ತುಮಕೂರು: ಔಷಧಿಗಳ ಅಡ್ಡ ಪರಿಣಾಮದಿಂದ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದ್ದು ರೋಗಿಗಳು ತಾವು ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿಬೇಕು ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಎಂ.ರವರು ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಔಷಧ ಶಾಸ್ತ್ರ ವಿಭಾಗದ ವತಿಯಿಂದ ನಡೆದ ಫಾರ್ಮಾಕೋವಿಜಿಲ್ಸ್ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ನಮ್ಮ ಆಸ್ಪತ್ರೆಯ ಎಲ್ಲಾ ವೈದ್ಯರಿಗೆ ರೋಗಿಗಳ ಅನಾರೋಗ್ಯಕ್ಕೆ ಪೂರಕವಾದ ಅಡ್ಡಪರಿಣಾಮ ರಹಿತ ಮಾತ್ರೆಗಳನ್ನು ನೀಡಲು ಸದಾ ಸೂಚಿಸುತ್ತಿದ್ದೇನೆ, ಜೊತೆಗೆ ಅಡ್ಡ ಪರಿಣಾಮಗಳ ಕುರಿತ ಯಾವುದೇ ಮಾಹಿತಿ ಬಂದರೆ ತಕ್ಷಣ ಎಚ್ಚೆತ್ತುಕೊಂಡು ಪರಿಶೀಲನೆ ನಡೆಸುತ್ತೇವೆ ಎಂದರು.
ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪ್ರಿಯದರ್ಶಿನಿ ಮಾತನಾಡಿ, ಪ್ರತಿವರ್ಷ ಫಾರ್ಮಾ ಕೋವಿಜಿಲ್ಸ್ ಸಪ್ತಾಹ ಆಚರಿಸುತ್ತಾ ಬಂದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ, ಯಾವುದೇ ಔಷಧಿ ತೆಗೆದುಕೊಂಡಾಗ ಅದರಿಂದ ತುರಿಕೆ, ರಾಷಸ್, ಲೋ ಬಿಪಿ, ವಾಂತಿ, ಮೂಲವ್ಯಾಧಿ ಸೇರಿದಂತೆ ಅನೇಕ ಸಮಸ್ಯೆ ಕಂಡು ಬಂದರೆ ಕೂಡಲೇ ನಮ್ಮ ಆಸ್ಪತ್ರೆಯ ಡ್ರಗ್ರಿಯಾಕ್ಷನ್ ಅಡ್ವರ್ಸ್ ಮಾನಿಟರಿಂಗ್ ವಿಭಾಗದಲ್ಲಿ ದೂರು ನೀಡಬಹುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ ಮಾತನಾಡಿ, ರೋಗಿಗಳು ಯಾವುದೇ ಔಷಧಿಗಳನ್ನು ವೈದ್ಯರ ಸಲಹೆ ಹಾಗೂ ಅಧೀಕೃತ ಚೀಟಿಯಿಲ್ಲದೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ಮಾತ್ರೆ ಸೇವಿಸಿ ಔಷಧಿಗಳ ಅಡ್ಡ ಪರಿಣಾಮಕ್ಕೆ ಸಿಲುಕುತ್ತಾರೆ, ಇದರಿಂದ ಆರೋಗ್ಯ ಸುರಕ್ಷತೆ ಹದಗೆಡುವುದರ ಜೊತೆಗೆ ಹಾಗೂ ಸಮಸ್ಯೆ ಗಂಭೀರವಾದರೆ ಯಾವುದೇ ಕಾನೂನು ನೆರವು ಕೂಡ ದೊರೆಯದು ಎಂದರು. ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
Comments are closed.