ಜನರ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಪರಂ ಸೂಚನೆ

124

Get real time updates directly on you device, subscribe now.


ತುಮಕೂರು: ಸಾರ್ವಜನಿಕರಿಂದ ಯಾವುದೇ ಅರ್ಜಿ ಬಂದಲ್ಲಿ ಅದನ್ನು ತಿರಸ್ಕರಿಸಬಾರದು, ಆದಷ್ಟು ಸಕಾರಾತ್ಮಕವಾಗಿ ಸ್ಪಂದಿಸುವಂತಹ ಕೆಲಸ ಸರ್ಕಾರಿ ಅಧಿಕಾರಿ, ನೌಕರ ವಲಯದಿಂದ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಗಾಜಿನ ಮನೆ ಅಮಾನಿಕೆರೆ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜನರ ಬಳಿಗೆ ಸರ್ಕಾರವೇ ತೆರಳುವ ಕಾರ್ಯಕ್ರಮ ಜನತಾ ದರ್ಶನ ಕಾರ್ಯಕ್ರಮವಾಗಿದ್ದು, ಈ ಮೂಲಕ ನಮ್ಮ ಸರ್ಕಾರ ಜನಪರ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದು, ನುಡಿದಂತೆ ನಡೆಯುತ್ತಿದ್ದೇವೆ ಎಂದು ತಿಳಿಸಿದರು.

ಜನರ ಸಮಸ್ಯೆಗಳು ಜಿಲ್ಲಾ ಮಟ್ಟದಲ್ಲಿಯೇ ಬಗೆಹರಿಯಬೇಕು, ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಕೆಲಸ ಆಗಬಾರದು ಎಂಬ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಜನತಾದರ್ಶನ ಕಾರ್ಯಕ್ರಮ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುತ್ತಿದೆ, ಅದರಂತೆ ತುಮಕೂರು ಜಿಲ್ಲೆಯಲ್ಲಿ 3 ದಿನಗಳ ಹಿಂದೆಯೇ ವಿವಿಧ ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಗೆ ಅಹವಾಲು ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು, ಈ ಪದ್ಧತಿ ಜನರನ್ನು ಜಿಲ್ಲಾ ಮಟ್ಟದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗುತ್ತದೆ, ಇದು ಒಂದು ದಿನಕ್ಕೆ ಮುಗಿಯುವುದಿಲ್ಲ, ಪ್ರತಿ ತಿಂಗಳು ಒಂದೊಂದು ತಾಲ್ಲೂಕಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ನಿಮ್ಮ ತಾಲ್ಲೂಕಿಗೆ ಬರುತ್ತಾರೆ ಎಂದು ತಿಳಿಸಿದರು.

