ಕರ್ನಾಟಕ ಬಂದ್ಗೆ ಡಿಎಸ್ಎಸ್ ಬೆಂಬಲವಿಲ್ಲ

95

Get real time updates directly on you device, subscribe now.


ತುಮಕೂರು: ಕಾವೇರಿ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಸೆಪ್ಟಂಬರ್ 29 ರಂದು ಕರೆದಿರುವ ಸಮಗ್ರ ಕರ್ನಾಟಕ ಬಂದ್ಗೆ ದಲಿತ ಸಂಘರ್ಷ ಸಮಿತಿ, ತುಮಕೂರು, ಅಂಬೇಡ್ಕರ್ ದಂಡು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ.

ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳು, ಕಾವೇರಿ ಜಲವಿವಾದ ಕುರಿತು ಚರ್ಚೆ ನಡೆಸಿ, ಜನಸಾಮಾನ್ಯರಿಗೆ ಮಾರಕವಾಗಿರುವ ಬಂದ್ ಬದಲು ಶಾಂತಿಯುತ ಪ್ರತಿಭಟನೆಯ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಕುರಿತು ಮಾತನಾಡಿದ ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಮಾನದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ಯಾವ ಪುರುಷಾರ್ಥಕ್ಕಾಗಿ ಕನ್ನಡ ಪರ ಸಂಘಟನೆಗಳು ಬಂದ್ಗೆ ಕರೆ ನೀಡಿವೆ ಎಂಬುದು ತಿಳಿಯುತ್ತಿಲ್ಲ, ಕಾವೇರಿ ಟ್ರಿಬ್ಯುನಲ್ನಲ್ಲಿ ಮಳೆಯಿಲ್ಲದ ಬರಗಾಲದಂತಹ ಸಂಕಷ್ಟ ಸಮಯದಲ್ಲಿ ಯಾವ ಸೂತ್ರ ಅನುಸರಿಸಬೇಕು ಎಂದು ಸ್ಪಷ್ಟವಾಗಿ ಹೇಳಿಲ್ಲ, ಇದು ಕರ್ನಾಟಕವನ್ನು ಬರಗಾಲ ದಂತಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ, ಕೇಂದ್ರ ಸರಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸಂಕಷ್ಟ ಸೂತ್ರ ಸಿದ್ಧಪಡಿಸಬೇಕಿದೆ, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಜನ ಸಂಸತ್ ಸದಸ್ಯರು ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು, ಆದರೆ ಒಬ್ಬರೂ ತುಟಿ ಬಿಚ್ಚುತ್ತಿಲ್ಲ, ಕನ್ನಡ ಪರ ಸಂಘಟನೆಗಳಿಗೆ ನಿಜವಾಗಿಯೂ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದರೆ ಮೊದಲು ಸಂಸದರು ಬಾಯಿ ತೆರೆದು ಮಾತನಾಡುವಂತೆ, ರಾಜ್ಯದ ಕಷ್ಟವನ್ನು ಪ್ರಧಾನಿ ಮತ್ತು ಒಕ್ಕೂಟ ಸರಕಾರದ ನೀರಾವರಿ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಂತೆ ಒತ್ತಡ ತರಬೇಕು, ಇದನ್ನು ಬಿಟ್ಟು ಬಂದ್ ನಂತಹ ಕಾರ್ಯಕ್ರಮದಿಂದ ಜನ ಸಾಮಾನ್ಯರಿಗೆ ಯಾವುದೇ ಉಪಯೋಗವಾಗದು ಎಂದರು.

ಸಭೆಯಲ್ಲಿ ಅಂಬೇಡ್ಕರ್ ದಂಡು ಜಿಲ್ಲಾಧ್ಯಕ್ಷ ಎನ್.ಕುಮಾರ್, ಲಕ್ಷ್ಮಮ್ಮ, ಟಿ.ಎನ್.ಮಧು, ಅಲ್ಪಸಂಖ್ಯಾತರ ತಾಲೂಕು ಘಟಕ ಅಧ್ಯಕ್ಷ ಯೂಸೂಫ್, ಎ.ಸುನಿಲ್, ಸಲ್ಮಾ, ರಘುಪ್ರಸಾದ್, ಸುಪ್ರೀಮ್.ಟಿ.ಆರ್, ರಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!