ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ಗಿಡ- ಮರಗಳನ್ನು ಕಡಿದು ಅರಣ್ಯ ಪ್ರದೇಶ ನಾಶ ಮಾಡುತ್ತಿರುವುದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ ವನ್ಯಜೀವಿ ಸಂಕುಲ ವಿನಾಶದ ಅಂಚಿಗೆ ತಲುಪುತ್ತಿವೆ, ವನ್ಯಜೀವಿ ಸಂಕುಲದ ವಿನಾಶದಿಂದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.
ನಗರದ ಎಂಪ್ರೆಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರಣ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಜಿಲ್ಲೆಯಲ್ಲಿ ದೇವರಾಯನ ದುರ್ಗ, ಬುಕ್ಕಾಪಟ್ಟಣ ಸೇರಿದಂತೆ ವಿವಿಧ ಅರಣ್ಯ ಪ್ರದೇಶದಲ್ಲಿ ಬೇರೆಲ್ಲೂ ಕಾಣಸಿಗದ ವಿವಿಧ ಪ್ರಭೇದದ ಪಕ್ಷಿ ಹಾಗೂ ಹಾವಿನ ಸಂತತಿ ಕಾಣಬಹುದಾಗಿದ್ದು, ಈ ಅಪರೂಪದ ಪ್ರಭೇದಗಳನ್ನು ಸಂರಕ್ಷಿಸಬೇಕು, ಅರಣ್ಯ ಪ್ರದೇಶ ಒತ್ತುವರಿ, ಪ್ರಾಣಿಗಳ ಬೇಟೆ, ಜಾಗತಿಕ ತಾಪಮಾನ ಏರಿಕೆ, ಪರಿಸರ ನಾಶದಿಂದ ವನ್ಯ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ, ಮಧುಗಿರಿ ಭಾಗದಲ್ಲಿ ಕೃಷ್ಣಾಮೃಗಗಳ ಅರಣ್ಯಧಾಮ ಎಂದು ಘೋಷಣೆ ಮಾಡಿದ್ದರಿಂದ ಕೃಷ್ಣಮೃಗಗಳ ಬೇಟೆಯಾಡುವುದು ನಿಂತಿದೆ, ಇದರಿಂದ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಒತ್ತುವರಿಯಿಂದ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುತ್ತಿವೆ, ಅಲ್ಲದೆ ಕಾಡಿನಲ್ಲಿ ಕುಡಿಯಲು ನೀರು, ಆಹಾರ ದೊರೆಯದಿದ್ದಾಗಲೂ ಪ್ರಾಣಿಗಳು ಸ್ವಾಭಾವಿಕವಾಗಿ ಕಾಡಿನಿಂದ ನಾಡಿನ ಕಡೆಗೆ ಬರುವುದರಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಪ್ರಾಣಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ. ಮನುಕುಲ ರಕ್ಷಣೆಯಾಗಬೇಕಾದರೆ ವನ್ಯಜೀವಿಗಳ ರಕ್ಷಣೆಯೂ ಆಗಬೇಕು ಎಂದು ತಿಳಿಸಿದರು.
ಜಾಗತಿಕ ತಾಪಮಾನ ಏರಿಕೆ ಆಗುತ್ತಿರುವುದರಿಂದ ವನ್ಯಜೀವಿ ಸಂತತಿ ನಾಶವಾಗುತ್ತಿವೆ, ಗಿಡ- ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಿಸಿದಲ್ಲಿ ಜಾಗತಿಕ ತಾಪಮಾನದ ಪ್ರಮಾಣ ತಗ್ಗಿಸಬಹುದು ಎಂದು ಸಲಹೆ ನೀಡಿ ದೇಶದಲ್ಲಿ ಹಸಿರು ಹೊದಿಕೆ ಪ್ರಮಾಣ ಶೇ.33 ಹಾಗೂ ರಾಜ್ಯದಲ್ಲಿ ಶೇ.20 ರಷ್ಟಿದ್ದು, ತುಮಕೂರಿನಲ್ಲಿ ಶೇ.12.4 ರಷ್ಟು ಮಾತ್ರ ಇದೆ, ಮುಂದಿನ 2 ವರ್ಷಗಳಲ್ಲಿ ಜಿಲ್ಲೆಯ ಹಸಿರು ಹೊದಿಕೆ ಪ್ರಮಾಣ ಶೇ.16 ಕ್ಕೇರಿಸಬೇಕು, ಹಸಿರು ಹೊದಿಕೆ ಪ್ರಮಾಣ ಹೆಚ್ಚಿಸಿ ಜಾಗತಿಕ ತಾಪಮಾನ ತಗ್ಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಪ್ರತಿವರ್ಷ 15 