರೂಪಾಂತರಿ ತಳಿಗಳ ಪರಿಚಯ ಕಡೆಗೂ ಗಮನಹರಿಸುವ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಗಿದ್ದು, ಇದು ಭಾರತೀಯ ರೈತರಿಗೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂಬುದು ಕೃಷಿ ತಜ್ಞ ಅಭಿಪ್ರಾಯವಾಗಿದೆ.
ಬೆಯರ್ಸ್ ಮತ್ತು ಮಾನ್ಸಂಟೋ ಕಂಪನಿಗಳು ಕುಲಾಂತರಿ ತಳಿ, ಕೀಟನಾಶಕ, ಕೃಷಿ ಸಂಬಂಧಿತ ರಸಾಯನಿಕಗಳ ತಯಾರಿಕೆಯಲ್ಲಿ ಸಾಕಷ್ಟು ಹೆಸರು ಮಾಡಿವೆ, ಇಂತಹ ಕಂಪನಿಗಳ ಜೊತೆ ಸಹಜ ಮತ್ತು ಸಾವಯವ ಕೃಷಿ ಪದ್ಧತಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿರುವುದು ಕುರಿಗಳ ಹಿಂಡು ಕಾಯಲು ತೋಳವನ್ನು ನೇಮಿಸಿದಂತೆ ಎಂಬಂತಾಗಿದೆ, ತಮ್ಮ ಕಂಪನಿಗಳ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಸರಕಾರಿ ಸಂಸ್ಥೆಯಾದ ಐಸಿಎಆರ್ನ್ನು ಮುಂದಿಟ್ಟು ಕೊಂಡು ರಾಜಾರೋಷವಾಗಿ ಎಂಟ್ರಿ ಪಡೆಯುತ್ತಿದೆ ಎಂಬುದು ಕೃಷಿಕರ ಅಭಿಪ್ರಾಯವಾಗಿದೆ.
ಈಗಾಗಲೇ ಆಹಾರದ ಸ್ವಾವಲಂಭನೆ, ಹಸಿರು ಕ್ರಾಂತಿ ಹೆಸರಿನಲ್ಲಿ ಈಗಾಗಲೇ ಅತಿಯಾದ ರಸಗೊಬ್ಬರ, ಕುಲಾಂತರಿ ತಳಿ ಬೀಜಗಳು, ರಸಾಯನಿಕಗಳನ್ನು ಬಳಕೆ ಮಾಡಿ ಭೂಮಿಯ ಫಲವತ್ತತೆ ಹಾಳು ಮಾಡಿರುವುದಲ್ಲದೆ, ಆಧುನಿಕ ಬೇಸಾಯ ಪದ್ಧತಿಯ ಆಹಾರೋತ್ಪನ್ನಗಳನ್ನು ಸೇವಿಸಿದ ಮನುಷ್ಯನಲ್ಲಿಯೂ ನಾನಾ ರೀತಿ ರೋಗ ಕಾಣಿಸಿಕೊಳ್ಳುತ್ತಿವೆ, ಇದರಿಂದ ಹೊರ ಬರಲು ಭಾರತೀಯ ರೈತರು ಸಹಜ, ಸಾವಯವ ಮತ್ತು ಪಾರಂಪರಿಕ ಕೃಷಿ ಪದ್ಧತಿಗಳ ಕಡೆಗೆ ನಿಧಾನವಾಗಿ ಮರಳುವ ಮನಸ್ಸು ಮಾಡುತ್ತಿರುವ ಕಾಲದಲ್ಲಿ ಇಂತಹ ಒಪ್ಪಂದ ರೈತರನ್ನು ಬಾಣಲೆಯಿಂದ ನೇರವಾಗಿ ಬೆಂಕಿಗೆ ಬಿದ್ದಂತಹ ಪರಿಸ್ಥಿತಿ ತಂದೊಡ್ಡಲಿದೆ ಎಂಬುದನ್ನು ರೈತರು, ಜನಪ್ರತಿನಿಧಿಗಳು, ರೈತ ಸಂಘಟನೆಗಳು ಅರಿತು ಆರಂಭದಲ್ಲಿಯೇ ಇದನ್ನು ವಿರೋಧಿಸದಿದ್ದರೆ, ಮುಂದೊಂದು ದಿನ ಬೆಯರ್ಸ್ ಮತ್ತು ಮಾನ್ಸಂಟೋ ಕಂಪನಿಗಳು ನೀಡುವ ಕಲಾಂತರಿ ತಳಿಗಳು, ಯಾಂತ್ರಿಕರಣದ ಅತಿಯಾದ ಬಳಕೆಯಿಂದ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿ ಅದರಿಂದ ಹೊರಬರ ಲಾಗದೆ ಆತ್ಮಹತ್ಯೆ ದಾರಿ ತುಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ಸಹಜ ಬೇಸಾಯದಲ್ಲಿ ತೊಡಗಿರುವ ಸಂಸ್ಥೆಗಳು ಎಚ್ಚರಿಕೆ ನೀಡಿವೆ,
