ಬಂದ್ಗೆ ತುಮಕೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

ಅಂಗಡಿ, ಮುಂಗಟ್ಟುಗಳು ಬಂದ್- ರಸ್ತೆಗಳು ಖಾಲಿ ಖಾಲಿ- ಸಿಎಂ ಸ್ಟಾಲಿನ್ ಅಣಕು ಶವಯಾತ್ರೆ

115

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಮಳೆ ಕೊರತೆ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಕಲ್ಪತರುನಾಡು ತುಮಕೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಬಂದ್ನ ಯಾವುದೇ ಬಿಸಿ ತಟ್ಟಿಲ್ಲ, ಎಂದಿನಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸಿದವು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸುಮಾರು 50ಕ್ಕೂ ಅಧಿಕ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದಲೇ ರಸ್ತೆಗಿಳಿದಿದ್ದು, ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿರುದ್ಧ ಆಕ್ರೋಶದ ಘೋಷಣೆ ಕೂಗಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಸೇನೆಯ ಧನಿಯಾಕುಮಾರ್, ಶಂಕರ್, ರೈತ ಸಂಘಟನೆಯ ಗೋವಿಂದರಾಜು ಸೇರಿದಂತೆ ಮತ್ತಿತರರ ಹೋರಾಟಗಾರರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಗ್ಗೆ 7 ಗಂಟೆಯಿಂದಲೇ ತುಮಕೂರು, ಕುಣಿಗಲ್, ತಿಪಟೂರು, ತುರುವೇಕೆರೆ, ಚಿಕ್ಕನಾಯಕನ ಹಳ್ಳಿ, ಗುಬ್ಬಿ, ಕೊರಟಗೆರೆ, ಮಧುಗಿರಿ, ಶಿರಾ ಹಾಗೂ ಪಾವಗಡ ತಾಲ್ಲೂಕಿನಲ್ಲಿ ಬಂದ್ ಬಿಸಿ ತಟ್ಟಿದ್ದು, ಸಾರಿಗೆ ಸಂಸ್ಥೆಗಳ ಬಸ್ಗಳನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲಾ ಖಾಸಗಿ ವಾಹನಗಳು ಸಂಚಾರ ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ.
ತುಮಕೂರು ನಗರದ ಪ್ರಮುಖ ವ್ಯಾಪಾರ ವಹಿವಾಟು ನಡೆಯುವ ಮಂಡಿಪೇಟೆ, ಎಂ.ಜಿ.ರಸ್ತೆ, ಎಸ್.ಎಸ್.ಪುರಂ, ಎಸ್ಐಟಿ ಮುಖ್ಯರಸ್ತೆ, ಬಿ.ಹೆಚ್.ರಸ್ತೆ, ಗುಬ್ಬಿ ಗೇಟ್ಗಳಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ಬೀದಿಬದಿ ಅಂಗಡಿಗಳು, ಹೋಟೆಲ್ಗಳು ಸ್ವಯಂ ಪ್ರೇರಿತವಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದವು.

ನಗರಗ ಹೊರ ವಲಯದಲ್ಲಿ ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್ಗಳು ಬೆಳಗ್ಗೆ 11 ಗಂಟೆಯ ವರೆಗೆ ಬಾಗಿಲು ತೆರೆದಿದ್ದವಾದರೂ 11 ಗಂಟೆ ನಂತರ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಮಾಡಲಾಗಿತ್ತು.
ನಗರದ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಗಳು ಸಂಚರಿಸಲು ಸಿದ್ಧವಾಗಿದ್ದವಾದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು, ಆದರೆ ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು, ಶಾಲಾ- ಕಾಲೇಜುಗಳು ರಜೆ ಇಲ್ಲದೇ ಇರುವುದರಿಂದ ನೌಕರರು, ಶಿಕ್ಷಕರು, ವಿದ್ಯಾರ್ಥಿಗಳು ಮಾತ್ರ ಬಸ್ಗಳಲ್ಲಿ ಸಂಚರಿಸುತ್ತಿದ್ದ

ದೃಶ್ಯ ಕಂಡು ಬಂತು.
ಅಲ್ಲೊಂದು ಇಲ್ಲೊಂದು ಎಂಬಂತೆ ಆಟೋ ರಿಕ್ಷಾಗಳು ರಸ್ತೆಗಿಳಿದಿದ್ದವು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಯಾವುದೇ ರೀತಿಯ ಆಟೋ ರಿಕ್ಷಾಗಳ ಸಂಚಾರವು ಕಂಡು ಬರಲಿಲ್ಲ.
ಇನ್ನು ಬಂದ್ ಹಿನ್ನೆಲೆಯಲ್ಲಿ ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಗಳು, ಹಾಲಿನ ಮಳಿಗೆಗಳು, ತರಕಾರಿ ಅಂಗಡಿಗಳು ಎಂದಿನಂತೆ ತೆರೆದಿದ್ದವು, ಉಳಿದಂತೆ ಇತರೆ ಅಂಗಡಿಗಳು ಬಂದ್ ಆಗಿದ್ದರೆ ಪೆಟ್ರೋಲ್ ಬಂಕ್ಗಳು ಮಾತ್ರ ಕಾರ್ಯ ನಿರ್ವಹಿಸಿದವು.
ಕರ್ನಾಟಕ ಬಂದ್ಗೆ ಹೋಟೆಲ್ ಮಾಲೀಕರು, ಚಿತ್ರಮಂದಿರ ಮಾಲೀಕರು, ಕಾರ್ಮಿಕರು, ಎಪಿಎಂಸಿ ಹಮಾಲಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಣಕು ಶವಯಾತ್ರೆ

