ಕುಣಿಗಲ್: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದ ಖಂಡಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಕುಣಿಗಲ್ ಬಂದ್ ಯಶಸ್ವಿಯಾಯಿತು.
ಒಕ್ಕೂಟದ ಸದಸ್ಯರು ಪೂರ್ವಭಾವಿಯಾಗಿ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿದ ವರ್ತಕರು, ಚಿನ್ನಬೆಳ್ಳಿ ಮಾರಾಟ ಮಳಿಗೆ, ಬೀದಿಬದಿ ವ್ಯಾಪಾರಿಗಳು, ಹೋಟೆಲ್, ಪಟ್ಟಣದ ಶಾಲಾ ಕಾಲೇಜುಗಳು ಸೇರಿದಂತೆ ಇತರೆ ಚಟುವಟಿಕೆ ಬಂದ್ಗೆ ಬೆಂಬಲಿಸಿ ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿದ್ದರು, ಖಾಸಗಿ ಬಸ್ ಸಾರಿಗೆ ಸಂಸ್ಥೆ ಬಸ್ಗಳು ಸಂಚಾರ ನಿಲ್ಲಿಸಿದ್ದವು, ಸರ್ಕಾರಿ ಕಚೇರಿಯಲ್ಲಿ ಸಿಬ್ಬಂದಿ ವಿರಳವಾಗಿದ್ದು ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು, ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಸಂಘಟಿತರಾದ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸರ್ಕಾರದ ನಡೆ ಖಂಡಿಸಿ ತಾಲೂಕು ಕಚೇರಿ ಆವರಣ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು.
ಡಾ.ರಾಜ್ ಅಭಿಮಾನಿ ಸಂಘದ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಕಾವೇರಿ ನೀರು ಹರಿಸುವ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ, ರಾಜ್ಯ ಕಂಡ ದಿಟ್ಟ ಸಿಎಂ ಬಂಗಾರಪ್ಪನವರ ರೀತಿ ಕಠಿಣ ನಿರ್ಧಾರ ಕೈಗೊಂಡು ಕಾವೇರಿ ನೀರು ರಕ್ಷಣೆ ಮಾಡಬೇಕೆಂದರು.
ಕರವೇ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕಾವೇರಿ ವಿಷಯ ದಿನೇ ದಿನೆ ಜಟಿಲವಾಗುತ್ತಿದೆ, ರಾಜ್ಯದ ಸಂಸದರು ನಿರ್ಲಕ್ಷ್ಯ ವಹಿಸಿದ್ದಾರೆ, ಮಾಜಿ ಪ್ರಧಾನಿ ಹಿರಿಯರಾದ ದೇವೇಗೌಡರು ಧ್ವನಿ ಎತ್ತಿದ್ದರೂ ಸಂಸದರು ಕೇಂದ್ರದಲ್ಲಿ ಮೌನ ವಹಿಸಿರುವುದು ಖಂಡನೀಯ ಎಂದರು.
ಕಸಾಪ ಅಧ್ಯಕ್ಷ ರಮೇಶ್ ಮಾತನಾಡಿ, ರಾಜ್ಯದಲ್ಲಿ ಬರಗಾಲ ಇದ್ದರೂ ಕಾವೇರಿ ನೀರು ಹರಿಸಲು ನ್ಯಾಯಾಧಿಕರಣ ಮಂಡಳಿ ಆದೇಶ ನೀಡಿರುವುದು ಸರಿಯಲ್ಲ, ಬರಗಾಲದ ಸಂಕಷ್ಟ ಸೂತ್ರ ರಚನೆಯಾಗಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ರಾಜ್ಯ ಸರ್ಕಾರವೂ ರಾಜ್ಯದ ಬರಗಾಲ ಸ್ಥಿತಿ ಮನವರಿಕೆ ಮಾಡಿ ಕೊಡುವಲ್ಲಿ ಎಡವಿದ್ದು ಇನ್ನಾದರೂ ಸಮರ್ಪಕ ವಾದ ಮಂಡನೆ ಮಾಡಬೇಕು, ಇಲ್ಲವಾದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವಂತಾಗುತ್ತದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಮಾತನಾಡಿ, ರಾಜ್ಯದ ಸಂಸದರ ನಡೆ ಖಂಡನೀಯ, ಶತಮಾನಗಳಿಂದಲೂ ಇರುವ ಕಾವೇರಿ ವಿವಾದಕ್ಕೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಕೇಂದ್ರದ ನೇತೃತ್ವದಲ್ಲಿ ಎರಡೂ ರಾಜ್ಯಗಳು ಮುಕ್ತವಾಗಿ ಚರ್ಚಿಸಬೇಕು ಎಂದರು.
ವಿವಿಧ ಸಂಘಟನೆಯ ಮುಖಂಡರಾದ ಸಂತೀಶ್.ಜಿ, ಶ್ರೀನಿವಾಸ, ಕೋಟೆ ನಾಗಣ್ಣ, ವೆಂಕಟೇಶ, ಪ್ರಶಾಂತ್, ದೀಪಕ್, ಗಿರೀಶ್, ರವೀಶ್, ಕಾರ್ತೀಕ್, ಶಿವಕುಮಾರ್, ರಮೇಶ, ಕೃಷ್ಣರಾಜು, ಧನರಾಜ್, ನಗುತ ರಂಗನಾಥ್, ದಿನೇಶ್ ಕುಮಾರ್, ರಘು, ಮನೋಜ್, ನಿಖಿಲ್ಗೌಡ, ಜಯಕುಮಾರ್, ಕುಮಾರಾಚಾರ್, ದತ್ತಾತ್ರೇಯ ಇತರರು ಇದ್ದರು. ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
Comments are closed.