ಒಂದೆಡೆ ಹವಾಮಾನ ವೈಪರಿತ್ಯದಿಂದ ಕೃಷಿ ಏರುಪೇರಾಗಿ, ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳದ ಸ್ಥಿತಿಗೆ ರೈತ ತಲುಪಿದ್ದಾನೆ, ಒಂದು ವೇಳೆ ಒಳ್ಳೆಯ ಬೆಳೆ ಬಂದರೆ ಸಮರ್ಪಕ ಮಾರುಕಟ್ಟೆ, ಬೆಲೆಯಲ್ಲಿ ಸ್ಥಿರತೆ ಇಲ್ಲದೆ ನಷ್ಟಕ್ಕೆ ಒಳಗಾಗುತ್ತಿದ್ದಾನೆ, ಬಹುಬೆಳೆ (ಮಿಶ್ರಬೇಸಾಯ) ಪದ್ಧತಿ ಮಾಯವಾಗಿ ಸಾಕಷ್ಟು ನಷ್ಟಕ್ಕೆ ಒಳಗಾಗುತ್ತಿದ್ದಾನೆ, ಎಣ್ಣೆ ಕಾಳುಗಳ ಉತ್ಪಾದನೆ ಕುಸಿದಿದೆ ಎಂಬ ನೆಪ ಮಾಡಿ ರೂಪಾಂತರಿ ಸಾಸಿವೆ ಪರಿಚಯಿಸಲು ಕಂಪನಿಗಳು ತುದಿಗಾಲಲ್ಲಿ ನಿಂತಿವೆ, ಕುಲಾಂತರಿ ತಳಿಗಳ ಬಳಕೆ ಮತ್ತು ಅವುಗಳಿಗೆ ಬರುವ ರೋಗ ತಡೆಯಲು ಅತಿಯಾದ ರಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುವುದಲ್ಲದೆ ಸಹಜ ರೋಗ ನಿರೋಧಕ ಶಕ್ತಿ ಕಳೆದುಕೊಂಡು ಭೂಮಿ ಬಂಜೆಯಾಗುವ ಕಾಲ ದೂರವಿಲ್ಲ.
ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ತುಮಕೂರಿನ ಗಾಂಧಿ ಸಹಜ ಬೇಸಾಯ ಆಶ್ರಮ ರೈತರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಗಾಂಧೀ ಸಹಜ ಬೇಸಾಯ ಆಶ್ರಮ, ದೊಡ್ಡ ಹೊಸೂರಿನಿಂದ ತುಮಕೂರಿನ ಜಿಲ್ಲಾ ಪಂಚಾಯಿತಿ ಕಚೇರಿಯ ವರೆಗೆ ಪಾದಯಾತ್ರೆ ಜೊತೆಗೆ ರೈತರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸ ಲಾಗಿದೆ, ಅಲ್ಲದೆ ರೈತರಲ್ಲಿ ಸದರಿ ಒಪ್ಪಂದದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಸಂವಾದ, ಚರ್ಚಾಗೋಷ್ಠಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಗಾಂಧಿ ಸಹಜ ಬೇಸಾಯ ಆಶ್ರಮದ ಸಿ.ಯತಿರಾಜು ತಿಳಿಸಿದ್ದಾರೆ.
Comments are closed.