ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ

ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿ- ಅಧಿಕಾರಿಗಳಿಗೆ ಪರಮೇಶ್ವರ್ ಸೂಚನೆ

96

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಹೇಮಾವತಿ ನಾಲಾ, ಎತ್ತಿನಹೊಳೆ, ಕೆಐಎಡಿಬಿ, ರಾಷ್ಟ್ರೀಯ ಹೆದ್ದಾರಿ- 206, ತುಮಕೂರು- ದಾವಣಗೆರೆ ರೈಲ್ವೆ, ತುಮಕೂರು- ರಾಯದುರ್ಗ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿ ಕಾಮಗಾರಿಗಳಿಗೆ ವೇಗ ನೀಡಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹೇಮಾವತಿ ಹಾಗೂ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರಿಗೆ ಅವಾರ್ಡ್ ಆದ ಪರಿಹಾರ ಹಣ ಬಾಕಿ ಉಳಿಸಿಕೊಳ್ಳದೆ ತ್ವರಿತವಾಗಿ ನೀಡಬೇಕು ಎಂದರಲ್ಲದೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದಂತಾಗಿದೆ, ಯೋಜನೆಗಳು ಜಾರಿಯಾಗಿ ಹಲವಾರು ವರ್ಷ ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗಲು ಕಾರಣವೇನೆಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅನುದಾನ ಕೊರತೆ, ಕೆಲವು ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಿನ್ನಡೆಯಾಗಿದ್ದು, ಕಾಮಗಾರಿಗಳಿಗೆ ವೇಗ ನೀಡಲು ಅಗತ್ಯ ಕ್ರಮ ವಹಿಸಲಾಗುವುದೆಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಹೇಮಾವತಿ ನಾಲಾ ವಲಯದ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ ಮಾತನಾಡಿ, ಹೇಮಾವತಿ ನಾಲಾ ಯೋಜನೆಯಡಿ ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರಿನ ಮೊದಲ ಹಂತದ ಕಾಮಗಾರಿಗಾಗಿ 21.14 ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿದ್ದು, 381 ಖಾತೆದಾರರಿಗೆ ಅವಾರ್ಡ್ ಅನುಮೋದನೆಯಾಗಿ ಭೂ ಪರಿಹಾರ ಪಾವತಿಸಲಾಗುತ್ತಿದೆ, ಈ ಪೈಕಿ 278 ರೈತರ ಖಾತೆಗೆ 9.94 ಕೋಟಿ ರೂ. ಪಾವತಿಸಲಾಗಿದ್ದು, ಉಳಿದಂತೆ 2.94 ಕೋಟಿ ರೂ. ಪಾವತಿಯಾಗಬೇಕಾಗಿದೆ, ಅನುದಾನ ಬಿಡುಗಡೆಯಾದ ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಹೇಮಾವತಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕೈಗೊಂಡಿರುವ ಗುಬ್ಬಿ ತಾಲ್ಲೂಕಿನ ಜೀಗನಹಳ್ಳಿ, ಚಾಕೇನಹಳ್ಳಿ, ಮಡೇನಹಳ್ಳಿ, ಇಂಗಳದ ಕಾವಲ್ ಗ್ರಾಮಗಳ ಭೂ ಮಾಲೀಕರಿಗೆ ಪರಿಹಾರ ನೀಡಲು ಅನುಮೋದನೆ ನೀಡಿದ್ದರೂ ಸಹ ಅವಾರ್ಡ್ ನೋಟೀಸ್ ಇದುವರೆಗೂ ಜಾರಿಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ಕೂಡಲೇ ಅನುಮೋದನೆಯಾಗಿರುವ ಅವಾರ್ಡ್ ಮೊತ್ತವನ್ನು ಮಾಲೀಕರಿಗೆ ನೀಡಬೇಕೆಂದು ನಿರ್ದೇಶನ ನಿಡಿದರು.

ನಂತರ ಮಾತನಾಡಿದ ಗೃಹ ಸಚಿವರು 2015ರಲ್ಲೇ ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಆಗಿದ್ದರೂ ಈವರೆಗೂ ಯೋಜನೆ ಪೂರ್ಣಗೊಂಡಿಲ್ಲ, ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತರ ಮನವೊಲಿಸಿ ಆದಷ್ಟು ಶೀಘ್ರ ಕೈಗೊಂಡು ನವೆಂಬರ್ ಮಾಹೆಯೊಳಗೆ ಯೋಜನೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಎತ್ತಿನಹೊಳೆ ಹಾಗೂ ಹೇಮಾವತಿ ನಾಲಾ ಕುಡಿಯುವ ನೀರಿನ ಯೋಜನೆಯ ಮುಖ್ಯ ಇಂಜನಿಯರ್ ಎಂ.ವರದಯ್ಯ ಅವರು ಗುಬ್ಬಿ ತಾಲ್ಲೂಕಿನ ಹಾಗಲವಾಡಿ, ಚಿಕ್ಕನಾಯಕನ ಹಳ್ಳಿ- ತಿಪಟೂರು ಹಾಗೂ ಕುಣಿಗಲ್ ತಾಲ್ಲೂಕಿನ ಶ್ರೀರಂಗ ಏತ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಪ್ರಗತಿ ವಿವರವನ್ನು ಸಭೆಗೆ ನೀಡಿದರು.

