ಅತ್ಯಾಚಾರದ ವಿರುದ್ಧ ಸಂದೇಶ ಸಾರುವ ಸಿನಿಮಾ ನಿರ್ಭಯ

123

Get real time updates directly on you device, subscribe now.


ತುಮಕೂರು: ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ಆಧರಿಸಿ ಅತ್ಯಾಚಾರ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕಥೆ ಹೊದಿರುವ ನಿರ್ಭಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ, ತುಮಕೂರು ಜಿಲ್ಲೆಯ ಕಲಾವಿದರು, ತಂತ್ರಜ್ಞರೇ ಹೇಚ್ಚಾಗಿರುವ ತಂಡ ಈ ಸಿನಿಮಾ ರೂಪಿಸಿದೆ.

ಹಲವಾರು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ರಾಜು ಕುಣಿಗಲ್ ಅವರು ನಿರ್ಭಯ ಅತ್ಯಾಚಾರ ಪ್ರಕರಣ ಆಧರಿಸಿ ಕಥೆ ಎಣೆದು, ಚಿತ್ರಕಥೆ ರಚಿಸಿ ನಿರ್ಭಯ ನಿರ್ದೇಶನ ಮಾಡಿದ್ದಾರೆ, ಗುರುವಾರ ನಗರದ ಕನ್ನಡ ಭವನದಲ್ಲಿ ನಿರ್ಭಯ ಸಿನಿಮಾದ ಪೋಸ್ಟರ್ನ್ನು ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ, ನಗರಪಾಲಿಕೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್ ಹಾಗೂ ಚಿತ್ರ ತಂಡದವರು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಜ್ಯೋತಿಗಣೇಶ್, ಸಮಾಜದ ವಿಕೃತ ಮನಸುಗಳನ್ನು ಹತ್ತಿಕ್ಕುವಂತಹ ನಿರ್ಭಯ ಚಿತ್ರ ಮಾಡಿ ತಂಡದವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ, ಸಿನಿಮಾಗಳು, ಸಿನಿಮಾ ಕಲಾವಿದರನ್ನು ಯುವಜನ ಅನುಕರಿಸುವುದರಿಂದ ಚಿತ್ರ ತಂಡದವರು ಸಾಮಾಜಿಕ ಜವಾಬ್ದಾರಿಯಿಂದ ಚಿತ್ರಗಳನ್ನು ಮಾಡಬೇಕು, ಕಲಾವಿದರು ಕೂಡಾ ಸಮಾಜಕ್ಕೆ ಮಾದರಿಯಾಗಿ ತಮ್ಮ ವೈಯಕ್ತಿಕ ಬದುಕು ಬಾಳಬೇಕಾಗಿದೆ ಎಂದು ಹೇಳಿದರು.

ಇತ್ತೀಚಿನ ಸಿನಿಮಾಗಳು ಸಮಾಜದಲ್ಲಿ ಅಪರಾಧ ಕೃತ್ಯಗಳಿಗೆ ಪ್ರೇರಣೆ ಆಗುವಂತಿವೆ, ಇದು ದೊಡ್ಡ ಅಪಾಯಕಾರಿ, ಇಂತಹುದಕ್ಕೆ ಆಸ್ಪದ ಕೊಡದಂತೆ ಚಿತ್ರಗಳನ್ನು ನಿರ್ಮಾಣ ಮಾಡಬೇಕು, ಅತ್ಯಾಚಾರದಂತಹ ದುಷ್ಟ ಕೃತ್ಯ ತಡೆಗೆ ನಿರ್ಭಯ ಚಿತ್ರ ಕಾರಣವಾಗಲಿ, ಹೆಚ್ಚು ಜನ ಸಿನಿಮಾ ನೋಡಿ ಜಾಗೃತರಾಗಲಿ ಎಂದು ಹಾರೈಸಿದರು.
ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಾದ್ದು, ದೆಹಲಿಯ ನಿರ್ಭಯ ಅತ್ಯಾಚಾರ ಪ್ರಕರಣ ದೊಡ್ಡ ಕರಾಳ ಸುದ್ದಿಯಾಗಿ ರಾಜಕೀಯ ತಲ್ಲಣವನ್ನೇ ಮೂಡಿಸಿ ಅಂದಿನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ರಾಜೀನಾಮೆ ನೀಡುವಂತಾಯಿತು, ಅಂತಹ ಪ್ರಕರಣಗಳು ಮರುಕಳಿಸದಂತೆ ಸಮಾಜ ಜಾಗೃತವಾಗಬೇಕು, ನಿರ್ಭಯ ಸಿನಿಮಾ ಅಂತಹ ಜಾಗೃತಿ ಮೂಡಿಸಲು ಕಾರಣವಾಗಲಿ ಎಂದು ಹೇಳಿದರು.
ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು, ಯುವ ಜನರು ನಿರ್ಭಯ ಚಿತ್ರ ನೋಡಲಿ, ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಚಿತ್ರ ವೀಕ್ಷಣೆಗೆ ತಂಡ ಅವಕಾಶ ಮಾಡಿಕೊಡಲಿ ಎಂದರು.

