ತುಮಕೂರು: ಇಲ್ಲಿನ ವಿವಿ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭವಾಗಬೇಕಿತ್ತು, ಆದರೆ ಅಧ್ಯಾಪಕರ ಕಿತ್ತಾಟದಿಂದ ಕೋರ್ಸ್ ಆರಂಭವಾಗುವ ಮುನ್ನವೇ ತರಾತುರಿಯಲ್ಲಿ ಕೋರ್ಸ್ ಸ್ಥಗಿತಗೊಳಿಸುವ ಘಟನೆ ನಡೆದಿದೆ.
ಅ.3 ರಂದು ಮಧ್ಯಾಹ್ನ ತುಮಕೂರು ಕುಲಪತಿಗಳ ಕೊಠಡಿಯಲ್ಲಿ ಆನ್ಲೈನ್ ಮೂಲಕ ನಡೆದ ವಿಶೇಷ ಸಭೆಯಲ್ಲಿ 2023- 24ನೇ ಸಾಲಿನಿಂದಲೇ ಕೋರ್ಸ್ ಮುಚ್ಚುವ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಉನ್ನತ ವ್ಯಾಸಂಗ ಮಾಡಬೇಕೆನ್ನುವ ವಿದ್ಯಾರ್ಥಿಗಳ ಕನಸು ಕಮರುವಂತಾಗಿದೆ.
ಪ್ರಸ್ತುತ ತುಮಕೂರು ವಿವಿ ಕಾಲೇಜು ಹಾಗೂ ವಿವಿ ಸ್ನಾತಕೋತ್ತರ ವಿಭಾಗ ಎರಡೂ ಕಡೆಗಳಲ್ಲಿ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗಗಳಿದ್ದು, ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದು ಉನ್ನತ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗಿತ್ತು, ಆದರೆ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪ್ರಶ್ನೆಗಳಿದ್ದವು.
ಇತ್ತೀಚೆಗೆ ವಿಜ್ಞಾನ ಕಾಲೇಜು ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರ ನಡುವಿನ ರಾಜಕೀಯ ಸಿಂಡಿಕೇಟ್ ಸಭೆಯವರೆಗೂ ಬಂದಿದ್ದು, ಒಬ್ಬ ಸಹಾಯಕ ಪಾಧ್ಯಾಪಕರನ್ನು ಅಮಾನತು ಕೂಡ ಮಾಡಲಾಗಿದೆ, ಇದರ ಮುಂದುವರೆದ ಭಾಗವಾಗಿ ಕೋರ್ಸ್ ಮುಚ್ಚುವ ಆಘಾತಕಾರಿ ತೀರ್ಮಾನವನ್ನು ಸಿಂಡಿಕೇಟ್ ತರಾತುರಿಯಲ್ಲಿ ತೆಗೆದುಕೊಂಡಿರುವುದು ಗ್ರಾಸವಾಗಿದೆ.
ಶೈಕ್ಷಣಿಕ ಗುಣಮಟ್ಟವಿಲ್ಲದಿದ್ದರೂ ಪ್ರಾಧ್ಯಾಪಕರ ಪ್ರತಿಷ್ಠೆಗಾಗಿ ಕೋರ್ಸ್ ಉಳಿಸಿಕೊಳ್ಳಲಾಗಿತ್ತು ಎಂಬ ಆರೋಪವಿತ್ತು, ಈ ಬಗ್ಗೆ ಸಾಕಷ್ಟು ಎಚ್ಚರಿಕೆ ನೀಡಿದರೂ ಪ್ರಾಧ್ಯಾಪಕರು ಪರಸ್ಪರ ರಾಜಕೀಯ ಮಾಡಿಕೊಂಡು ದೋಷಾರೋಪದಲ್ಲಿ ತೊಡಗಿದ್ದರಿಂದ ವಿವಿ ಆಡಳಿತ ಮಂಡಳಿ ಅನಿವಾರ್ಯವಾಗಿ ಭೌತಶಾಸ್ತ್ರ ವಿಭಾಗದ ಪಿಜಿ ಕೋರ್ಸ್ ಮುಚ್ಚಿದೆ ಎನ್ನಲಾಗಿದೆ.
ಮುಂದುವರಿಸುವ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಜತೆ ಚರ್ಚಿಸಿ ಅಭಿಪ್ರಾಯವನ್ನು ಲಿಖಿತವಾಗಿ ನೀಡುವಂತೆ ಸೆ.27 ರಂದು ವಿವಿ ಕುಲಸಚಿವ ನಹಿದಾ ಜಮ್ಜಮ್ ಅವರು ಪ್ರಾಚಾರ್ಯರಿಗೆ ಪತ್ರದ ಮೂಲಕ ತಿಳಿಸಿದ್ದು, ನಂತರ ತರಾತುರಿಯಲ್ಲಿ ಆನ್ಲೈನ್ ಮೂಲಕ ಲಿಖಿತವಾಗಿ ಸಲ್ಲಿಸಿರುವ ಅಭಿಪ್ರಾಯದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸಿಂಡಿಕೇಟ್ ನಡಾವಳಿಯಲ್ಲಿ ಪ್ರಸ್ತಾಪಿಸಲಾಗಿದೆ, ಹಾಗಾಗಿ ಈ ಶೈಕ್ಷಣಿಕ ವಾತಾವರಣದ ಲೋಪ ಭೌತಶಾಸ್ತ್ರಕ್ಕೆ ಸೀಮಿತವಾಗಿದೆಯೇ ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡಲಾರಂಭಿಸಿದೆ.
ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಪೂರಕವಾದ ಗುಣಮಟ್ಟದ ಕೊರತೆಯ ಕಾರಣದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ಕಾಲೇಜು ಭೌತಶಾಸ್ತ್ರ ವಿಭಾಗದಲ್ಲಿ ಪಿಜಿ ಕೋರ್ಸ್ಗೆ ಪ್ರವೇಶಾತಿ ಸ್ಥಗಿತವಾಗಲಿದೆ, ಶೀಘ್ರದಲ್ಲಿಯೇ ಎಲ್ಲಾ ಪಿಜಿ ಕೋರ್ಸ್ಗಳು ಹೊಸ ಕ್ಯಾಂಪಸ್ಗೆ ಶಿಫ್ಟ್ ಆಗಲಿದ್ದು ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸೀಟು ಹೆಚ್ಚಿಸುವ ಬಗ್ಗೆ ಭವಿಷ್ಯದಲ್ಲಿ ತೀರ್ಮಾನಿಸುತ್ತೇವೆ.
ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ, ತುಮಕೂರು ವಿವಿ
Comments are closed.