ಕುಣಿಗಲ್: ಇನ್ಫೋಸಿಸ್ ಸಂಸ್ಥೆಯ ಸಿಎಸ್ಆರ್ ಯೋಜನೆ ಅಡಿಯಲ್ಲಿ ಸಂಸದ ಡಿ.ಕೆ.ಸುರೇಶ್ ಸಹಕಾರದಿಂದ ಕುಣಿಗಲ್ ಪಟ್ಟಣದಲ್ಲಿ 60 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಡಾ. ರಂಗನಾಥ್ ತಿಳಿಸಿದರು.
ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ತಾಯಿ ಮಕ್ಕಳ ಆಸ್ಪತ್ರೆಯ ಬಗ್ಗೆ ಹಲವಾರು ದಿನಗಳಿಂದ ಬೇಡಿಕೆ ಇದ್ದು, ಚುನಾವಣೆ ಪೂರ್ವದಲ್ಲಿ ತಾವು ಜನತೆಗೆ ಭರವಸೆ ನೀಡಿದ್ದಾಗಿ ತಿಳಿಸಿ, ಸಂಸದ ಡಿ.ಕೆ.ಸುರೇಶ್ ಸಹಕಾರದಿಂದ ಇನ್ಫೋಸಿಸ್ ಸಂಸ್ಥೆಯವರು ಸಿಎಸ್ಆರ್ ಯೋಜನೆ ಅಡಿಯಲ್ಲಿ 100 ಹಾಸಿಗೆಯ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆಗೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಖಾಲಿ ಇರುವ ಒಂದು ಎಕರೆ ಜಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಸೆಪ್ಟೆಂಬರ್ 28ರ ಗುರುವಾರ ಶಂಕುಸ್ಥಾಪನೆ ನೆರೆವೇರಿಸಲಿದ್ದಾರೆ, 60 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಮೂಲಭೂತ ಸೌಕರ್ಯ ಕೊಠಡಿಗಳು, ಮೂರು ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಿಭಾಗ ನಿರ್ಮಾಣವಾಗಲಿದೆ, ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ನುರಿತ ತಜ್ಞರ ನಿಯೋಜನೆಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ, ಡಿಕೆಎಸ್ ಚಾರಿಟಬಲ್ ಟ್ರ್ಟ್ ವತಿಯಿಂದಲೂ ನುರಿತ ಸಿಬ್ಬಂದಿ ನಿಯೋಜನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕರು ಹೇಳಿದರು.
ತಾಲೂಕಿನಲ್ಲಿ ಈ ಆಸ್ಪತ್ರೆ ನಿರ್ಮಾಣದಿಂದಾಗಿ ಬಹುತೇಕ ತಾಯಿ ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ಸಿಗಲಿದೆ ಹಾಗೂ ತಾಲೂಕಿನ ನೆರೆಹೊರೆಯ ಜನರಿಗೂ ಅನುಕೂಲವಾಗಲಿದೆ ಎಂದ ಶಾಸಕರು ಸೆಪ್ಟೆಂಬರ್ 28 ರಂದೆ ತಾಲೂಕಿನಲ್ಲಿ ಬಾಕಿ ಉಳಿದಿರುವ ಜಲಜೀವನ್ ಮಿಷನ್ನ 30 ಕೋಟಿ ರೂ. ವೆಚ್ಚದ ಕಾಮಗಾರಿಗೂ ಸಹ ಗುದ್ದಲಿ ಪೂಜೆ ಸಂಸದ ಡಿ.ಕೆ.ಸುರೇಶ್ ನೆರವೇರಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣ ಗೌಡ, ಮಾಜಿ ಅಧ್ಯಕ್ಷ ಶಂಕರ್, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ, ಮುಖಂಡರಾದ ಪಾಪಣ್ಣ, ಗಂಗಾಧರ ಗೌಡ, ಮೋಹನ್ ಕುಮಾರ್, ರೆಹಮಾನ್ ಶರೀಫ್, ಆಝಮ್, ಸದಾಕತ್, ಪುರಸಭೆ ಸದಸ್ಯರಾದ ಶ್ರೀನಿವಾಸ್, ದೇವರಾಜ್ ಇತರರು ಇದ್ದರು.
Comments are closed.