ವಿಎಂಎಸ್ ಅಳವಡಿಸಿಕೊಂಡ ಎಸ್ಆರ್ಎಸ್ ವಿದ್ಯಾಸಂಸ್ಥೆ

159

Get real time updates directly on you device, subscribe now.


ತುಮಕೂರು: ಮಕ್ಕಳ ಸುರಕ್ಷತೆ ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅವರ ಪೋಷಕರನ್ನು ಒಳಗೊಳ್ಳುವ ನಿಟ್ಟಿನಲ್ಲಿ ನಗರದ ಬಡ್ಡಿಹಳ್ಳಿಯಲ್ಲಿರುವ ಎಸ್ಆರ್ಎಸ್ ವಿದ್ಯಾಸಂಸ್ಥೆ ವಿಎಂಎಸ್( ವರ್ಚ್ಯುವೆಲ್ ಮ್ಯಾನೇಜ್ಮೆಂಟ್ ಸಿಸ್ಟಮ್) ತಂತ್ರಜ್ಞಾನ ಅಳವಡಿಸಿಕೊಂಡ ಜಿಲ್ಲೆಯ ಮೊದಲ ಶಿಕ್ಷಣ ಸಂಸ್ಥೆಯಾಗಿದೆ.
ರೂಪ್ಸಾ ರಾಜ್ಯಾಧ್ಯಕ್ಷರು ಹಾಗೂ ಎಸ್ಆರ್ಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಡಾ.ಹಾಲೇನೂರು ಲೇಪಾಕ್ಷ ಅವರ ನೇತೃತ್ವದ ಶಿಕ್ಷಣ ಸಂಸ್ಥೆಯಾದ ಎಸ್ಆರ್ಎಸ್ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಶಾಲೆಗೆ ಪ್ರವೇಶ ಪಡೆದ ನಂತರ ಶಾಲೆಯಿಂದ ಹೊರ ಹೋಗುವ ಪ್ರತಿ ವಿದ್ಯಾರ್ಥಿಯ ಚಲನವಲನವನ್ನು ಅವರ ಪೋಷಕರು ಮನೆಯಲ್ಲಿ ಕುಳಿತು ತಮ್ಮ ಬಳಿ ಇರುವ ಆಂಡ್ರಾಯ್ಡ್ ಮೊಬೈಲ್ ಮೂಲಕ ವೀಕ್ಷಿಸಬಹುದಾದ ಡಿಜಿಟಲ್ ತಂತ್ರಜ್ಞಾನ ಒಳಗೊಂಡಿರುವ ವಿಎಂಎಸ್ ತಂತ್ರಜ್ಞಾನ ಅಳವಡಿಸಿಕೊಂಡಿತ್ತು, ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರು ಡಿಜಿಟಲೀಕರಣಗೊಂಡ ವಿಎಂಎಸ್ ತಂತ್ರಜ್ಞಾನ ಬಿಡುಗಡೆ ಮಾಡಿದರು.

