ಕುಣಿಗಲ್: ತಾಲೂಕು ಸೇರಿದಂತೆ ಸುತ್ತಮುತ್ತಲ ತಾಲ್ಲೂಕುಗಳಲ್ಲಿ ತಾಯಿ, ಮಗು ಆರೋಗ್ಯ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಇನ್ಫೋಸಿಸ್ ಸಂಸ್ಥೆಯ ಸಹಯೋಗದಲ್ಲಿ ಪಟ್ಟಣದಲ್ಲಿ ಆರಂಭಿಸಲಾಗುವ ನೂತನ ತಾಯಿ ಮಗು ಆಸ್ಪತ್ರೆ ಸಹಕಾರಿಯಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ 55 ಕೋಟಿ ವೆಚ್ಚದ ತಾಯಿ ಮಗು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಕನ್ನಡಿಗರಿಂದ ಪ್ರಾರಂಭವಾದ ಇನ್ಫೋಸಿಸ್ ಸಂಸ್ಥೆ ಇಂದು ಜಗತ್ತೆ ಮೆಚ್ಚುವಂತ ಸಾಧನೆ ಮಾಡಿದೆ, ಕೇವಲ ಸಾಧನೆ ಮಾಡುವುದಷ್ಟೆ ಅಲ್ಲದೆ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿ ಲಾಭಾಂಶ ಗಳಿಸುವುದಕ್ಕಷ್ಟೆ ಅಲ್ಲದೆ ಬಂದ ಲಾಭದಲ್ಲಿ ಸರ್ಕಾರ ಮಾಡಲಾಗದಂತಹ ಮಹತ್ಕಾರ್ಯಗಳನ್ನು ಮಾಡುತ್ತಿದೆ, ತಾಲ್ಲೂಕು ಸುತ್ತಮುತ್ತಲ ಪ್ರದೇಶಗಳಲ್ಲಿ ತಾಯಿ ಮಗು ಆರೋಗ್ಯದ ಸೂಚ್ಯಂಕದ ಬಗ್ಗೆ ಅಧ್ಯಯನ ನಡೆಸಿ ತಾಯಿ ಮಗು ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಮಾನವೀಯ ಮೌಲ್ಯ ವೃದ್ಧಿಸುವ ಕಾಳಜಿಯಿಂದ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ತಾಯಿ ಮಗು ಆಸ್ಪತ್ರೆ ಪ್ರಾರಂಭ ಮಾಡಲಾಗುತ್ತಿದ್ದು ಇದು ಈ ಭಾಗದಲ್ಲಿ ತಾಯಿ ಮಗು ಆರೋಗ್ಯ ಸಂರಕ್ಷಣೆಗೆ ಸಹಕಾರಿ ಆಗಲಿದ್ದು ಎರಡು ವರ್ಷದೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಇನ್ಫೋಸಿಸ್ ಪ್ರತಿಷ್ಠಾನದ ಉಪಾಧ್ಯಕ್ಷ ಸುನಿಲ್ ಕುಮಾರ್ ತಾರಕೇಶ್ ಮಾತನಾಡಿ, ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಅಗತ್ಯತೆಗೆ ಅನುಗುಣವಾಗಿ ಹಮ್ಮಿಕೊಳ್ಳಲಾಗುತ್ತಿದೆ, ಕುಣಿಗಲ್ ಪಟ್ಟಣದಲ್ಲಿ ಈ ಆಸ್ಪತ್ರೆ ಪ್ರಾರಂಭದಿಂದ ಮಾಗಡಿ, ನಾಗಮಂಗಲ, ತುಮಕೂರು ಜಿಲ್ಲೆಯ ವಿವಿಧ ಭಾಗದ ಜನತೆಗೆ ಅನುಕೂಲವಾಗಲಿದೆ, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಪೂರಕವಾದ ಸರ್ಕಾರಿ ಅನುಮತಿ ಪತ್ರಗಳನ್ನು ತುರ್ತಾಗಿ ಮಾಡಿ ಕೊಡುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ರಂಗನಾಥ್ ಮಾತನಾಡಿ, ನೂರು ಹಾಸಿಗೆಯ ತಾಯಿ ಮಗು ಆಸ್ಪತ್ರೆ ಕಟ್ಟಿದ ನಂತರ ಮೂಲ ಸೌಕರ್ಯ ಒದಗಿಸುವುದು ಕಷ್ಟಕರವಾಗಿದ್ದು ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ಮೂಲ ಸೌಕರ್ಯ ನೀಡಲು ಸಹಕಾರ ನೀಡಬೇಕೆಂದರು.
ಇನ್ಫೋಸಿಸ್ ಪ್ರತಿಷ್ಠಾನದ ನಿರ್ದೇಶಕ ಸಂತೋಶ್ ಆನಂತಪುರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್, ಟಿಎಚ್ಒ ಮರಿಯಪ್ಪ, ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು, ಇಒ ಜೋಸೆಫ್, ತಹಶೀಲ್ದಾರ್ ವಿಶ್ವನಾಥ್, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್, ಪುರಸಭೆ ಸದಸ್ಯರು ಹಾಜರಿದ್ದರು.
Comments are closed.