ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಅರಿವು

94

Get real time updates directly on you device, subscribe now.


ತುಮಕೂರು: ಸೆಪ್ಟಂಬರ್ 29ರ ವಿಶ್ವ ಹೃದಯ ದಿನದ ಅಂಗವಾಗಿ ಹೃದಯ ಬಳಸಿ ಹೃದಯ ತಿಳಿಯಿರಿ ಎಂಬ ಘೋಷ್ಯ ವಾಕ್ಯದೊಂದಿಗೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಮಾರಕವಾಗಿರುವ ಅಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಎನ್ಸಿಡಿಎಸ್ ಸಹಯೋಗದಲ್ಲಿ ಐಎಂಎ ಮಾಡುತ್ತಿದೆ ಎಂದು ಐಎಂಎ ತುಮಕೂರು ಜಿಲ್ಲಾಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25- 30 ವರ್ಷಗಳಿಗೆ ಹೊಲಿಕೆ ಮಾಡಿದರೆ ಈಗ ಜನರು ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಸಂಬಂಧಿ ಶ್ವಾಸಕೋಶದ ಕಾಯಿಲೆಗಳು ಮನುಷ್ಯರಲ್ಲಿ ಸಾವಿನ ಪ್ರಮಾಣ ಹೆಚ್ಚಿಸುತ್ತಿದೆ, 1990ರಲ್ಲಿ ಶೇ.37 ರಷ್ಟಿದ್ದ ಅಸಾಂಕ್ರಾಮಿಕ ರೋಗಗಳಿಂದ ಆಗುವ ಸಾವಿನ ಪ್ರಮಾಣ 2006ರ ವೇಳೆ ಶೇ.63ಕ್ಕೆ ತಲುಪಿದೆ, ಇದರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುವವರ ಸಂಖ್ಯೆ ಶೇ.53 ರಷ್ಟಿದೆ ಎಂದರು.

ಅಧಿಕ ರಕ್ತದೊತ್ತಡದಿಂದಾಗಿ ಹೃದಯ ರೋಗವಲ್ಲದೆ, ಹೃದಯಾಘಾತ, ಪಾರ್ಶ್ವವಾಯು, ಮೂತ್ರ ಪಿಂಡಗಳ ವೈಫಲ್ಯ ಉಂಟಾಗುವುದರಿಂದ ಸಾವು ಸಂಭವಿಸಬಹುದು, ಇಲ್ಲವೆ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ, ಯಾತ್ರೀಕೃತ ಜೀವನ ಶೈಲಿ, ಅತಿಯಾದ ಜಂಕ್ಫುಡ್, ದೈಹಿಕ ಶ್ರಮವಿಲ್ಲದ ಜೀವನ ಶೈಲಿಯೂ ಕಾರಣವಾಗಿದೆ, ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, 2030ರ ವೇಳೆಗೆ ಸಾವಿನ ಪ್ರಮಾಣವನ್ನು ಶೇ.50 ರಷ್ಟು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು, ಇದರ ಭಾಗವಾಗಿ ಎನ್ಸಿಡಿಎಸ್ ಮತ್ತು ಸ್ಟೀಮ್ ಯೋಜನೆ ಜಾರಿಗೆ ತರಲಾಗಿದೆ ಎಂದರು.

ಭಾರತೀಯರ ಪಾಶ್ಚಾತ್ಯ ಜೀವನ ಶೈಲಿಯ ಪರಿಣಾಮ ವಿದೇಶಿಯರಿಗಿಂತ 10 ವರ್ಷ ಮುಂಚಿತವಾಗಿಯೇ ಭಾರತೀಯರಿಗೆ ಇಂತಹ ಅಸಾಂಕ್ರಾಮಿಕ ರೋಗಗಳಿಗೆ ಯುವ ಜನರು ತುತ್ತಾಗುತ್ತಿದ್ದಾರೆ, ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವವರ ಸಂಖ್ಯೆಯನ್ನು ಶೇ.63 ರಿಂದ 55ಕ್ಕೆ ಇಳಿಸುವುದು, ಹಾಗೇಯ ಸಾವಿನ ಪ್ರಮಾಣವನ್ನು ಶೇ.27 ರಿಂದ 18ಕ್ಕೆ ಇಳಿಸುವುದು ನಮ್ಮ ಗುರಿಯಾಗಿದೆ, ಈ ನಿಟ್ಟಿನಲ್ಲಿ ಎತ್ತರಕ್ಕೆ ತಕ್ಕ ದೇಹ ತೂಕ ಹೊಂದುವುದು, ಉಪ್ಪಿನ ಪ್ರಮಾಣ ಕಡಿಮೆ ಬಳಕೆ, ಒತ್ತಡ ರಹಿತ ಜೀವನದ ಜೊತೆಗೆ ಯೋಗ, ಧ್ಯಾನ ಮತ್ತು ವ್ಯಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗ ಬಾರದಂತೆ ತಡೆಯಬಹುದಾಗಿದೆ, ಅಲ್ಲದೆ ಮೂವತ್ತು ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗುವುದು, ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕೆಂದು ಎಂದು ಡಾ.ಹೆಚ್.ವಿ.ರಂಗಸ್ವಾಮಿ ಸಲಹೆ ನೀಡಿದರು.

ವಿಶ್ವ ಹೃದಯ ದಿನದ ಅಂಗವಾಗಿ ಮಾತನಾಡಿದ ಹೃದ್ರೋಗ ತಜ್ಞ ಡಾ.ಮುದ್ದುರಂಗಪ್ಪ, ಭಾರತದಲ್ಲಿ ರೋಗ ಬಾರದಂತೆ ತಡೆಯುವ ಬದಲು ರೋಗ ಬಂದ ಮೇಲೆ ಅದನ್ನು ವಾಸಿ ಮಾಡಿಕೊಳ್ಳಲು ಕಷ್ಟ ಪಡುವವರ ಸಂಖ್ಯೆಯೇ ಹೆಚ್ಚು, 100 ಜನರಲ್ಲಿ ರಕ್ತದೊತ್ತಡ ಇದ್ದರೆ ಅವರಲ್ಲಿ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಶೇ.50, ಇವರಲ್ಲಿ ನಿಯಮಿತ ಚಿಕಿತ್ಸೆಗೆ ಒಳಗಾಗಿ ಕಾಯಿಲೆ ವಾಸಿ ಮಾಡಿಕೊಳ್ಳುವವರ ಸಂಖ್ಯೆ ಶೇ.25 ಮಾತ್ರ, ಇದರಿಂದಾಗಿ ಅಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಪ್ರಮಾಣ ಶೇ.22.5 ರಷ್ಟಿದೆ, ಜನರಲ್ಲಿ ಜಾಗೃತಿ ಮೂಡಿಸಿ ನಿಯಂತ್ರಣ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಶ್ರಮ ವಹಿಸಬೇಕಾಗಿದೆ ಎಂದರು.
ಎನ್ಸಿಡಿಎಸ್ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ನಾಗರಾಜರಾವ್ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಐಎಂಎ ಕಾರ್ಯದರ್ಶಿ ಡಾ.ಮಹೇಶ್, ಮಹಿಳಾ ಪ್ರತಿನಿಧಿ ಡಾ.ಅನಿತಾಗೌಡ ಇದ್ದರು.

Get real time updates directly on you device, subscribe now.

Comments are closed.

error: Content is protected !!