ಮಧುಗಿರಿ : ಕುಂಚಿಟಿಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಪಟ್ಟಣದ ಮಹಿಳಾ ಸಮಾಜದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾಜದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧುಗಿರಿ ಮತ್ತು ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕುಂಚಿಟಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದ್ದು, ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಹಿಂದುಳಿದ ವರ್ಗಕ್ಕೆ ಸೇರಿಸಲು ಈಗಾಗಲೇ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಾಲೂಕಿನ ಮಹಿಳಾ ಸಮಾಜ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅತೀ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಿದೆ, ನೂರು ವರ್ಷದ ಹಿಂದೆ ಆರಂಭವಾದ ಮಹಿಳಾ ಸಮಾಜ ಇಲ್ಲಿಯ ವರೆಗೂ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ, ನಮ್ಮ ಇತಿಹಾಸ ತಿಳಿದು ಇತಿಹಾಸ ಸೃಷ್ಟಿಸುವ ಪ್ರಯತ್ನ ಮಾಡಬೇಕು, ಹೊಸ ಪೀಳಿಗೆಯನ್ನು ನಿಮ್ಮ ಜೊತೆ ಸೇರಿಸಿಕೊಂಡು ಅವರಿಗೆ ನಿಮ್ಮ ಅನುಭವ ದಾರೆ ಎರೆದು ಸಮಾಜದ ಸತ್ಸಂಪ್ರದಾಯ ಮುಂದುವರೆಸಿಕೊಂಡು ಹೋಗುವ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದ ಅವರು ಮಹಿಳಾ ಸಮಾಜ ಇನ್ನೂ ನೂರು ವರ್ಷದ ಇತಿಹಾಸ ಸೃಷ್ಟಿಸಲಿ ಎಂದು ಹಾರೈಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ವೈಶ್ಯ ಸಮುದಾಯದವರು, ಇವರು ಸಂಖ್ಯೆಯಲ್ಲಿ ಕಡಿಮೆ ಇರಬಹುದು, ಆದರೆ ಕೊಡುಗೈ ದಾನಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವರು ಎಲ್ಲಾ ಮಕ್ಕಳಿಗೂ ಬುದ್ಧಿಶಕ್ತಿ ನೀಡಿದ್ದು, ಅವರಲ್ಲಿರುವ ಬುದ್ಧಿ ಶಕ್ತಿ ಹೊರ ಹೊಮ್ಮಿಸುವ ಕೆಲಸವನ್ನು ಸಮಾಜ ಮಾಡಬೇಕಿದೆ, ಮಕ್ಕಳು ದೊಡ್ಡವರಾದಾಗ ಸಮಾಜಕ್ಕೆ ಆಸ್ತಿಯಾಗಬೇಕು, ಅವರಿಗೆ ಸಮರ್ಪಕ ವಿದ್ಯೆ ನೀಡದಿದ್ದಲ್ಲಿ ಅವರು ಸಮಾಜಕ್ಕೆ ಹೊರೆಯಾಗುತ್ತಾರೆ, ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಗುಣವಂತರನ್ನಾಗಿಸಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ ವುಲ್ಲಾ, ರಾಜ್ಯ ಸಹಕಾರ ಮಹಾ ಮಂಡಳ ಮಾಜಿ ಅಧ್ಯಕ್ಷ ಎನ್.ಗಂಗಣ್ಣ , ಡಿವೈಎಸ್ಪಿ ರಾಮಚಂದ್ರಪ್ಪ , ಬಿಇಒ ಹನುಂತರಾಯಪ್ಪ , ಮಹಿಳಾ ಸಮಾಜದ ಅಧ್ಯಕ್ಷೆ ಪುಷ್ಪಾವತಮ್ಮ, ಕಾರ್ಯದರ್ಶಿ ನಂಜಮ್ಮ, ಪದಾಧಿಕಾರಿಗಳಾದ ಸಹನಾ ನಾಗೇಶ್, ಭಾರತಮ್ಮ, ನಂಜಮ್ಮ ನಾಗರಾಜು, ಗಾಯತ್ರಿ, ಲಕ್ಷ್ಮೀ, ಸಾವಿತ್ರಮ್ಮ, ಆರುಂಧತಿ ರಾಜ್, ವಿಜಯ ಕುಮಾರಿ, ಸುಜಾತ, ಲಕ್ಷ್ಮೀ ಬಾಯಿ, ಅನ್ನಪೂರ್ಣಮ್ಮ, ಶಾಂತಮ್ಮ ಇತರರಿದ್ದರು.
Comments are closed.