ಕಾವೇರಿ ವಿವಾದಕ್ಕೆ ಮೇಕೆದಾಟು ಯೋಜನೆಯೇ ಪರಿಹಾರ: ಎಸ್ ಪಿಎಂ

128

Get real time updates directly on you device, subscribe now.


ತುಮಕೂರು: ಕಾವೇರಿ ನ್ಯಾಯಾಧೀಕರಣದ ಐತೀರ್ಪು ಬಂದ ನಂತರವೂ ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುಗಡೆಯ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ವಿವಾದ ಭುಗಿಲೆದ್ದು, ಸಾರ್ವಜನಿಕ ನೆಮ್ಮದಿಯು ಪದೇ ಪದೆ ಕೆಡುತ್ತಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಹೋರಾಟಗಳು ಅನಿವಾರ್ಯವಾಗಿ ಸರ್ಕಾರವೂ ಮುಜುಗರಕ್ಕೆ ಒಳಗಾಗುವುದು ಸರ್ವೆ ಸಾಮಾನ್ಯವಾಗಿದೆ, ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಬಿಡುಗಡೆ ಬಗ್ಗೆ ಸರಿಯಾದ ಸೂತ್ರ ಇಲ್ಲದೇ ಇರುವುದು ಬಹಳ ತೊಂದರೆಯಾಗಿದೆ, ವಾಸ್ತವ ಪರಿಸ್ಥಿತಿ, ನ್ಯಾಯಾಧೀಕರಣದ ಆದೇಶ ಉಲ್ಲಂಘನೆಗೆ ಅನಿವಾರ್ಯ ಕಾರಣವಾಗುತ್ತಿವೆ, ಈ ಪರಿಸ್ಥಿತಿ ಹೀಗೆ ಮುಂದುವರೆಯುತ್ತಿದ್ದರೆ ಎರಡೂ ರಾಜ್ಯಗಳ ಜನತೆಯ ಮನಃಶಾಂತಿ ಭಂಗ ಉಂಟಾಗುತ್ತದೆ, ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿರುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಈಗಾಗಲೇ ತಿಳಿದಿರುವಂತೆ ಕರ್ನಾಟಕ ಮತ್ತು ತಮಿಳುನಾಡಿನ ಸಮಸ್ಯೆಗೆ ಅತ್ಯುತ್ತಮ ಪರಿಹಾರವಾಗಿ ಸಂಕಷ್ಟ ಪರಿಸ್ಥಿತಿಯನ್ನು ಅತ್ಯಂತ ಸರಳವಾಗಿ ಪರಿಹರಿಸಬಹುದಾದ ಮೇಕೇದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ರೂಪಿಸಿದ್ದು ಈ ಸಂದರ್ಭದಲ್ಲಿ ಶಾಶ್ವತ ಪರಿಹಾರವಾಗಿ ಈ ಯೋಜನೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಸಕಾರಗೊಳ್ಳಲು ಪ್ರಯತ್ನಿಸಬೇಕಿದೆ, ಈ ನಿಟ್ಟಿನಲ್ಲಿ ರಾಜಕೀಯ ಹೊರತುಪಡಿಸಿ ಎಲ್ಲಾ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಿ ದೇಶದ ಪ್ರಧಾನ ಮಂತ್ರಿಗಳ ಮನವೊಲಿಸಿ ಅವರ ಮಧ್ಯ ಪ್ರವೇಶದಿಂದ ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಈ ಯೋಜನೆಯಿಂದ ಕರ್ನಾಟಕ ಮತ್ತು ತಮಿಳುನಾಡಿನ ಜಲ ವಿವಾದ ಬಗೆಹರಿದು ಎರಡೂ ರಾಜ್ಯಗಳ ಸಂಬಂಧ ಸುಧಾರಿಸಬಹುದಾಗಿದೆ, ಪ್ರಧಾನ ಮಂತ್ರಿಗಳು ಕಾವೇರಿ ವಿವಾದ ಪರಿಹರಿಸಲು ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಮಧ್ಯ ಪ್ರವೇಶಿಸಲು ನಾನು 16ನೇ ಲೋಕಸಭೆಯ ಸದಸ್ಯನಾಗಿದ್ದ ಸಂದರ್ಭದಲ್ಲಿ ಸದನದಲ್ಲಿ ಎರಡು ಬಾರಿ ಮನವಿ ಮಾಡಿದ್ದೆನು, ಈಗಲೂ ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!