ರೈತರಿಂದ ಬೆಂಗಳೂರು ಚಲೋ ಪಾದಯಾತ್ರೆ

ಕೊಬ್ಬರಿಗೆ ಕ್ವಿಂಟಾಲ್ಗೆ 20 ಸಾವಿರ ರೂ. ಬೆಂಬಲಗೆ ಆಗ್ರಹ

116

Get real time updates directly on you device, subscribe now.


ತುಮಕೂರು: ಕಲತ್ಪರು ನಾಡಿಗೆ ಪ್ರಮುಖ ವಾಣಿಜ್ಯ ಬೆಳೆಯಾದ ಕೊಬ್ಬರಿಗೆ ಕ್ವಿಂಟಾಲ್ಗೆ 20 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು ಹಾಗೂ ರಾಜ್ಯ ಸರಕಾರ 5 ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಬೇಕೆಂದು ಆಗ್ರಹಿಸಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದ್ದು, ರೈತ ಸಂಘಟನೆಯ ಕಾರ್ಯಕರ್ತರು ಪಾದಯಾತ್ರೆಗೆ ಅದ್ದೂರಿಯ ಸ್ವಾಗತ ಕೋರಿ ಬೀಳ್ಕೊಟ್ಟರು.

ಈ ವೇಳೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರಾಜ್ಯದ ಸುಮಾರು 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ, ಕೇಂದ್ರ ಸರಕಾರದ ನೀತಿಯಿಂದಾಗಿ ಕ್ವಿಂಟಾಲ್ ಕೊಬ್ಬರಿ ಬೆಲೆ 7500- 8000ಕ್ಕೆ ಕುಸಿದಿದೆ, ಸರಕಾರವೇ ಘೋಷಿಸಿದ ಬೆಂಬಲ ಬೆಲೆ 11750 ರೂ. ಗಳಿಗಿಂತ ಕಡಿಮೆ ಇದ್ದರೂ ರೈತರ ನೆರವಿಗೆ ಸರಕಾರ ಬರುತ್ತಿಲ್ಲ, ಚುನಾವಣಾ ಪೂರ್ವದಲ್ಲಿ ಹೋರಾಟಗಾರರಿಗೆ ಕ್ವಿಂಟಾಲ್ ಕೊಬ್ಬರಿಗೆ 15000 ರೂ. ನೀಡುವ ಭರವಸೆ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ವಿಂಟಾಲ್ ಕೊಬ್ಬರಿಗೆ 1250 ರೂ. ಪ್ರೋತ್ಸಾಹಧನ ಘೋಷಣೆ ಮಾಡಿ ಕೈತೊಳೆದು ಕೊಂಡಿದೆ, ಕೇಂದ್ರ ಮತ್ತು ರಾಜ್ಯ ಸರಕಾರ ರೈತವಿರೋಧಿ ನೀತಿ ಖಂಡಿಸಿ ಕಳೆದ ಸೆಪ್ಟಂಬರ್ 26 ರಂದು ಅರಸೀಕೆರೆಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ಇದುವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಪಾದಯಾತ್ರಿಗಳನ್ನು ಸಂಪರ್ಕಿಸಿಲ್ಲ, ಸರಕಾರದ ಈ ನಿರ್ಲಕ್ಷ ಭಾವನೆ ಖಂಡಿಸಿ ಹೆದ್ದಾರಿ ತಡೆದು, ಹೆದ್ದಾರಿಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದೇವೆ, ಅಕ್ಟೋಬರ್ 04 ರಂದು ಬೆಂಗಳೂರು ತಲುಪಲಿರುವ ಕೊಬ್ಬರಿ ರೈತರ ಪಾದಯಾತ್ರೆ, ವಿಧಾನಸೌಧ ಮುತ್ತಿಗೆ ಹಾಕಲಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತುಮಕೂರು ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಕೊಬ್ಬರಿ ಬೆಳೆಯುವ ಪ್ರದೇಶಗಳಲ್ಲಿ ತುಮಕೂರು ಅತ್ಯಂತ ಪ್ರಮುಖವಾದುದ್ದು, ಸುಮಾರು 2.50 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಕೊಬ್ಬರಿ ಬೆಳೆಯುತ್ತಾರೆ, ತೋಟಗಾರಿಕಾ ಇಲಾಖೆಯೇ ನೀಡಿದ ಮಾಹಿತಿಯಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 16760 ರೂ. ಖರ್ಚಾಗುತ್ತದೆ, ಆದರೆ ಸರಕಾರ 11,750 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ, ಆದರೆ ಮುಕ್ತ ಮಾರುಕಟ್ಟೆಯಲ್ಲಿ ಕೇವಲ 7500- 8000 ಸಾವಿರಕ್ಕೆ ಮಾತ್ರ ಕೊಂಡುಕೊಳ್ಳಲಾಗುತ್ತಿದೆ, ಜಿಲ್ಲೆಯಲ್ಲಿ 11 ಜನ ಶಾಸಕರು, ಮೂವರು ಸಂಸದರಿದ್ದರೂ ಒಬ್ಬರೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ನಮ್ಮ ಪಾದಯಾತ್ರೆ ಬೆಂಗಳೂರು ತಲುಪುವುದರ ಒಳಗೆ ಸರಕಾರದೊಂದಿಗೆ ಮಾತನಾಡಿ ಕೊಬ್ಬರಿಗೆ ಕನಿಷ್ಠ 25000 ರೂ. ಬೆಂಬಲ ಬೆಲೆ ಘೋಷಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಪಾದಯಾತ್ರೆಯಲ್ಲಿ ರಾಜ್ಯ ಉಪಾಧ್ಯಕ್ಷ ಬಸವನಹಳ್ಳಿ ಭೈರೇಗೌಡ, ತಿಪಟೂರಿನ ಶಾಂತಕುಮಾರ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧನಂಜಯ್ ಆರಾಧ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರು, ಕಾರ್ಯಕರ್ತರು, ರೈತರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!