ಈ ಕುರಿತು ಮಾಹಿತಿ ನೀಡಿದ ಎಸ್ಆರ್ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಹಾಲೇನೂರು ಲೇಪಾಕ್ಷ, ಬಾಂಬೆ ಮೂಲದ ವಿಎಂಎಸ್ ಡಿಜಿಟಲ್ ಕಂಪನಿ ರಾಜ್ಯಾದ್ಯಂತ ಶಾಲಾ, ಕಾಲೇಜುಗಳಿಗೆ ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳ ದಿನ ನಿತ್ಯದ ಚಲನವಲನಗಳ ಮೇಲೆ ನೀಗಾ ಇಡಲು ಅನುಕೂಲವಾಗುವಂತಹ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದು, ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸೂರಜ್ ಇಂಟರ್ನ್ಯಾಷನಲ್ ಶಾಲೆ ಇದನ್ನು ಅಳವಡಿಸಿಕೊಂಡಿತ್ತು, ತದನಂತರದಲ್ಲಿ ಸರಕಾರವೇ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿತ್ತು, ಅದರ ಅನ್ವಯ ಜಿಲ್ಲೆಯಲ್ಲಿ ಮೊದಲನೇ ಶಾಲೆಯಾಗಿ ನಮ್ಮ ಎಸ್ಆರ್ಎಸ್ ಸಂಸ್ಥೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿ ಕೊಳ್ಳಲಾಗುತ್ತಿದೆ, ಇದರಿಂದ ವಿದ್ಯಾರ್ಥಿಗಳಿಗು ನಮ್ಮ ಮೇಲೆ ಶಿಕ್ಷಕರು ಹಾಗೂ ಪೋಷಕರ ಗಮನಹರಿಸುತ್ತಿದ್ದಾರೆ ಎಂಬುದರ ಜೊತೆಗೆ, ಶಿಕ್ಷಕರಿಗೂ ಸಹ ಪೋಷಕರು ನಾವು ಮಾಡುವ ಪಾಠ, ಪ್ರವಚನ ಗಮನಿಸುತ್ತಿದ್ದಾರೆ ಎಂಬ ಅಂಶ ತಿಳಿದಿರುವುದರಿಂದ ಶಿಕ್ಷಕರು ಮತ್ತು ಮಕ್ಕಳು ಇಬ್ಬರು ಸಹ ಎಚ್ಚೆತ್ತುಕೊಂಡು ಕೆಲಸ ಮಾಡಲು ಅನುಕೂಲವಾಗಲಿದೆ, ಅಲ್ಲದೆ ಈ ಆಪ್ ಉಪಯೋಗದಿಂದ ಶಾಲಾ ಫೀಸ್ ಮತ್ತಿತರ ಶುಲ್ಕಗಳನ್ನು ಪಾವತಿಸಬಹುದಾಗಿದೆ, ಇದರಿಂದ ಸಮಯದ ಉಳಿತಾಯದ ಜೊತೆಗೆ ಪೋಷಕರು ತಮ್ಮ ಕೆಲಸದ ನಡುವೆಯೇ ಮಕ್ಕಳ ಮೇಲೆ ನಿಗಾ ಇಡಬಹುದಾಗಿದೆ ಎಂದರು.

ವಿಎಂಎಸ್ ಡಿಜಿಟಲ್ ತಂತ್ರಜ್ಞಾನ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ದೋಶಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಪೇಪರ್ ಲೇಸ್ ಕ್ಲಾಸ್ಗಳು, ಪರೀಕ್ಷೆ ಮುಂಚೂಣಿಗೆ ಬರುತ್ತಿವೆ, ಇದರ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಬೇಕಾದ ತಂತ್ರಜ್ಞಾನ ರೂಪಿಸಿ ಇಡೀ ಶೈಕ್ಷಣಿಕ ವರ್ಷವನ್ನೇ ಕಾಗದ ರಹಿತವನ್ನಾಗಿಸಲು ಅಧುನಿಕ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದು, ಇದರಿಂದ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಡಿಜಿಟಲ್ ಉಪಕರಣದ ಮೂಲಕವೇ ಎಲ್ಲವನ್ನು ಮಾಡುವಂತಹ ತಂತ್ರಜ್ಞಾನ ಇದಾಗಿದೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಾಲೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ವಿಎಂಎಸ್ ತುಂಬಾ ಉಪಯೋಗವಾಗಲಿದೆ, ಮಕ್ಕಳ ಕಲಿಕೆಯ ಪ್ರತಿ ಹಂತವನ್ನು ಪೋಷಕರು ಮತ್ತು ಶಿಕ್ಷಕರು ಮಾನಿಟರಿಂಗ್ ಮಾಡಲು ಉತ್ತಮ ತಂತ್ರಜ್ಞಾನವಾಗಿದೆ, ಇದರ ಲಾಭ, ನಷ್ಟ ಅವಲೋಕಿಸಿ ಮುಂದಿನ ದಿನಗಳಲ್ಲಿ ತುಮಕೂರು ವಿವಿಗೂ ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗುವುದು ಎಂದರು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಸೂರಜ್ ಇಂಟರ್ ನ್ಯಾಷನಲ್ ಸ್ಕೂಲ್ನ ಡಾ.ಮಂಜುನಾಥ್ ರೇವಣ್ಣಕ್ಕರ್, ಶಾಲೆಯ ಸಿಬ್ಬಂದಿ ವರ್ಗ ಇದ್ದರು.

Get real time updates directly on you device, subscribe now.

Comments are closed.

error: Content is protected !!