ಕೆರೆಗಳ ರಕ್ಷಣೆ ನಮ್ಮೆಲ್ಲರ ಹೊಣೆ: ಪರಮೇಶ್ವರ್

ಧರ್ಮಸ್ಥಳ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯ

115

Get real time updates directly on you device, subscribe now.


ತುಮಕೂರು: ಊರಿನ ಅನುಕೂಲಕ್ಕಾಗಿ ರಾಜ ಮಹಾರಾಜರು, ಗ್ರಾಮಸ್ಥರು ಆಗ ಕಟ್ಟಿದ್ದ ಕೆರೆಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ, ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಕಾಪಾಡಲು ಕೆರೆಗಳ ಉಳಿವು ಅತ್ಯಗತ್ಯ ಎಂದು ಗೃಹ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಉಪ್ಪಾರಹಳ್ಳಿ ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನಗರದ ಉಪ್ಪಾರಹಳ್ಳಿ ಕೆರೆ ಆವರಣದಲ್ಲಿ ಬುಧವಾರ ನಡೆದ ನಮ್ಮೂರ ಕೆರೆ ನಮ್ಮ ಕೆರೆ ಎಂಬ ಕೆರೆ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಮ್ಮೂರಿನ ಕೆರೆ ಉಳಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಿ ಅವರ ಸಹ ಭಾಗವಹಿಸುವಿಕೆಯೊಂದಿಗೆ ಕೆರೆಗಳ ಪುನಶ್ಚೇತನ ಮಾಡಿ ಸಂರಕ್ಷಣೆ ಮಾಡುವ ಧರ್ಮಸ್ಥಳ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.

ಮಹಿಳೆಯರಿಗೆ ಹಣಕಾಸಿನ ಸಾಲ ನೀಡುವುದು, ಅವರಲ್ಲಿ ಉಳಿತಾಯ ಮನೋಭಾವ ಬೆಳೆಸುವುದು, ಸ್ವಯಂ ಉದ್ಯೋಗ ಆರಂಭಿಸಿ ಹೆಣ್ಣು ಮಕ್ಕಳನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದು, ಸಂಸಾರದ ನೆಮ್ಮದಿ ಕೆಡಿಸುವ ಕುಡಿತದ ಚಟ ಬಿಡಿಸಲು ಅನೇಕ ಮದ್ಯವ್ಯಸನ ಶಿಬಿರ ಆಯೋಜಿಸಿ ಕುಡಿತದ ಚಟ ಬಿಡಿಸಿ ಸಂಸಾರಗಳ ನೆಮ್ಮದಿಗೆ ನೆರವಾಗುವಂತಹ ಅನೇಕ ಜನಪರ ಯೋಜನೆ ಮಾಡಿ ಧರ್ಮಸ್ಥಳ ಸಂಸ್ಥೆ ಜನ ಮನ್ನಣೆ ಪಡೆದಿದೆ, ಕೆರೆಗಳ ಪುನಶ್ಚೇತನ, ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮೂಲಕ ಜನರಿಗೆ ಅನುಕೂಲ ಮಾಡುವ ಸಂಸ್ಥೆ ಸರ್ಕಾರ ಮಾಡಲಾಗದ ಅನೇಕ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೆಗಳ ಪುನಶ್ಚೇತನ ಕಾರ್ಯ ಕಠಿಣ ಕೆಲಸ, ಆದರೂ ಧರ್ಮಸ್ಥಳ ಸಂಸ್ಥೆ ರಾಜ್ಯದಲ್ಲಿ 626 ಕ್ಕೂ ಹೆಚ್ಚು ಕೆರೆಗಳ ಹೂಳು ತೆಗೆದು, ಏರಿ ಭದ್ರಗೊಳಿಸಿ ಕೆರೆಗಳ ಪುನಶ್ಚೇತನ ಮಾಡಿ ನೀರು ಸಂಗ್ರಹವಾಗಲು ಅನುಕೂಲ ಮಾಡಿದೆ, ಇಂತಹ ಅನೇಕ ಸೇವಾ ಕಾರ್ಯಗಳ ನೇತೃತ್ವ ವಹಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ ಅರ್ಹವಾಗಿಯೇ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿ ಗೌರವಿಸಿದೆ ಎಂದು ಹೇಳಿದರು.

