ತುಮಕೂರು: ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಳಸ ಪ್ರಾಯವಾಗಿದೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದರು.
ನಗರದ ವಿನಾಯಕ ನಗರದಲ್ಲಿರುವ ಶ್ರೀಸಿದ್ದಿ ವಿನಾಯಕ ಸೇವಾ ಮಂಡಳಿ ಆಯೋಜಿಸಿದ್ದ 47ನೇ ವರ್ಷದ ಗಣೇಶಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ 47 ವರ್ಷಗಳಿಂದಲೂ ಈ ಜಾಗದಲ್ಲಿ ಹಿರಿಯರಾದ ಜಗದೀಶ್ ಆರಾಧ್ಯರು ಸೇರಿದಂತೆ ಅನೇಕ ಹಿರಿಯರು ವಿನಾಯಕ ಪ್ರತಿಷ್ಠಾಪನೆ ಮಾಡುತ್ತಾ ಸಾಂಸ್ಕೃತಿಕವಾಗಿ ಮತ್ತು ಶ್ರದ್ದಾಪೂರ್ವಕವಾಗಿ ನಮ್ಮ ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ, ಅದೇ ರೀತಿಯಲ್ಲಿ ನೂತನ ಆಡಳಿತ ಮಂಡಳಿ ಮುನ್ನೆಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗಣೇಶ ಸಂಘಟನೆಗೆ ಪ್ರಧಾನ ದೇವತೆ, ಇದನ್ನೇ ಅರಿತೇ ತಿಲಕರು ಸ್ವಾತಂತ್ರ ಹೋರಾಟದಲ್ಲಿ ಜನರನ್ನು ತೊಡಗಿಸಲು ಸಾಮೂಹಿಕ ಗಣೇಶ ಉತ್ಸವ ಆರಂಭಿಸಿದರು, ಅದನ್ನು ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ, ಘರ್ ಘರ್ ಮೇ ಗಣಪತಿ ಹೋಗಿ ಇಂದು ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ, ಇದು ಒಳ್ಳೆಯ ಬೆಳೆವಣಿಗೆ, ಯುವ ಜನತೆ ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು ಎಂದರು.
ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಹೆಚ್.ಆರ್.ನಾಗೇಶ್ ಮಾತನಾಡಿ,1977ರಿಂದ ಆರಂಭವಾದ ಈ ಸಿದ್ದಿ ವಿನಾಯಕ ಸೇವಾ ಮಂಡಳಿ ಶ್ರೀಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಆರಂಭವಾದ ಗಣೇಶಮೂರ್ತಿ ಪ್ರತಿಷ್ಠಾಪನೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಿದೆ, ಸುಮಾರು ಒಂದು ತಿಂಗಳ ಕಾಲ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ದೇಶದ ಹಿರಿಯ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ನೀಡಿದ್ದಾರೆ, ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಮುದಾಯ ಭವನವನ್ನು ಶುಭ ಸಮಾರಂಭಗಳಿಗೆ ಅತಿ ಕಡಿಮೆ ಬಾಡಿಗೆಗೆ ನೀಡುತ್ತಿದ್ದೇವೆ, ಈ ಬಾರಿ ವಿಶೇಷವಾಗಿ ಸಾಮೂಹಿಕ ಬಾಗಿನ (ಮಡಿಲು ಅಕ್ಕಿ) ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ, ಎಲ್ಲರೂ ಸಹಕಾರ ನೀಡಬೇಕೆಂದರು.
ರೆಡ್ಕ್ರಾಸ್ನ ರಾಷ್ಟ್ರೀಯ ಸಮಿತಿ ಪ್ರತಿನಿಧಿ ಎಸ್.ನಾಗಣ್ಣ ಮಾತನಾಡಿ, 1972ರಲ್ಲಿ ಮಂಡಿಪೇಟೆಯಲ್ಲಿ ಪ್ರಾರಂಭವಾದ ಸಿದ್ದಿವಿನಾಯಕ ಸೇವಾ ಸಮಿತಿ ಸರಕಾರ ನೀಡಿದ ಈ ಜಾಗದಲ್ಲಿ 1977ರಿಂದ ಆರಂಭಗೊಂಡಿತ್ತು, ಅಂದು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶಿವಕುಮಾರ ಸ್ವಾಮೀಜಿಗಳು ಅಡಿಗಲ್ಲು ಹಾಕಿ ಆಶೀರ್ವದಿಸಿದ್ದರು, ಅವರು ಅಡಿಗಲ್ಲು ಹಾಕಿದ ಯಾವುದೇ ಕಾರ್ಯಕ್ರಮಗಳು ಅರ್ಧಕ್ಕೆ ನಿಂತಿಲ್ಲ, ಬೆಳೆಯುತ್ತಲೇ ಇವೆ ಎಂದರು.
ಪೌರಾಣಿಕ ಹಿನ್ನೆಲೆಯ ಭಕ್ತ ಮಾರ್ಕಂಡೇಯ ರೂಪಕ ಉತ್ತಮವಾಗಿ ಮೂಡಿಬಂದಿದೆ, ವಿಘ್ನೇಶ್ವರ ಸ್ವರ್ವವ್ಯಾಪ್ತಿ ದೇವರು, ಇಡೀ ವಿಶ್ವದಲ್ಲಿಯೇ ಗಣೇಶನ ದೇವಾಲಯಗಳನ್ನು ಕಾಣಬಹುದಾಗಿದೆ, ಸುಖಿ ಕುಟುಂಬದ ಹೆಸರಿನಲ್ಲಿ ಕೌಟುಂಬ ಸಂಬಂಧಗಳು ಜಾಳಾಗುತ್ತಿರುವ ಇಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಆಚರಿಸುವ ಗಣೇಶ ಉತ್ಸವ ಎಲ್ಲರಿಗೂ ಮಾದರಿಯಾಗಲಿ ಎಂದರು.
ಆರಂಭದಲ್ಲಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಶುಭ ಹಾರೈಸಿದರು.
ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್, ಎಸ್.ಪಿ.ಚಿದಾನಂದ, ಕೋರಿ ಮಂಜಣ್ಣ, ರೇಣುಕಾ ಪರಮೇಶ್, ಗೋವಿಂದಪ್ಪ, ಸಿದ್ದಿವಿನಾಯಕ ಸೇವಾ ಕಾರ್ಯದರ್ಶಿ ರಾಘವೇಂದ್ರ.ಕೆ.ಎಸ್, ಸಹ ಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಯ್ಯ.ಟಿ.ಎಸ್, ಖಜಾಂಚಿ ಪ್ರಭು ಎಸ್.ಜಿ, ಟಿ.ಹೆಚ್.ಪ್ರಸನ್ನಕುಮಾರ್, ಕೆ.ನರಸಿಂಹಮೂರ್ತಿ, ಟಿ.ಎಂ.ಲಿಂಗಪ್ಪ, ಜಿ.ಎಸ್.ಸಿದ್ದರಾಜು, ಆರ್.ಎಲ್.ರಮೇಶ್ಬಾಬು, ಅನುಸೂಯಮ್ಮ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.
Comments are closed.