ಪೌರ ಕಾರ್ಮಿಕರ ಸೇವೆ ಶ್ಲಾಘನೀಯ

200

Get real time updates directly on you device, subscribe now.


ಕುಣಿಗಲ್: ನಗರ ನೈರ್ಮಲ್ಯ ನಿರ್ವಹಣೆಯಲ್ಲಿ ತಮ್ಮ ಆರೋಗ್ಯ ಲೆಕ್ಕಿಸದೆ ಅಹರ್ನಿಶಿ ಸೇವೆ ಸಲ್ಲಿಸುವ ಪೌರ ಕಾರ್ಮಿಕರು, ಗಡಿಕಾವಲು ಮಾಡಿ ದೇಶ ರಕ್ಷಣೆ ಮಾಡುವ ಸೈನಿಕರಿಗೆ ಸಮ ಎಂದು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಪುರಸಭೆ ಸದಸ್ಯ ಶ್ರೀನಿವಾಸ ಹೇಳಿದರು.

ಶನಿವಾರ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಪೌರ ಕಾರ್ಮಿಕರ ಸೇವೆ ನಿಜಕ್ಕೂ ಶ್ಲಾಘನೀಯ, ಅವರ ಸೇವೆಯಿಂದಾಗಿ ಇಂದು ನಗರದ ನಾಗರಿಕರು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗಿದೆ, ವಿದ್ಯಾವಂತ ನಾಗರಿಕರು ಘನ ತ್ಯಾಜ್ಯ ವಿಲೇವಾರಿಯಲ್ಲಿ ಸ್ವಲ್ಪ ಎಚ್ಚರ ವಹಿಸಿದರೂ ಪೌರ ಕಾರ್ಮಿಕರ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಿ ನೀಡಬಹುದು, ಕನಿಷ್ಟ ಸವಲತ್ತಿನಲ್ಲಿ ಗರಿಷ್ಟ ಸೇವೆ ನೀಡುವ ಪೌರ ಕಾರ್ಮಿಕರ ಪೈಕಿ ಇನ್ನು ಕೆಲವರನ್ನು ವ್ಯವಸ್ಥಿತವಾಗಿ ದುಡಿಸಿಕೊಳ್ಳುವ ಸರ್ಕಾರದ ಕ್ರಮದ ಬಗ್ಗೆ ಕಾರ್ಮಿಕರು ಜಾಗರೂಕರಾಗಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ, ಸದಸ್ಯ ರಂಗಸ್ವಾಮಿ ಮಾತನಾಡಿ, ಸರ್ಕಾರದಿಂದ ನೇರವೇತನ ಪಾವತಿ ಮಾಡುತ್ತಿದ್ದರೂ ಇಂದಿಗೂ ಕೆಲ ಕಾರ್ಮಿಕರು ಬದ್ಧತೆಯಿಂದ ಕೆಲಸ ಮಾಡದೆ ಇರುವುದು ಸರ್ಕಾರಕ್ಕೆ ಸೇರಿದಂತೆ ಜನತೆಗೆ ಮಾಡಿದ ವಂಚನೆಯಾಗುತ್ತದೆ, ಆದ್ದರಿಂದ ಸರ್ಕಾರ ಪೌರ ಕಾರ್ಮಿಕರನ್ನು ಗುರುತಿಸಿ ನೀಡಿರುವ ಸವಲತ್ತಿಗೆ ಬದ್ಧತೆಯಿಂದ ಕೆಲಸ ಮಾಡಬೇಕೆಂದರು. ಮುಖ್ಯಧಿಕಾರಿ ಶಿವಪ್ರಸಾದ್ ಮಾತನಾಡಿ, ಪೌರ ಕಾರ್ಮಿಕರ ಸೇವೆ ಉತ್ತಮವಾಗಿದ್ದರೆ ಇಡೀ ಪುರಸಭೆ ಸೇರಿದಂತೆ ಶಾಸಕರಿಗೆ, ಸರ್ಕಾರಕ್ಕೂ ಒಳ್ಳೆ ಹೆಸರು ಬರುತ್ತದೆ ಎಂಬುದ ಮರೆಯಬಾರದು, ಒಂದು ವರ್ಷದೊಳಗೆ ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ನಾಗೇಂದ್ರ, ಸದಸ್ಯರಾದ ರಾಮು, ಮಂಜುಳ ಮಾತನಾಡಿದರು, ಸದಸ್ಯರಾದ ದೇವರಾಜ, ಶಬನಾ ತಬಸ್ಸುಮ್, ದೇವರಾಜ, ಪರಿಸರ ಅಭಿಯಂತರ ಚಂದ್ರಶೇಖರ, ಕಂದಾಯಾಧಿಕಾರಿ ಮುನಿಯಪ್ಪ, ವ್ಯವಸ್ಥಾಪಕಿ ಗೀತಾ ಸೇರಿದಂತೆ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದು ಪೌರ ಕಾರ್ಮಿಕರಿಗೆ ವಿಶೇಷ ಭತ್ಯೆಜೊತೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪುರಸಭೆ ವಾಹನ ಚಾಲಕರೊಬ್ಬರು ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲೂ ಪೌರ ಕಾರ್ಮಿಕರ ನಿಂದಿಸುವುದು ಸರಿಯಲ್ಲ ಎಂದು ಬಹಿರಂಗವಾಗಿ ವೇದಿಕೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!