ಉಪ್ಪಾರಹಳ್ಳಿ ಕೆರೆ ಜಾಗ ಸರ್ವೆ ಮಾಡಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಗಡಿ ನಿಗದಿಗೊಳಿಸಿ, ಅಗತ್ಯ ಸೌಲಭ್ಯ ಒದಗಿಸಿ ಎಂದು ಸಚಿವ ಡಾ.ಪರಮೇಶ್ವರ್ ಅವರು ನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಸೂಚಿಸಿದರು.

ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆರೆಗಳಲ್ಲಿ ನಾವು ಮುಳುಗುವ ಸಾಧ್ಯತೆಗಳಿವೆ, ಆದರೆ ಈಗ ಕೆರೆಯನ್ನೇ ಮುಳಗಿಸುವವರಿದ್ದಾರೆ, ಕೆರೆಗಳನ್ನು ರಕ್ಷಣೆ ಮಾಡಬೇಕು, ನಾಗರಿಕತೆ ಬೆಳೆದಂತೆ ನಿಸರ್ಗ ನಾಶವಾಗುತ್ತಿದೆ, ಪ್ರಕೃತಿ ಸಂಪತ್ತನ್ನು ಬೆಳೆಸುವುದರೊಂದಿಗೆ ನಾವೂ ಬೆಳೆಯಬೇಕು, ಉತ್ತಮ ಪರಿಸರ ಕಾಪಾಡಬೇಕು ಎಂಬ ಜವಾಬ್ದಾರಿ ಎಲ್ಲರಲ್ಲೂ ಮೂಡಬೇಕು, ಸರ್ಕಾರ ಮಾಡುವ ರೀತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆ ಛಾಯಾ ಸರ್ಕಾರ ಎಂದು ಸ್ವಾಮೀಜಿ ಬಣ್ಣಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಕ್ರಾಂತಿಕಾರಕ ಕೆಲಸಗಳಾಗುತ್ತಿವೆ, ಲಕ್ಷಾಂತರ ಮಹಿಳೆಯರಿಗೆ ಕಿರು ಸಾಲ ನೀಡಿ ಅವರು ಆರ್ಥಿಕ ಚಟುವಟಿಕೆ ನಡೆಸಿ ಸ್ವಾವಲಂಬಿಯಾಗಿ ಬಾಳಲು ಸಹಕಾರ ನೀಡುತ್ತಿದೆ, ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆಗಳ ಪುನಶ್ಚತನಕ್ಕೆ ಒತ್ತು ನೀಡುತ್ತಾ ನಮ್ಮ ಸಂಸ್ಕೃತಿ, ಜೀವನ ಕ್ರಮ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದರು.

ಉಪ್ಪಾರಹಳ್ಳಿ ಕೆರೆಯನ್ನು ಧರ್ಮಸ್ಥಳ ಸಂಸ್ಥೆ ಪುನಶ್ಚತನಗೊಳಿಸಿದರೆ ಅದರ ಮುಂದುವರೆದ ಕಾರ್ಯಕ್ರಮವಾಗಿ ಕೆರೆಯ ಒತ್ತುವರಿ ತೆರವುಗೊಳಿಸಿ, ಕೆರೆ ಅಂಗಳದ ಸುತ್ತ ಫೆನ್ಸಿಂಗ್, ವಾಕಿಂಗ್ ಟ್ರಾಕ್ ಮಾಡಲು ಸಚಿವ ಡಾ.ಪರಮೇಶ್ವರ್ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಕೆರೆ ಸ್ವಚ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಕಾಪಾಡಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದರು.

ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯರಾದ ಮುಜಿದಾ ಖಾನಂ, ಶಿವರಾಂ, ವಿಷ್ಣುವರ್ಧನ್, ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ಜಿಲ್ಲಾ ನಿರ್ದೇಶಕಿ ಜಯಶೀಲಾ, ಯೋಜನಾಧಿಕಾರಿ ಸುನಿತಾ ಪ್ರಭು, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮೊದಲಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!