ಚಿತ್ರದ ನಿರ್ದೇಶಕ ರಾಜು ಕುಣಿಗಲ್ ಮಾತನಾಡಿ, ಕ್ರೌರ್ಯಗಳ ವಿರುದ್ಧ ಈ ಸಿನಿಮಾ ರೂಪಿಸಲಾಗಿದೆ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಕ್ಷಮಿಸಲಾಗದ ಅಪರಾಧ, ಇಂತಹ ಅತ್ಯಾಚಾರ ನಡೆದ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಮುಖ್ಯವಲ್ಲ, ನಡೆಯದಂತೆ ತಡೆಯುವುದು ಮುಖ್ಯ, ಇದಕ್ಕಾಗಿ ಹೆಣ್ಣು ಮಕ್ಕಳು, ಪೋಷಕರು, ಯುವ ಜನರಲ್ಲಿ ಅರಿವು ಮೂಡಬೇಕು, ಅಂತಹ ತಿಳುವಳಿಕೆ ನೀಡುವ ಪ್ರಯತ್ನವನ್ನು ನಿರ್ಭಯ ಸಿನಿಮಾದಲ್ಲಿ ಮಾಡಲಾಗಿದೆ ಎಂದರು.
ತುಮಕೂರಿನ ಹಿರಿಯ ರಂಗಭೂಮಿ ಕಲಾವಿದ ಕೃಷ್ಣಮೂರ್ತಿ ಅವರ ಪುತ್ರ ಅರ್ಜುನ್ ಕೃಷ್ಣ ಈ ಸಿನಿಮಾದಲ್ಲಿ ಪ್ರಧಾನ ಮಾತ್ರ ನಿರ್ವಹಿಸಿದ್ದಾರೆ, ಶ್ರಾವ್ಯ ರಾವ್ ಮುಖ್ಯ ಪಾತ್ರದಲ್ಲಿದ್ದು, ಹರೀಶ್, ಕುಸುಮಾ, ಶಿಲ್ಪ, ಸಿಂಚನಾ, ಮಾದೇಶ್ ಮೊದಲಾದವರು ತಾರಾಗಣದಲ್ಲಿದ್ದಾರೆ, ಬೆಂಗಳೂರು, ತುಮಕೂರು, ಚಿಕ್ಕಮಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದ್ದು, ನವೆಂಬರ್ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಕುಣಿಗಲ್ನ ಕೆ.ಆರ್.ಬಾಲಕೃಷ್ಣ ಹೇಳಿದರು.

ಚಿತ್ರ ನಟರಾದ ದೀಕ್ಷಿತ್ ಶೆಟ್ಟಿ, ಟೈಗರ್ ನಾಗ್, ಮುಖಂಡರಾದ ಧನಿಯಾಕುಮಾರ್, ನೇತಾಜಿ ಶ್ರೀಧರ್, ಸ್ಯಾಂಡಲ್ವುಡ್ ಫಿಲಂ ಇನ್ಸ್ಟಿಟ್ಯೂಟ್ನ ಆನಂದ್, ಉಪ್ಪಾರಹಳ್ಳಿ ಕುಮಾರ್, ಲಕ್ಷ್ಮೀನಾರಾಯಣ, ಎಂ.ವಿ.ನಾಗಣ್ಣ ಸೇರಿದಂತೆ ನಗರದ ವಿವಿಧ ಕಲಾವಿದರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!