ಅಮೃತ ನಗರೋತ್ಥಾನ ಯೋಜನೆಗೆ 120 ಕೋಟಿ ಹಂಚಿಕೆ

114

Get real time updates directly on you device, subscribe now.


ತುಮಕೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ- 4ರಡಿ ಜಿಲ್ಲೆಗೆ 120 ಕೋಟಿ ರೂ. ಹಂಚಿಕೆಯಾಗಿದ್ದು, ಈ ಯೋಜನೆಯಡಿ ಸಿವಿಲ್ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ನಗರಸಭೆಗಳಿಗೆ ತಲಾ 30 ಕೋಟಿ, ಪುರಸಭೆಗಳಿಗೆ ತಲಾ 10 ಕೋಟಿ, ಪಟ್ಟಣ ಪಂಚಾಯತಿಗಳಿಗೆ ತಲಾ 5 ಕೋಟಿಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ಬಾಕಿ ಇರುವ ಕಾಮಗಾರಿಗಳ ಅನುಷ್ಠಾನ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ತ್ವರಿತವಾಗಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಕುಡಿಯುವ ನೀರು, ಒಳಚರಂಡಿ, ರಸ್ತೆ ಅಭಿವೃದ್ಧಿ ಹಾಗೂ ಇನ್ನಿತರೆ ಯೋಜನೆಗಳ ಅಭಿವೃದ್ಧಿಯೇ ನಗರೋತ್ಥಾನ ಯೋಜನೆಯ ಉದ್ದೇಶವಾಗಿದ್ದು, ನಗರೋತ್ಥಾನ ಯೋಜನೆ ಹಂತ-4ರಡಿ ಜಿಲ್ಲೆಯಲ್ಲಿ ವಿಕಲಚೇತನ ಹಾಗೂ ಪೌರಕಾರ್ಮಿಕರಿಗೆ ಅಗತ್ಯವಿರುವ ಕಡೆ ಶೌಚಾಲಯ, ವಿಶ್ರಾಂತಿ ಗೃಹಗಳ ನಿರ್ಮಾಣಕ್ಕೆ ಕ್ರಮ ವಹಿಸಬೇಕು, ಈಗಾಗಲೇ ಅನುಮೋದನೆ ನೀಡಿರುವ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಿ ಕಾಮಗಾರಿ ಆರಂಭಿಸಬೇಕು, ಈ ಯೋಜನೆಯಡಿ ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿ ಪರಿಶೀಲಿಸಿ ಕಳಪೆ ಕಂಡಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ತಾಲ್ಲೂಕಿನಲ್ಲಿ ಬಡವರಿಗಾಗಿ ಕಲ್ಯಾಣ ಮಂಟಪ ಕಟ್ಟಿಸಲು ಸ್ಥಳ ಗುರುತಿಸಲಾಗಿದ್ದು, ಈ ಸಂಬಂಧ ವರದಿ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್.ಅನಿಲ್ ಕುಮಾರ್ ಅವರಿಗೆ ಸೂಚಿಸಿದರು.

ವಿಕಲಚೇತನರಿಗೆ ತ್ರಿಚಕ್ರದ ವಾಹನ ಖರೀದಿ ಯೋಜನೆಯ ಪ್ರಗತಿ ಕುರಿತಂತೆ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ವಿಕಲಚೇತನರ ಮಾಹಿತಿ ಸಂಗ್ರಹಿಸಿ ತ್ವರಿತವಾಗಿ ವಾಹನ ವಿತರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಯೋಜನೆಗಳ ಅನುಷ್ಠಾನದಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.

ಈ ಕುರಿತು ತಿಪಟೂರು ಶಾಸಕ ಕೆ.ಷಡಕ್ಷರಿ ಹಾಗೂ ಪಾವಗಡ ಶಾಸಕ ಎಂ.ವಿ.ವೆಂಕಟೇಶ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಉಪ ವಿಭಾಗಾಧಿಕಾರಿ ರಿಷಿ ಆನಂದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಆಂಜಿನಪ್ಪ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!