ತುಮಕೂರು: ವಿವೇಕಾನಂದ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ತುಮಕೂರು, ವಿವೇಕಾನಂದ ಶೂಟಿಂಗ್ ಅಕಾಡೆಮಿ, ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಮತ್ತು ತುಮಕೂರು ಜಿಲ್ಲಾ ರೈಫಲ್ ಮತ್ತು ಪಿಸ್ತೂಲ್ ಅಸೋಸಿಯೇಷನ್ ಸಹಕಾರದಲ್ಲಿ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ ಸೆಪ್ಟಂಬರ್ 28 ರಿಂದ ಅಕ್ಟೋಬರ್ 02ರ ವರೆಗೆ ಐದು ದಿನಗಳ ಕಾಲ ಹಮ್ಮಿಕೊಂಡಿದೆ ಎಂದು ವಿವೇಕಾನಂದ ಶೂಟಿಂಗ್ ಅಕಾಡೆಮಿಯ ತರಬೇತುದಾರ ಅನಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಎದುರು ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ 10 ಮೀ. ಏರ್ ರೈಫಲ್ ಶೂಟಿಂಗ್ ಪಂದ್ಯಾವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಪ್ ಎಂದು ಹೆಸರಿಡಲಾಗಿದೆ, ಐದು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ ವಿವಿಧ 56 ಕ್ಯಾಟಗರಿಯಲ್ಲಿ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಸೇರಿ ಒಟ್ಟು 800ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ, ಮೊದಲ ಬಹುಮಾನವಾಗಿ 5000, ಎರಡನೇ ಬಹುಮಾನವಾಗಿ 3000 ಮತ್ತು 3ನೇ ಬಹುಮಾನವಾಗಿ 2000 ಸೇರಿದಂತೆ ಒಟ್ಟು 4 ಲಕ್ಷ ರೂ. ಗಳ ಕ್ಯಾಷ್ ಪ್ರೈಜ್ ಈ ಟೂನಿಯಲ್ಲಿ ನೀಡಲಾಗುತ್ತಿದೆ ಎಂದರು.
ವಿವೇಕಾನಂದ ಸ್ಪೋಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಹಾಗೂ ವಿವೇಕಾನಂದ ಶೂಟಿಂಗ್ ಅಕಾಡೆಮಿ ಆಯೋಜಿಸುತ್ತಿರುವ ಎರಡನೇ ರಾಷ್ಟ್ರಮಟ್ಟದ ಟೂರ್ನಿ ಇದಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಶೂಟರ್ಗಳು, ಒಲಂಪಿಕ್ಗೆ ತಯಾರಿ ನಡೆಸುತ್ತಿರುವ ಶೂಟರ್ಗಳು ಸೇರಿದಂತೆ ಮದ್ರಾಸ್ ರೆಜಿಮೆಂಟ್ ಫೋರ್ಸ್, ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ, ಕರ್ನಾಟಕ ಪೊಲೀಸ್ ಟೀಮ್ ಸೇರಿದಂತೆ ಹಲವಾರು ಹೆಸರಾಂತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ತಮ್ಮ ಹೆಸರು ನೋಂದಾಯಿಸಿವೆ, ಅಲ್ಲದೆ ತಮಿಳುನಾಡು, ಆಂಧ್ರಪ್ರದೇಶ್, ತೆಲಂಗಾಣ, ರಾಜಸ್ಥಾನ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ, ಸಬ್ಜೂನಿಯರ್, ಜೂನಿಯರ್ ವಿಭಾಗದಲ್ಲಿ ಶಾಲಾ ಮಕ್ಕಳು ತಮ್ಮ ಗುರಿಯನ್ನು ಓರೆಗೆ ಹಚ್ಚಲಿದ್ದಾರೆ, ತುಮಕೂರು ಜಿಲ್ಲೆಯ ಸುಮಾರು 48 ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸೆಪ್ಟಂಬರ್ 28 ರಂದು ನಡೆಯುವ 2ನೇ ರಾಷ್ಟ್ರಮಟ್ಟದ ಮುಕ್ತ ಆಹ್ವಾನಿತ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಶೂಟರ್ ತಿಲೋತ್ತಮ ಸೇನ್ ಪಾಲ್ಗೊಳ್ಳಲಿದ್ದಾರೆ, ಇವರೊಂದಿಗೆ ತುಮಕೂರು ವಿವಿಯ ಉಪ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಪಾಲ್ಗೊಳ್ಳಲಿದ್ದಾರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಐದು ದಿನಗಳ ಟೂರ್ನಿಯ ಒಂದು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ನಮ್ಮ ವಿವೇಕಾನಂದ ಶೂಟಿಂಗ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿರುವ ಕಿರಣ್ ನಂದನ್ ಎಂಬ ಶೂಟರ್ಗೆ ಕರ್ನಾಟಕ ಸರಕಾರದ ಕ್ರೀಡಾ ದತ್ತು ಯೋಜನೆಯಡಿಯಲ್ಲಿ 10 ಲಕ್ಷ ರೂ. ಪ್ರೋತ್ಸಾಹ ನೀಡಿ ಹೆಚ್ಚಿನ ತರಬೇತಿಗೆ ಪ್ರೋತ್ಸಾಹಿಸಲಾಗಿದೆ, ಅಲ್ಲದೆ ಖೇಲೋ ಇಂಡಿಯಾ ಕ್ಯಾಂಪ್ನಲ್ಲಿ 8 ಜನ ತುಮಕೂರಿನ ಶೂಟರ್ಗಳು ತರಬೇತಿ ಪಡೆಯುತ್ತಿದ್ದಾರೆ, ಅಲ್ಲದೆ 22 ಜನರು ವಿವಿಧ ಟೂರ್ನಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ, ಭವಿಷ್ಯದಲ್ಲಿ ತುಮಕೂರು ಶೂಟಿಂಗ್ ಹಬ್ ಆಗಿ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆಯ ಧನಿಯಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್, ಮಂಜುನಾಥ್, ವಿಕಾಸ್, ನಿಖಿಲ್ ಮತ್ತು ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಇದ್ದರು.
Comments are closed.