ಕುಣಿಗಲ್: ತಾಲೂಕಿನ ಜನರ ಹಾಗೂ ಕಗ್ಗೆರೆ ಕ್ಷೇತ್ರದ ಭಕ್ತಾಜಿಗಳ ಬಹುದಿನದ ಬೇಡಿಕೆಯಂತೆ ಕಗ್ಗೆರೆ ತೋಂಟದ ಶ್ರೀಸಿದ್ದಲಿಂಗೇಶ್ವರ ಸ್ವಾಮಿಯವರ ದೇವಾಲಯದ ನವೀಕರಣ ಕಾಮಗಾರಿನ್ನು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ತಾಲೂಕಿನ ಕಗ್ಗೆರೆ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸುಮಾರು 450 ವರ್ಷಕ್ಕೂ ಹಳೆಯದಾದ ದೇವಾಲಯ ನವೀಕರಣ ಕಾಮಗಾರಿಗೆ ದೇವಾಲಯದ ಭಕ್ತರು ಸೇರಿದಂತೆ ಗ್ರಾಮಸ್ಥರ ಬೇಡಿಕೆ ಇತ್ತು, ಮಳೆಗಾಲದಲ್ಲಿ ನಾಗಿನಿ ಉಕ್ಕಿ ಹರಿದು ದೇವಾಲಯದೊಳಗೆ ನದಿನೀರು ನಿಂತು ಧಾರ್ಮಿಕ ಆಚರಣೆಗೆ ತೊಂದರೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯ ನವೀಕರಣ ಕಾಮಗಾರಿಗೆ ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ದೇವಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ, ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಕಾಮಗಾರಿ ಪೂರ್ಣವಾಗುವ ವರೆಗೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಾಲಿ ಇರುವ ದೇವಾಲಯದ ತಳಮಟ್ಟವನ್ನು ನದಿ ನೀರಿನಿಂದ ತೊಂದರೆಯಾಗದಂತೆ ರಕ್ಷಿಸಲು ನಾಲ್ಕು ಅಡಿ ಎತ್ತರ ಮಾಡಲಾಗುತ್ತಿದೆ, ದೇವಾಲಯದ ಮುಂಬದಿಯ ಪ್ರಾಂಗಣವನ್ನು ಮುಂದಿನ ದಿನಗಳಲ್ಲಿ ಅಂದಾಜು ಹತ್ತು ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ, ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಿಲಾ ಕಾಮಗಾರಿಯಲ್ಲಿ ನುರಿತ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ, ಅಲ್ಲದೆ ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಸೂಚನೆ ನೀಡಲಾಗಿದೆ, ದೇವಾಲಯ ಆವರಣದಲ್ಲಿರುವ ಉದ್ಯಾನವನದ ಸಮಗ್ರ ಅಭಿವೃದ್ಧಿಗೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೆ ವೇಳೆ 25 ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ರಥದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಯಡಿಯೂರು ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ಕಗ್ಗೆರೆ ದೇವಾಲಯ ಸಿಬ್ಬಂದಿ ಹನುಮಂತ, ಅಭಿಯಂತರ ರೇಣುಕಾ ಪ್ರಸಾದ್, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಜೆಇ ಗಿರಿಗೌಡ, ಕಗ್ಗೆರೆ ಗ್ರಾಪಂ ಅಧ್ಯಕ್ಷೆ ರೂಪಾ, ಪ್ರಮುಖರಾದ ಗೋವಿಂದರಾಜ, ರಂಗಣ್ಣಗೌಡ, ಹಾಲುವಾಗಿಲು ಸ್ವಾಮಿ, ಮೋಹನ್, ಅನಂತರಾಮು, ಕೋಘಟ್ಟ ರಾಜಣ್ಣ,ಇತರರು ಇದ್ದರು.
Comments are closed.