ತುಮಕೂರು: ತುಮಕೂರು ಜಿಲ್ಲೆಯ ಬರ ಪರಿಸ್ಥಿತಿಯ ವಸ್ತು ಸ್ಥಿತಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್.ವಿ. ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಅಕ್ಟೋಬರ್ 6 ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ತುಮಕೂರು ಜಿಲ್ಲೆಯ ಬರಪರಿಸ್ಥಿತಿ ಕುರಿತು ಸವಿವರವಾಗಿ ಸದರಿ ತಂಡಕ್ಕೆ ವಿವರಣೆ ನೀಡಿ, ಮಧುಗಿರಿ ತಾಲ್ಲೂಕಿನಿಂದ ಶಿರಾ ತಾಲ್ಲೂಕಿಗೆ ಬೆಳೆ ಹಾನಿಯಾದ ಪ್ರದೇಶಗಳಿಗೆ ತಂಡ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ, ತಂಡದಲ್ಲಿ ಎಂಎನ್ಸಿಎಫ್ಸಿ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕರಣ್ ಚೌದರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಹಿರಿಯ ಸಮಾಲೋಚಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಉಪಸ್ಥಿತರಿರುವರು ಎಂದು ತಿಳಿಸಿದರು.
ತಂಡವನ್ನು ಮಧ್ಯಾಹ್ನ 1 ಗಂಟೆಗೆ ಕೊರಟಗೆರೆ ತಾಲ್ಲೂಕು ಅರಸಾಪುರದ ಬಳಿ ಬರಮಾಡಿಕೊಳ್ಳಲಾಗುವುದು, ನಂತರ ಬೈರೇನಹಳ್ಳಿಯಲ್ಲಿ ಕಡ್ಲೆಕಾಯಿ, ಜೋಳ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಕರೆ ತರಲಾಗುವುದು, ನಂತರ ಮಧುಗಿರಿ ತಾಲ್ಲೂಕಿನ ಪೂಜಾರಹಳ್ಳಿ ಕಡ್ಲೆಕಾಯಿ ಬೆಳೆ ನಾಶವಾಗಿರುವ ಪ್ರದೇಶ ಭೇಟಿ ಮಾಡಿಸಲಾಗುವುದು, ತದನಂತರ ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಸದರಿ ತಂಡಕ್ಕೆ ಉಪಹಾರ ಹಾಗೂ ಜಿಲ್ಲೆಯ ಬರಪರಿಸ್ಥಿತಿಯ ಸಮಗ್ರ ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ತದನಂತರ ಡಿ.ವಿ.ಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಕೈಮರ ಗೋಕಟ್ಟೆ ವೀಕ್ಷಣೆ, ಕೂನಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಶಿರಾ ತಾಲ್ಲೂಕಿನ ಗುಳಿಗೇನಹಳ್ಳಿಯಲ್ಲಿ ಕಡಲೆಕಾಯಿ ಪ್ರದೇಶ, ನ್ಯಾಯಗೆರೆ ನರೇಗಾ ಕಾಮಗಾರಿ, ಯರಗುಂಟೆ ಜೀನಿ ಮತ್ತು ಮೆಲೆಟ್ ಸಂಸ್ಕರಣಾ ಘಟಕ, ಕೊಟ್ಟಗೇಟ್ ರಾಗಿ ಬೆಳೆ ಪ್ರದೇಶ, ಓಜಗುಂಟೆ ನರೇಗಾ ಕಾಮಗಾರಿ ವೀಕ್ಷಣೆ, ಕಲ್ಲುಕೋಟೆ ಕಡಲೆಕಾಯಿ ಹಾಗೂ ರಾಗಿ ವೀಕ್ಷಿಸಿ ತಂಡವನ್ನು ಚಿತ್ರದುರ್ಗ ಗಡಿ ಬಳಿ ಇರುವ ಜವಗೊಂಡನಹಳ್ಳಿ ಬಳಿ ಬೀಳ್ಕೊಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 148 ಕೋಟಿ ಬೆಳೆ ಹಾನಿಯಾಗಿದೆ, ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರೆ ನೀರಾವರಿ ಬೆಳೆ ಬೆಳೆಯುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ 7009070 ಕ್ವಿಂಟಾಲ್ ಒಣ ಮೇವು ಹಾಗೂ 580625 ಕ್ವಿಂಟಾಲ್ ಹಸಿ ಮೇವು ಲಭ್ಯವಿದ್ದು, ಈ ಹಂಗಾಮಿಗೆ ಒಟ್ಟು 4,17,678 ಮೇವು ಮಿನಿಕಿಟ್ ಬೇಡಿಕೆ ಇದ್ದು, ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ ಸದರಿ ಮಿನಿಕಿಟ್ಗಳನ್ನು ಬೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದ ಬೆಳೆ ನಾಶವಾಗಿರುವ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನರೇಗಾ ಯೋಜನೆಯಡಿ 500 ಕೋಟಿ ರೂ. ವೆಚ್ಚದಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅನುಮತಿ ಕೊಟ್ಟು ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ಸ್ವಚ್ಛತಾ ಹೀ ಸೇವಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲು ಎಸ್ಬಿಎಂ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗೆ ಉಪಕರಣ, ವಾಹನ ನೀಡಲಾಗಿದೆ, 330 ಗ್ರಾಮ ಪಂಚಾಯತಿಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಗ್ರಾಮ ಪಂಚಾಯತಿ ಸಂಪನ್ಮೂಲದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
Comments are closed.