ಲಕ್ಷ ಸಸಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕೆಂದು ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯಾಕಾರ್ಯ ನಿರ್ವಾಹಣಾ ಅಧಿಕಾರಿಗಳಿಗೆ ಹಾಗೂ ಹೊಸ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡುವ ಪೂರ್ವದಲ್ಲಿ ನಿವೇಶನಗಳ ರಸ್ತೆ ಬದಿಗಳಲ್ಲಿ ಕಡ್ಡಾಯವಾಗಿ ಗಿಡಗಳನ್ನು ನೆಡಬೇಕೆಂದು ಮಾಲೀಕರಿಗೆ ನಿಬಂಧನೆ ಹಾಕಬೇಕೆಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಆಕಾಶ ಕಾಯಗಳಲ್ಲಿ ಜೀವ ಸಂಕುಲಗಳಿರುವ ಏಕೈಕ ಗ್ರಹವೇ ಭೂಮಿ, ಯಾವುದೇ ಅಪೇಕ್ಷೆಯಿಲ್ಲದೆ ಜೀವ ಸಂಕುಲಗಳಿಗೆ ಕುಡಿಯಲು ನೀರು, ತಿನ್ನಲು ಆಹಾರ ಸಂಪನ್ಮೂಲ ನೀಡುತ್ತಿರುವ ಪರಿಸರ ಹಾಳು ಮಾಡದೆ ಸಂರಕ್ಷಿಸುವ ಮೂಲಕ ಭೂಮಿಯ ಋಣ ತೀರಿಸಬೇಕು, ಕೊರೊನಾ ಸಂದರ್ಭದಲ್ಲಿ ಹಣ ನೀಡಿದರೂ ಆಮ್ಲಜನಕ ದೊರೆಯದ ಪರಿಸ್ಥಿತಿ ಎದುರಾಗಿತ್ತು, ಪರಿಸರ ನಾಶವಾದರೆ ಜೀವ ಸಂಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ, ಹಾಗಾಗಿ ಜಿಲ್ಲಾ ಪಂಚಾಯತಿಯಿಂದ ಪ್ರತಿ ಗ್ರಾಮ ಪಂಚಾಯತಿಯಲ್ಲಿಯೂ 1000 ಗಿಡ ನೆಟ್ಟು ಬೆಳೆಸುವ ಹಸಿರು ಗ್ರಾಮ ಅಭಿಯಾನವನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ವನ್ಯಜೀವಿ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ, ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಅರಣ್ಯ ಒತ್ತುವರಿಯೇ ಪ್ರಮುಖ ಕಾರಣ, ಇಡೀ ಭೂಮಿ ನಮ್ಮ ಸ್ವತ್ತು ಎಂಬ ಸ್ವಾರ್ಥ ಭಾವನೆಯನ್ನು ನಾವೆಲ್ಲ ಬಿಡಬೇಕು, ಹೋಂ ಸ್ಟೇ, ಹೋಟೆಲ್, ರೆಸಾರ್ಟ್ಗಳ ನಿರ್ಮಾಣದಿಂದ ಕಾಡೆಲ್ಲ ನಾಡಾಗಿ ಪರಿವರ್ತನೆಯಾಗುತ್ತಿದೆ, ಮನುಷ್ಯ ಇಂತಹ ಸ್ವಾರ್ಥ ಮನೋಭಾವನೆ ಬಿಟ್ಟು ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕೆಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಅನುಪಮ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿ ವರ್ಷ ಅಕ್ಟೋಬರ್ 2 ರಿಂದ 8ರ ವರೆಗೆ ವನ್ಯ ಜೀವಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿ ಜಿಲ್ಲೆಯಲ್ಲಿರುವ ವನ್ಯಜೀವಿ ಹಾಗೂ ಅರಣ್ಯ ಸಂಪತ್ತಿನ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ರಕ್ಷಣಾಧಿಕಾರಿ ವಿ.ದೇವರಾಜ್, ಜಿಲ್ಲಾ ಪಂಚಾಯತಿಯ ನರಸಿಂಹಮೂರ್ತಿ, ಸಣ್ಣಮಸಿಯಪ್ಪ, ಗುಂಡಪ್ಪ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು, ರೈತರು ಹಾಜರಿದ್ದರು.
Comments are closed.