ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮಗೊಳಿಸಲು ಶ್ರಮಿಸಿ

105

Get real time updates directly on you device, subscribe now.


ತುಮಕೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ 10ನೇ ಸ್ಥಾನಕ್ಕೇರಿಸಲು ಉಪನ್ಯಾಸಕರು ಮತ್ತಷ್ಟು ಉತ್ತಮವಾಗಿ ಬೋಧನೆ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ್ ಸಲಹೆ ನೀಡಿದರು.

ನಗರದ ಬಿ.ಹೆಚ್. ರಸ್ತೆಯ ಜಯದೇವ ಹಾಸ್ಟೆಲ್ ಆವರಣದಲ್ಲಿರುವ ಅನನ್ಯ ಇನ್ಸಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಇತಿಹಾಸ ವೇದಿಕೆ, ಜಿಲ್ಲಾ ಪ.ಪೂ. ಕಾಲೇಜುಗಳ ಇತಿಹಾಸ ಉಪನ್ಯಾಸಕರ ಬಳಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಇತಿಹಾಸ ಉಪನ್ಯಾಸಕರಿಗೆ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದ್ವಿತೀಯ ಪಿಯುಸಿ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಿ ರಾಜ್ಯದಲ್ಲಿ ತುಮಕೂರು ಜಿಲ್ಲೆಯನ್ನು 10 ಸ್ಥಾನಕ್ಕೇರಿಸುವ ಗುರಿ ಹೊಂದಲಾಗಿದೆ, ಈ ನಿಟ್ಟಿನಲ್ಲಿ ಉಪನ್ಯಾಸಕರು ಮಕ್ಕಳಿಗೆ ಅತ್ಯುತ್ತವಾಗಿ ವ್ಯಾಸಂಗ ಮಾಡಲು ಸಹಕರಿಸಬೇಕು ಎಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕರಿಂದ ಚರ್ಚೆ ನಡೆಸಿರುವುದು ಹೆಮ್ಮೆಯ ವಿಷಯ, ಇತಿಹಾಸ ವಿಷಯದ ಬಗ್ಗೆ ಮಕ್ಕಳಿಗೆ ಮತ್ತಷ್ಟು ವಿಚಾರ ತಿಳಿಸುವ ಸಲುವಾಗಿ ಇಂತಹ ಕಾರ್ಯಾಗಾರಗಳು ಉತ್ತಮ ವೇದಿಕೆಯಾಗಿವೆ ಎಂದರು.

ಪ.ಪೂ. ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ ಮಾತನಾಡಿ, 2023- 24ನೇ ಸಾಲಿನಲ್ಲಿ ಇತಿಹಾಸ ವಿಷಯದಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲಾ ಉಪನ್ಯಾಸಕರು ಆಸಕ್ತಿ ವಹಿಸಿ ಪಾಠ ಬೋಧಿಸಬೇಕು, ಈ ನಿಟ್ಟಿನಲ್ಲಿ ಇತಿಹಾಸ ಉಪನ್ಯಾಸಕರು ಕಾರ್ಯೋನ್ಮುಖರಾಗುವ ಅಗತ್ಯವಿದೆ ಎಂದರು.

ಕಾಲೇಜುಗಳಲ್ಲಿ ಮಕ್ಕಳು ಪರೀಕ್ಷೆಗೆ ಕೂರಲು ಶೇ.75 ರಷ್ಟು ಹಾಜರಾತಿ ಇರಬೇಕು, ಈ ಬಗ್ಗೆಯೂ ಉಪನ್ಯಾಸಕರು ಗಮನ ಹರಿಸುವ ಅಗತ್ಯವಿದೆ ಎಂದರು.
ಮಕ್ಕಳಿಗೆ ಇತಿಹಾಸ ವಿಷಯದ ಕುರಿತು ಮನವರಿಕೆ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದ ಅವರು ಪ.ಪೂ. ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಪೋಷಕರನ್ನು ಸಂಪರ್ಕಿಸಿ ಮಕ್ಕಳ ಕಲಿಕೆ ಬಗ್ಗೆ ಚರ್ಚೆ ನಡೆಸಬೇಕು, ಇದು ಸಹ ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗಲಿದೆ ಎಂದರು.
ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮಹಲಿಂಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಇತಿಹಾಸ ಉಪನ್ಯಾಸಕರಲ್ಲಿ ಪುನಶ್ಚೇತನ ಕಾರ್ಯಕ್ರಮ ನಡೆಸಲಾಗುತ್ತಿದೆ, ಈ ಕಾರ್ಯಾಗಾರ ಉಪನ್ಯಾಸಕರಿಗೆ ಬಹಳ ಉಪಯುಕ್ತವಾಗಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಇತಿಹಾಸ ಬಹಳ ಬದಲಾವಣೆಯಾಗುತ್ತಿದೆ, ಬದಲಾವಣೆಗೆ ತಕ್ಕಂತೆ ನಾವು ಹೊಂದಿಕೊಳ್ಳಬೇಕಾಗಿದೆ, ಇತಿಹಾಸ ಸಂಶೋಧನೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಅಗತ್ಯ ಎಂದು ತಿಳಿಸಿದರು.

ಮಕ್ಕಳಿಗೆ ಅಂಕ ಗಳಿಗೋಸ್ಕರ ಹೆಚ್ಚಿನ ಒತ್ತಡ ಹಾಕುವುದರ ಬದಲು ಸಮಾಜದಲ್ಲಿ ಯಾವ ರೀತಿ ಉತ್ತಮ ಬದುಕು ರೂಪಿಸಿಕೊಳ್ಳಲು ಅಗತ್ಯ ಇರುವ ಜ್ಞಾನ ಬೆಳೆಸಿಕೊಳ್ಳುವ ಕಡೆಯೂ ತಿಳುವಳಿಕೆ ನೀಡಬೇಕಿದೆ, ಮಕ್ಕಳಿಗೆ ಅಂಕ ಗಳಿಕೆ ಒಂದೇ ಮಾನದಂಡವಲ್ಲ, ಮಕ್ಕಳಲ್ಲಿ ಬದುಕುವ ರೀತಿ ಕಲಿಸಿಕೊಡುವ ಅಗತ್ಯವಿದೆ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ, ದೇಶ ಭಕ್ತಿ ಮೂಡಿಸಬೇಕು, ಆಗ ಮಾತ್ರ ಮಕ್ಕಳ ಕಲಿಕೆ ಅರ್ಥಪೂರ್ಣವಾಗಲಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ 20 ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು ಹಾಗೂ ನಿವೃತ್ತ ಇತಿಹಾಸ ಉಪನ್ಯಾಸಕರನ್ನು ಗೌರವಿಸಲಾಯಿತು.

ಅನನ್ಯ ಶಿಕ್ಷಣ ಸಂಸ್ಥೆಯ ಡಾ.ಹರೀಶ್, ವಿಶ್ವ ವಿದ್ಯಾಲಯ ಕಲಾ ವಿಭಾಗದ ಪ್ರಾಧ್ಯಾಪಕ ಡಾ.ಹರಿಪ್ರಸಾದ್.ಟಿ.ಎನ್, ಉಪನ್ಯಾಸಕ ಡಾ.ಜಿ.ವಿ.ಗೋಪಾಲ್ ಸೇರಿದಂತೆ ವಿವಿಧ ಕಾಲೇಜುಗಳ ಇತಿಹಾಸ ಉಪನ್ಯಾಸಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!