ಶಿರಾ: ಆಕಸ್ಮಿಕ ಸ್ಫೋಟದಿಂದ ಮನೆ ಗೋಡೆ ಕುಸಿದು ಆರು ಮಂದಿ ಗಾಯಗೊಂಡ ಘಟನೆ ಶಿರಾ ನಗರದ ಪಾರ್ಕ್ ಮೊಹಲ್ಲಾದಲ್ಲಿ ಶುಕ್ರವಾರ ಜರುಗಿದೆ, ಸ್ಫೋಟದ ತೀವ್ರತೆಗೆ ಮನೆಯ ಗೋಡೆ ಕುಸಿದಿದ್ದು, ಮೇಲ್ಚಾವಣಿ ಕೂಡಾ ಬಾಗಿದೆ.
ಸ್ಫೋಟಕ್ಕೆ ಅನಿಲ ಸಿಲೆಂಡರ್ ಪೈಪ್ನಲ್ಲಿ ಉಂಟಾದ ಸೋರಿಕೆಯೇ ಕಾರಣ ಎಂದು ಅಂದಾಜಿಸಲಾಗಿದ್ದು, ಈ ವೇಳೆ ಉಂಟಾದ ಬೆಂಕಿಗೆ ಮನೆ ಮಂದಿಯೆಲ್ಲಾ ಗಾಯಗೊಂಡಿದ್ದಾರೆ. ಮನೆಯ ಯಜಮಾನಿ ಗುಲಾಬ್ ಜಾನ್ (55) ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ, ಈಕೆಯ ಮಕ್ಕಳಾದ ನದೀಮ್ (34), ನಿಜಾಮ್ (32), ಸಾದಿಕಾ ಕೋಂ ನದೀಮ್ (28) ಮತ್ತು ಜಬೀ (6), ಹಮೀದಾ (4) ಎಂಬುವರಿಗೂ ಕೂಡಾ ಘಟನೆಯಲ್ಲಿ ಗಾಯಗಳಾಗಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಸಿಲಿಂಡರ್ ಸ್ಫೋಟಗೊಳ್ಳದೇ ಇರುವುದು ಸಾಕಷ್ಟು ಅನುಮಾನ ಉಂಟು ಮಾಡಿದ್ದು, ಬೆರಳಚ್ಚು ತಜ್ಞರು ಮತ್ತು ಬಾಂಬ್ ತಜ್ಞರು ಘಟನಾ ಪ್ರದೇಶ ಪರಿಶೀಲನೆ ನಡೆಸಿದ್ದಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಸ್ಥಳ ಪರಿಶೀಲನೆ ನಡೆಸಿದ್ದಾರೆ, ವಿಷಯ ತಿಳಿದ ಶಾಸಕ ಟಿ.ಬಿ.ಜಯಚಂದ್ರ, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು ಸೇರಿದಂತೆ ಅನೇಕ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.