ನಗರದ ಟೌನ್ಹಾಲ್ ವೃತ್ತದಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಣಕು ಶವಯಾತ್ರೆ ನಡೆಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಟ್ಟ ಕಟ್ಟಿ, ಚಪ್ಪಲಿಯಿಂದ ಹೊಡೆದು ಬಾಯಿ ಬಡಿದುಕೊಂಡು ಆಕ್ರೋಶ ಹೊರ ಹಾಕಿ, ಅಣಕು ಶವಕ್ಕೆ ಅಗ್ನಿಸ್ಪರ್ಶ ಮಾಡಿದರು.

ಶಾಲಾ-ಕಾಲೇಜುಗಳಗೆ ರಜೆ ಇಲ್ಲ
ತುಮಕೂರು ಜಿಲ್ಲೆಯಲ್ಲಿ ಬಂದ್ ಪ್ರಯುಕ್ತ ಯಾವುದೇ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿಲ್ಲ, ಆದರೆ ಕೆಲ ಶಾಸಗಿ ಶಾಲೆಗಳು ಮುನ್ನೆಚ್ಚರಿಕೆ ಕ್ರಮವಾಗಿ ಆನ್ಲೈನ್ ತರಗತಿಗಳನ್ನು ನಡೆಸಿದರೆ ಸರ್ಕಾರಿ ಶಾಲಾ- ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಕನ್ನಡ ಪರ ಒಕ್ಕೂಟದ ಗೌರವಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಕಾವೇರಿ ನೀರಿನ ಜೊತೆಗೆ ಹೇಮಾವತಿ ನೀರು ಸಹ ತಮಿಳುನಾಡಿಗೆ ಹರಿದು ಹೋಗುತ್ತಿದೆ, ಇದು ಖಂಡನೀಯ, ರಾಜ್ಯದ 28 ಜನ ಸಂಸದರು ಸೀರೆ ಉಟ್ಟು ಬಳೆ ಹಾಕಿಕೊಂಡು ಮನೆಯಲ್ಲಿ ಇರುವುದು ಒಳಿತು, ಈ ಹೋರಾಟದಲ್ಲಿ ಯಾವೊಬ್ಬ ಸಂಸದರು ಭಾಗವಹಿಸಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಶಂಕರ್ ಮಾತನಾಡಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಸರಿಯಲ್ಲ, ಇದನ್ನು ವಿರೋಧಿಸಿ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂಪೂರ್ಣ ಮಾಡಲಾಗಿದೆ, ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕದ ಜನ ಸ್ವಾಭಿಮಾನ ಮೆರೆಯಬೇಕು, ತಮಿಳುನಾಡಿನ ಜನರನ್ನು ನೋಡಿ ನಾವು ಕಲಿಯಬೇಕು, ಕರ್ನಾಟಕದಲ್ಲಿ ಒಗ್ಗಟ್ಟಿನ ಕೊರತೆಯಿದೆ ಎಂದರು.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ಹಕ್ಕುಗಳನ್ನು ಮರೆಯುತ್ತಿವೆ, ಹೇಮಾವತಿ ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಬೆನ್ನೆಲುಬಾಗಿದೆ, ಕಾವೇರಿ ನೀರನ್ನು ತಮಿಳುನಾಡು ಪ್ರಾಧಿಕಾರ, ನ್ಯಾಯಾಲಯಗಳ ಮುಖೇನ ತಮ್ಮ ಹಕ್ಕನ್ನು ಕಾಪಾಡಿಕೊಳ್ಳುತ್ತಿದೆ, ಕೂಡಲೇ ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಾನೂನು ಮೂಲಕವೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ಹಾಗೂ ಅಡಿಷನಲ್ ಎಸ್ಪಿ ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಬೆಳ್ಳಾವಿಯ ಕಾರದ ಮಠ ಸ್ವಾಮೀಜಿ, ಶಂಕರ್, ರಂಜು, ಸೋಮಶೇಖರ್, ರಂಗಸ್ವಾಮಿ, ಅರುಣ, ಅನಿಲ, ಬಾಬು, ನಟರಾಜು, ಬಸವರಾಜು, ನಟರಾಜು ಗೌಡ, ಕಿಶೋರ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆ, ರೈತ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!