ವನ್ಯಜೀವ ಸಂರಕ್ಷಣೆ ನಮ್ಮೆಲ್ಲರ ಹೊಣೆ

ವನ್ಯ ಜೀವಿ ಸಪ್ತಾಹದ ಅಂಗವಾಗಿ ಚಿತ್ರ ಬಿಡಿಸಿದ ನೂರಾರು ವಿದ್ಯಾರ್ಥಿಗಳು

127

Get real time updates directly on you device, subscribe now.


ತುಮಕೂರು: ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು ವಿಜ್ಞಾನ ಕೇಂದ್ರ ಮತ್ತು ಪರಿಸರಾಸಕ್ತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವನ್ಯ ಜೀವಿ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ನಗರದ ಎಂಪ್ರೆಸ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಅನುಪಮ ಅವರು ಚಿತ್ರ ಬಿಡಿಸುವ ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಮ್ಮ ಪರಿಸರದಲ್ಲಿರುವ ಜೀವ ವೈವಿಧ್ಯತೆಯನ್ನು ಜನರಿಗೆ, ಅದರಲ್ಲಿಯೂ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ, ನಗರದ ನಲವತ್ತಕ್ಕೂ ಹೆಚ್ಚು ಶಾಲೆಗಳ 500ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ, ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.

ಭಾರತದಲ್ಲಿ ಭೌಗೋಳಿಕವಾಗಿ ವೈವಿಧ್ಯಮಯ ಪರಿಸರ ಮತ್ತು ಜೀವರಾಶಿ ಕಾಣಬಹುದು, ಜನರಿಗೆ ವನ್ಯಜೀವಿಗಳ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ, ಈ ವರ್ಷ ಸೆಪ್ಟಂಬರ್ 23 ರಿಂದ 28ರ ವರೆಗೆ ನಮ್ಮ ಜಿಲ್ಲೆಯಲ್ಲಿ ಸಪ್ತಾಹ ಕಾರ್ಯಕ್ರಮವಿದೆ, ಸೆಪ್ಟಂಬರ್ 27ರಂದು ಶಾಲಾ ಶಿಕ್ಷಕರಿಗೆ ವನ್ಯಜೀವಿಗಳು ಮತ್ತು ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಾಗಾರ ಆಯೋಜಿಸಲಾಗಿದೆ, ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಇರುವ ಇಕೋ ಕ್ಲಬ್ಗಳಿಗೆ ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವಿದೆ, ಅಲ್ಲದೆ ವೇದಿಕೆ ಕಾರ್ಯಕ್ರಮ ಸಹ ಆಯೋಜಿಸಲಾಗುತ್ತಿದೆ ಎಂದು ಡಿಸಿಎಫ್ ಅನುಪಮ ತಿಳಿಸಿದರು.

ಡಿಡಿಪಿಐ ರಂಗಧಾಮಯ್ಯ ಮಾತನಾಡಿ, ಯಾವುದೇ ಸ್ಪರ್ಧೆಗಳಾಗಲಿ ಭಾಗವಹಿಸುವುದು ಮುಖ್ಯ, ಮಕ್ಕಳಿಗೆ ವನ್ಯ ಜೀವಿಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ, ಅರಣ್ಯ ಇಲಾಖೆಯ ಈ ಕಾರ್ಯಕ್ರಮ ಮಕ್ಕಳಿಗೆ ಜೀವ ವೈವಿಧ್ಯತೆ ಅರಿಯಲು ಸಹಕಾರಿಯಾಗಿದೆ ಎಂದರು.

ಚಿತ್ರ ಬಿಡಿಸುವ ಮೂಲಕ ಮಕ್ಕಳಿಗೆ ವನ್ಯಜೀವಿಗಳ ಪರಿಚಯಿಸಿದ ರವೀಂದ್ರ ಕಲಾ ನೀಕೇತನದ ಡಾ.ಸಿ.ಡಿ.ಹರಸೂರ್, ಮಕ್ಕಳು ಅರಣ್ಯ ಇಲಾಖೆ, ವನ್ಯಜೀವಿ ಸಪ್ತಾಹದ ಅಂಗವಾಗಿ ನೀಡಿರುವ ವನ್ಯಜೀವ ಸಂರಕ್ಷಣೆ- ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯ ಅರ್ಥಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಚಿತ್ರ ಬಿಡಿಸಬೇಕು, ವಿಷಯದ ಹೊರತಾಗಿ ಎಷ್ಟೇ ಸುಂದರವಾಗಿ ಚಿತ್ರ ಬಿಡಿಸಿದರೂ ಪ್ರಯೋಜನವಿಲ್ಲ, ಹಾಗಾಗಿ ಎಲ್ಲರೂ ವಿಷಯ ಮನನ ಮಾಡಿಕೊಂಡು ಚಿತ್ರ ರಚಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ಕೊರಟಗೆರೆ ಉಪ ವಿಭಾಗದ ಸುರೇಶ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರಬ್ಬಾನಿ, ಎಂಪ್ರೆಸ್ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಮನೋಹರ್, ಉಪನ್ಯಾಸಕರಾದ ಉಮೇಶ್, ಇಸ್ಮಾಯಿಲ್, ರಾಮಣ್ಣ, ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಚಿತ್ರ ಬಿಡಿಸಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಚಿತ್ರ ಬಿಡಿಸಿ ಸಂಭ್ರಮಿಸಿದರು, ಕೈಯಲ್ಲಿ ಕುಂಚವಿಡಿದು ಬಿಳಿ ಹಾಳೆ ಮೇಲೆ ಚಿತ್ರಗಳಿಗೆ ರೂಪ ಕೊಡುತ್ತಿದ್ದ ಮಕ್ಕಳ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

Get real time updates directly on you device, subscribe now.

Comments are closed.

error: Content is protected !!