ತುಮಕೂರು: ಸ್ವಚ್ಛತಾ ಅಭಿಯಾನ ತುಮಕೂರು- 2023 ಗ್ರಾಮ ಪಂಚಾಯತಿ ಮಟ್ಟದಲ್ಲಿನ ಅತ್ಯಂತ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮದ ಅನುಷ್ಠಾನದಿಂದ ತ್ಯಾಜ್ಯ ನಿಯಮಾನುಸಾರ ವಿಲೇವಾರಿಗೊಂಡು ಪರಿಸರ ಸಂರಕ್ಷಣೆಯೊಂದಿಗೆ ಸಾರ್ವಜನಿಕರ ಆರೋಗ್ಯದಲ್ಲಿಯೂ ಸುಧಾರಣೆ ಕಾಣಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಹೇಳಿದರು.
ಸ್ವಚ್ಚತಾ ಹಿ ಸೇವಾ ಅಭಿಯಾನದ ಅಡಿಯಲ್ಲಿ ಜಿಲ್ಲೆಯ ಕೆಸ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏರ್ಪಡಿಸಿದ್ದ ಸ್ವಚ್ಛತಾ ಅಭಿಯಾನ ತುಮಕೂರು- 2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಸೆಪ್ಟಂಬರ್ 15ರಿಂದ ಅಕ್ಟೋಬರ್ 02ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಸ್ವಚ್ಛ ತುಮಕೂರು ಅಭಿಯಾನ- 2023ರ ಕಾರ್ಯಕ್ರಮವನ್ನು ಡಿಸೆಂಬರ್ 2023ರ ಅಂತ್ಯದ ವರೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ ಎಂದರು.
ಮಹಾತ್ಮ ಗಾಂಧೀಜಿ ಅವರು ದೇವರ ಮೇಲಿನ ನಂಬಿಕೆ ನಂತರ ಸ್ವಚ್ಛತೆಗೆ ಎರಡನೇ ಆದ್ಯತೆ ನೀಡಿದ್ದರು, ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತು ಜನಾಂದೋಲನವಾಗಬೇಕು, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಜಿ.ಪ್ರಭು ಕರೆ ನೀಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಹಲವು ಆಯಾಮಗಳಲ್ಲಿ ಮಾನವ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ, ಮುಂದಿನ ಮಾನವನ ಪೀಳಿಗೆಗೆ ಪ್ಲಾಸ್ಟಿಕ್ ಬಹು ಹಾನಿ ಉಂಟು ಮಾಡುತ್ತದೆ, ಪ್ಲಾಸ್ಟಿಕ್ನ ಅವ್ಯಾಹತ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಏಕ ಬಳಕೆಯ ಪ್ಲಾಸ್ಟಿಕ್ ಉತ್ಪತ್ತಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ, ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ನಿಂದ ಆರೋಗ್ಯದ ಮೇಲೆ ಪರಿಸರ, ವನ್ಯಜೀವಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರ್ಷ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನ ತುಮಕೂರು- 2023 ಕಾರ್ಯಕ್ರಮದ ಸಿದ್ಧತೆ, ವೇಳಾಪಟ್ಟಿ, ರೂಪುರೇಷೆ ಕುರಿತು ಮಾಹಿತಿ ನೀಡಿದರು.
ಕೆಸ್ತೂರು ಗ್ರಾಪಂ ಅಧ್ಯಕ್ಷರಾದ ಸುನಿತ.ಸಿ. ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕ ಎಸ್.ಎಸ್.ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್, ಪಿಆರ್ಇಡಿ ಕಾರ್ಯಪಾಲಕ ಅಭಿಯಂತರು ಬಿ.ತಿಮ್ಮರಾಯಪ್ಪ, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯಪಾಲಕ ಅಭಿಯಂತರ ರವೀಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಜಿಲ್ಲೆಯ ಗ್ರಾಮಗಳಲ್ಲಿ ಸಮಗ್ರ ಸ್ವಚ್ಛತಾ ಅಭಿಯಾನ
ಸ್ವಚ್ಛತಾ ಅಭಿಯಾನ ತುಮಕೂರು- 2023 ಕಾರ್ಯಕ್ರಮ ಜಿಲ್ಲಾದ್ಯಂತ ಏಕ ಕಾಲದಲ್ಲಿ ಆಯೋಜಿಸಲಾಯಿತು, ಜಿಲ್ಲೆಯ ಕೆಸ್ತೂರು ಗ್ರಾಮ ಪಂಚಾಯತ್ನಲ್ಲಿ ಚಾಲನೆ ನೀಡಿದ ನಂತರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ಏಕ ಕಾಲದಲ್ಲಿ ಹಮ್ಮಿಕೊಳ್ಳಲಾದ ಶ್ರಮದಾನ ಶಿಬಿರಗಳಲ್ಲಿ, ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲಾ ಹಂತದ ಹಾಲಿ ಮತ್ತು ಮಾಜಿ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸಿ ಸಮಗ್ರ ಸ್ವಚ್ಛ ಗ್ರಾಮಕ್ಕೆ ಕೈಜೋಡಿಸಿ ಆಂದೋಲನ ಯಶಸ್ವಿಗೊಳಿಸಿದರು.
Comments are closed.