ಸಾರ್ವಜನಿಕರ ಅಹವಾಲು ಆಲಿಸುವ ಕೆಲಸ ತಾಲ್ಲೂಕು ಮಟ್ಟ, ಹೋಬಳಿ ಮಟ್ಟ, ಗ್ರಾಮ ಪಂಚಾಯತಿ ಮಟ್ಟದಲ್ಲೂ ಆಗಬೇಕಿದೆ, ಜನರ ಕೆಲಸಗಳು ಪ್ರಾಥಮಿಕವಾಗಿ ಪ್ರಾರಂಭವಾಗುವ ಸ್ಥಳ ಗ್ರಾಮ ಪಂಚಾಯತಿಗಳು, ಅಲ್ಲಿ ಸಮಸ್ಯೆ ಬಗೆಹರಿದಲ್ಲಿ ಜನರು ಸಮಸ್ಯೆ ಹೊತ್ತು ಜಿಲ್ಲಾ ಕೇಂದ್ರಗಳಿಗೆ ತರುವುದಿಲ್ಲ ಎಂದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದಂತಹ ಬಹುತೇಕ ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ, ತಹಶೀಲ್ದಾರರು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇಟ್ಟುಕೊಳ್ಳದೆ ನಿಗದಿತ ಅವಧಿಯೊಳಗಾಗಿ ವಿಲೇವಾರಿ ಮಾಡಬೇಕು, ಮುಂದಿನ ದಿನಗಳಲ್ಲಿ ಅರ್ಜಿ ದಾಖಲಾದ ದಿನ, ವಿಲೇವಾರಿಯಾದ ದಿನಾಂಕವನ್ನೂ ಸಹ ಇಲಾಖಾವಾರು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಲ್ಲಿ ತಾಂತ್ರಿಕತೆ ಬಳಸಿಕೊಂಡು ಜನರ ಸಮಸ್ಯೆ ಬಗೆಹರಿಸುವಂತಹ ಕೆಲಸ ಪರಿಣಾಮಕಾರಿಯಾಗಿ ನಡೆಯುತ್ತಿದೆ, ಗ್ರಾಮೀಣ ಭಾಗದಲ್ಲಿ ಅಕ್ಷರಸ್ಥರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಗ್ರಾಮೀಣ ಜನತೆಗೂ ಸಹ ಸರ್ಕಾರಿ ಕೆಲಸ ಕಾರ್ಯಗಳ ಮೂಲಕ ತಾಂತ್ರಿಕತೆ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜನತಾ ದರ್ಶನದಲ್ಲಿ ಸಲ್ಲಿಸಲು ಬರುವ ಶೇ.70 ರಿಂದ 80 ರಷ್ಟು ಸಮಸ್ಯೆ ಕಂದಾಯ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ, ಜನರ ಸಮಸ್ಯೆಗಳನ್ನು ಮಾನವೀಯ ಹಿನ್ನೆಲೆಯಲ್ಲಿ ಆಲಿಸಿ ಇತ್ಯರ್ಥ ಪಡಿಸುವುದೇ ಜನತಾ ದರ್ಶನ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಸಾರ್ವಜನಿಕರು ಸಮಸ್ಯೆ ಹೊತ್ತು ರಾಜಧಾನಿ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಸೂಚನೆ ನೀಡಿದ ಮೇರೆಗೆ ರಾಜ್ಯದ ಎಲ್ಲೆಡೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯುತ್ತಿದ್ದು, ಅದರಂತೆ ಗೃಹ ಸಚಿವರ ನೇತೃತ್ವದಲ್ಲಿ ತುಮಕೂರಿನಲ್ಲಿಯೂ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ, ಸಾರ್ವಜನಿಕರು ಐಪಿಜಿಆರ್ಎಸ್ ಮೂಲಕ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸ್ವೀಕೃತಿ ಪಡೆಯಬಹುದಾಗಿರುತ್ತದೆ ಮತ್ತು ಸಲ್ಲಿಕೆಯಾದಂತಹ ಅರ್ಜಿಗಳನ್ನು ಇನ್ನು 10- 15 ದಿನಗಳೊಳಗಾಗಿ ಇತ್ಯರ್ಥಪಡಿಸುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಸಹ ಜನರ ಸಮಸ್ಯೆ ಆಲಿಸುವಂತಹ ಕಾರ್ಯಕ್ರಮ ಆಗಬೇಕು, ಐಪಿಜಿಆರ್ಎಸ್ ಮೂಲಕ ಜನರ ಸಮಸ್ಯೆಗಳಿಗೆ ತಾರ್ಕಿತ ಅಂತ್ಯ ಆಡಬೇಕಿದ್ದು, ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಸಾಂಕೇತಿಕವಾಗಿ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ವೃದ್ಧಾಪ್ಯವೇತನ ಸೌಲಭ್ಯಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ಸಹಾಯಧನವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತುಮಕೂರು ಪ್ರಾದೇಶಿಕ ಆಯುಕ್ತರಾದ ತುಳಸಿ ಮದ್ದಿನೇನಿ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮೇಯರ್ ಪ್ರಭಾವತಿ, ಶಾಸಕ ವೆಂಕಟೇಶ್ ಇದ್ದರು.

Get real time updates directly on you device, subscribe now.

Comments are closed.

error: Content is protected !!