ತಮಿಳುನಾಡಿಗೆ ನೀರು ಹರಿಸೋದು ನಿಲ್ಲಿಸಿ

ತುಮಕೂರಿನಲ್ಲಿ ಸರ್ಕಾರದ ವಿರುದ್ಧ ರೈತ ಸಂಘ ಆಕ್ರೋಶ

123

Get real time updates directly on you device, subscribe now.


ತುಮಕೂರು: ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಆದೇಶದಂತೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಹಾಗೂ ಪ್ರತಿಬಾರಿಯೂ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೂ ತುಟಿ ಬಿಚ್ಚದ ಸಂಸದ ಕ್ರಮ ಖಂಡಿಸಿ ಒಕ್ಕೂಟ ಸರಕಾರದ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಟೌನ್ಹಾಲ್ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಸಮಾವೇಶಗೊಂಡ ರೈತ ಸಂಘದ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ, ಜನ ವಿರೋಧಿ ನೀತಿ ಖಂಡಿಸಿ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೆಲ ಕಾಲ ಡೀಸಿ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ರೈತ ಸಂಘಟನೆಯ ಹೋರಾಟಗಾರರನ್ನು ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಮುಂಗಾರು ಮಳೆ ವೈಫಲ್ಯದಿಂದ ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿದ ಸುಮಾರು 32 ತಾಲೂಕುಗಳಲ್ಲಿ ತೀವ್ರ ಬರ ಕಾಣಿಸಿಕೊಂಡಿದೆ, ಬೆಂಗಳೂರು, ತುಮಕೂರು ಹಾಗೂ ಹಾಸನ ಜಿಲ್ಲೆಯ ಸುಮಾರು 2 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಕುಡಿಯಲು ವಾರ್ಷಿಕ 27 ಟಿಎಂಸಿಗೂ ಹೆಚ್ಚು ನೀರಿನ ಅಗತ್ಯವಿದೆ, ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿದ ಹಾರಂಗಿ ಕಬಿನಿ, ಹೇಮಾವತಿ, ಕೆಆರ್ಎಸ್ ಡ್ಯಾಂಗಳಲ್ಲಿ ನೀರನ್ನೇ ನಂಬಿ ಬಿತ್ತನೆ ಮಾಡಿರುವ ಲಕ್ಷಾಂತರ ಎಕರೆ ಭತ್ತ, ಕಬ್ಬು ಹಾಗೂ ತೋಟಗಾರಿಕಾ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ, ಹಾಲಿ ಇರುವ ನೀರು ಕುಡಿಯುವುದಕ್ಕೂ ಸಾಕಾಗುವುದಿಲ್ಲ, ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಎರಡನೇ ಬೆಳೆಗೆ ನೀರು ಹರಿಸಬೇಕೆಂಬ ಪ್ರಾಧಿಕಾರದ ಆದೇಶ ಖಂಡನೀಯ, ಕೇಂದ್ರ ಸರಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಎರಡು ಕಡೆಯ ರಾಜಕೀಯ ಮತ್ತು ರೈತ ಮುಖಂಡರ ಸಮಕ್ಷಮ ಮಾತನಾಡಿ, ವಾಸ್ತವಾಂಶ ಚರ್ಚಿಸಿ ಸಂಕಷ್ಟ ಸೂತ್ರ ರಚಿಸಬೇಕು ಎಂಬುದು ರೈತ ಸಂಘದ ಆಗ್ರಹವಾಗಿದೆ, ಅಲ್ಲಿಯವರೆಗೆ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕೆಂಬುದು ರೈತ ಸಂಘದ ಒತ್ತಾಯವಾಗಿದೆ ಎಂದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಂಕಷ್ಟ ಸಮಯದಲ್ಲಿ ಯಾವ ರೀತಿ ನೀರು ಬಳಕೆ ಮಾಡಬೇಕೆಂಬ ಸಂಕಷ್ಟ ಸೂತ್ರ ಸಿದ್ಧಪಡಿಸದೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಆದೇಶ ನೀಡಿದ್ದು, ಇದನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿರುವುದು ಅವೈಜ್ಞಾನಿಕವಾಗಿದೆ, ಸರಕಾರ ಕಾವೇರಿ ನೀರು ನಿರ್ವಹಣಾ ಸಮಿತಿಯ ಮುಂದೆ ಸಮರ್ಪಕ ವಾದ ಮಂಡಿಸಿ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು, ಹಾಗೆಯೇ ಎರಡು ರಾಜ್ಯಗಳ ನಡುವಿನ ನೀರು ಹಂಚಿಕೆ ವಿವಾದ ತಾರಕಕ್ಕೇರಿದ್ದರೂ ಪ್ರಧಾನಮಂತ್ರಿ ಮತ್ತು ರಾಜ್ಯದ ಸಂಸದರು ಮೌನಕ್ಕೆ ಶರಣಾಗಿರುವುದು ಖಂಡನೀಯ, ಪ್ರಾಧಿಕಾರದ ಆದೇಶ ಪಾಲಿಸಲು ಸರಕಾರ ಹೇಮಾವತಿ ಅಣೆಕಟ್ಟೆಯಿಂದಲೂ ನೀರು ಹರಿಸಲು ಮುಂದಾಗಿರುವುದು ಭವಿಷ್ಯದಲ್ಲಿ ತುಮಕೂರು ಜಿಲ್ಲೆಯ ಜನರ ಕುಡಿಯುವ ನೀರಿಗೂ ಸಂಚಕಾರ ತರಲಿದೆ, ಹಾಗಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿಯೂ ರೈತ ಸಂಘ ಈ ರೀತಿಯ ಪ್ರತಿಭಟನೆ ಹಮ್ಮಿ ಕೊಂಡಿದೆ, ಸರಕಾರ ಇದೇ ರೀತಿ ಧೋರಣೆ ಮುಂದುವರೆಸಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ಸಂಬಂಧ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗೆ ಕಳುಹಿಸಲು ಜಿಲ್ಲಾಧಿಕಾರಿ ಶ್ರೀನಿವಾಸ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ತಾಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ, ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ತಾಲೂಕು ಕಾರ್ಯದರ್ಶಿ ತಿಮ್ಮೇಗೌಡ, ಯುವ ಘಟಕದ ಜಿಲ್ಲಾ ಸಂಚಾಲಕ ಮಹೇಶ್, ಮುಖಂಡರಾದ ಕೃಷ್ಣಪ್ಪ, ನಾರಾಯಣಪ್ಪ, ರಂಗಸ್ವಾಮಯ್ಯ, ಮೋಹನ್, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!