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ತಿಪಟೂರು ತಾಲ್ಲೂಕಿನ 31 ಗ್ರಾಮಗಳು 921.23 ಎಕರೆ ಪ್ರದೇಶ ಭೂಸ್ವಾಧೀನಕ್ಕೆ ಒಳಪಟ್ಟಿದ್ದು, ಪರಿಹಾರ ನೀಡಲು 100 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, 273.43 ಕೋಟಿ ರೂ. ಬಿಡುಗಡೆಯಾಗಬೇಕಾಗಿದೆ, ಅದೇ ರೀತಿ ಚಿಕ್ಕನಾಯಕನ ಹಳ್ಳಿಯ 11 ಗ್ರಾಮಗಳ 184.36 ಎಕರೆ ಭೂಸ್ವಾಧೀನಕ್ಕೆ ಒಳಪಟ್ಟಿದ್ದು, 81.35 ಕೋಟಿ ರೂ. ಅಗತ್ಯವಿದೆ ಎಂದು ಮಾಹಿತಿ ನೀಡುತ್ತಾ, ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳಲ್ಲಿ ಸ್ವಾಧೀನಪಡಿಸಿಕ್ಕೊಳಪಟ್ಟಿರುವ ಭೂ ವಿಸ್ತೀರ್ಣ ಹಾಗೂ ಅಗತ್ಯವಿರುವ ಅನುದಾನದ ಬಗ್ಗೆ ವಿವರಣೆ ನೀಡಿದರು.

ತುಮಕೂರು- ರಾಯದುರ್ಗ ರೈಲ್ವೆ ಯೋಜನೆ ಹಾಗೂ ತುಮಕೂರು- ದಾವಣಗೆರೆ ರೈಲ್ವೆ ಯೋಜನೆಯ ಪ್ರಗತಿ ಮಾಹಿತಿ ನೀಡಿದ ವಿಶೇಷ ಭೂಸ್ವಾಧೀನಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಒಟ್ಟು 205.77 ಕಿ.ಮೀ. ಅಂತರವಿರುವ ತುಮಕೂರು- ರಾಯದುರ್ಗ ರೈಲ್ವೆ ಯೋಜನೆಯು ತುಮಕೂರಿನಿಂದ ನಾಗಲಾಪುರದ ವರೆಗಿನ 102.60 ಕಿ.ಮೀ. ಅಂತರ ರಾಜ್ಯದ ವ್ಯಾಪ್ತಿಗೊಳಪಡಲಿದ್ದು, ಈ ರೈಲು ಮಾರ್ಗ ನಿರ್ಮಾಣಕ್ಕೆ 1394.01 ಎಕರೆ ಪ್ರದೇಶ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ತುಮಕೂರು, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ಸೇರಿ 77 ಗ್ರಾಮಗಳು ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗೊಳಪಟ್ಟಿದ್ದು, ಈವರೆಗೂ 1289.10 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ದಿಬ್ಬೂರು, ಮರಳೇನಹಳ್ಳಿ, ವೀರಸಾಗರ, ಕುಚ್ಚಂಗಿ, ಹೊನ್ನೇನಹಳ್ಳಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಈಗಾಗಲೇ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯಡಿ ತುಮಕೂರು ಹಾಗೂ ಶಿರಾ ತಾಲ್ಲೂಕಿನ 668.25 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವಾರ್ಡ್ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಉಳಿದಂತೆ 183.19 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಗಲೀಕರಣ ಯೋಜನೆಯ ಭೂಸ್ವಾಧೀನಕ್ಕಾಗಿ 801.51 ಕೋಟಿ ರೂ. ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ದೊರೆತಿದ್ದು, 762.18 ಕೋಟಿ ರೂ. ಬಿಡುಗಡೆಯಾಗಿದೆ, ಈವರೆಗೂ 747.35 ಕೋಟಿ ರೂ.ಗಳ ಭೂ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ನವದೆಹಲಿಯ ಕರ್ನಾಟಕ ರಾಜ್ಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಷಡಕ್ಷರಿ, ಹೆಚ್.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!