ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆಯಲಿ

ಶ್ರದ್ದೆ, ಪರಿಶ್ರಮದಿಂದ ಶಿಕ್ಷಣ ಪಡೆದಾಗ ಸಾಧನೆ ಸಾಧ್ಯ: ಕೆಎನ್ಆರ್

105

Get real time updates directly on you device, subscribe now.


ತುಮಕೂರು: ವಿದ್ಯೆ ಎಂಬುದು ಸಾಧಕರಿಗೆ ಮಾತ್ರ ಒಲಿಯುವಂತದ್ದು, ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಶಿಕ್ಷಣ ಪಡೆದಾತನಿಗೆ ಎಲ್ಲವನ್ನು ತನ್ನದಾಗಿಸಿಕೊಳ್ಳುವ ಶಕ್ತಿ ಬರುತ್ತದೆ, ಲಿಂಗ, ಧರ್ಮ, ಜಾತಿ ಭೇದವಿಲ್ಲದೆ ಎಲ್ಲರಲ್ಲಿಯೂ ಬುದ್ಧಿ ಎಂಬುದು ಇರುತ್ತದೆ, ಆದರೆ ಅದನ್ನು ಗುರುತಿಸಿ ತನ್ನ ಸಾಧನೆಗೆ ಅದನ್ನು ಬಳಸಿಕೊಳ್ಳುವವನೇ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದ ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ 2023- 24ನೇ ಸಾಲಿನ ಎಂಬಿಬಿಎಸ್ ತರಗತಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಸಮಾಜದ ಶಕ್ತಿಯಾಗಿರುವ ಯುವ ಜನತೆ ಗುಣಮಟ್ಟದ ಶಿಕ್ಷಣ ಪಡೆದು ಸರ್ವಸ್ವವನ್ನು ತಮ್ಮದಾಗಿಸಿ ಕೊಳ್ಳುವತ್ತ ಮುನ್ನೆಡೆಯಬೇಕು, ಶಿಕ್ಷಣವೊಂದೇ ಬಳಸಿದಷ್ಟು ಬೆಳೆಯುವಂತಹ, ಯಾರಿಂದಲು ಅಪಹರಿಸಲಾಗದ ಸಂಪತ್ತು, ಹಾಗಾಗಿ ಎಲ್ಲರು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎಂದರು.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ದೃಢ ನಿರ್ಧಾರ ತೆಗೆದುಕೊಂಡು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದಾರೆ, ಕುಗ್ರಾಮದಿಂದ ಬಂದ ಬಡವರ ಮಕ್ಕಳು ಮೆಡಿಕಲ್ ಶಿಕ್ಷಣ ಪಡೆಯಬಹುದು ಎಂಬುದನ್ನು ಸಿದ್ದಗಂಗಾ ಮಠ ಮಾಡಿ ತೋರಿಸಿದೆ ಎಂದು ಕೆ.ಎನ್.ರಾಜಣ್ಣ ಪ್ರಶಂಸೆ ವ್ಯಕ್ತಪಡಿಸಿದರು.

ತಮಿಳುನಾಡಿನ ಕೊಯಂಬತ್ತೂರು ಜೆಮ್ ಆಸ್ಪತ್ರೆಯ ಛೇರ್ಮನ್ ಡಾ.ಸಿ.ಪಳನಿವೇಲು ಮಾತನಾಡಿ, ಬಡತನದಂತಹ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಬದ್ಧತೆಯಿಂದ ಶ್ರಮಪಟ್ಟಲ್ಲಿ ಗುರಿ ಮುಟ್ಟಬಹುದು ಎಂಬುದಕ್ಕೆ ನಾನೇ ಜೀವಂತ ಉದಾಹರಣೆ, ಬಡತನದ ಕಾರಣಕ್ಕೆ ಶಾಲೆ ಬಿಟ್ಟು ನಂತರ ಓದು ಮುಂದುವರೆಸಿ 20ನೇ ವರ್ಷಕ್ಕೆ ಎಸ್ಎಸ್ ಎಲ್ಸಿ ಮುಗಿಸಿ ನಿರ್ಧಿಷ್ಟ ಗುರಿಯೊಂದಿಗೆ ಮುನ್ನೆಡೆದಿದ್ದರಿಂದ ಒಳ್ಳೆಯ ವೈದ್ಯ ಎಂದು ಜನರು ಗುರುತಿಸುವಂತಾಗಿದೆ, ವೈದ್ಯಕೀಯ ವೃತ್ತಿ ಸಮಾಜದ ಬಡವರಿಗೆ ಉತ್ತಮ ಸೇವೆ ಸಲ್ಲಿಸುವ ಅವಕಾಶ ನೀಡುವ ಪವಿತ್ರವಾದ ವೃತ್ತಿಯಾಗಿದೆ, ಇದನ್ನು ವೈದ್ಯಕೀಯ ವಿದ್ಯಾರ್ಥಿಗಳು ಈಗಿನಿಂದಲೇ ಅರ್ಥೈಸಿಕೊಂಡು ಸಮಾಜದ ಆಸ್ತಿಗಳಾಗಬೇಕು, ಕರ್ನಾಟಕ ಸರಕಾರ ಅತ್ಯುತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಡಿಕಲ್ ಕಾಲೇಜಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ.ಸಚ್ಚಿದಾನಂದ ಮಾನತಾಡಿ, ದೇಶದಲ್ಲಿ ಪ್ರತಿವರ್ಷ 20 ಲಕ್ಷ ಜನ ನೀಟ್ ಪರೀಕ್ಷೆ ಬರೆಯುತ್ತಾರೆ, ಇವರಲ್ಲಿ ಶೇ.50 ರಷ್ಟು ಅಂದರೆ 10 ಲಕ್ಷ ಜನ ತೇರ್ಗಡೆ ಹೊಂದಿದರೆ ಅವರಲ್ಲಿ 1.06 ಲಕ್ಷ ಜನರಿಗೆ ಮಾತ್ರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುತ್ತದೆ, ಹಾಗಾಗಿ ಇಲ್ಲಿ ಬಂದಿರುವ ನೀವೆಲ್ಲರೂ ಬುದ್ಧಿವಂತರೇ ಆಗಿದ್ದೀರಿ, ಎಂಬಿಬಿಎಸ್ ಶಿಕ್ಷಣ ಪಡೆದರೆ ವೈದ್ಯ ವೃತ್ತಿಯ ಜೊತೆಗೆ ಹಲವಾರು ಅವಕಾಶಗಳಿವೆ, ಆಯ್ಕೆ ನಿಮ್ಮದು, ನಿಮ್ಮ ಕನಸಿನ ರೆಕ್ಕೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಸಿದ್ದಗಂಗ ಸಂಸ್ಥೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮೆಡಿಕಲ್ ಕಾಲೇಜು ಎರಡನೇ ವರ್ಷದ ಕೂಸು, ಕಾಲೇಜು ಆರಂಭಗೊಂಡಿದ್ದೇ ಒಂದು ಪವಾಡ, ಒಳ್ಳೆಯ ವೈದ್ಯರನ್ನು ತಯಾರು ಮಾಡುವುದರ ಜೊತೆಗೆ ಗುಣಮಟ್ಟದ ಶುಶ್ರೂಶೆ ನಮ್ಮ ಗುರಿಯಾಗಿದೆ, ಸಿದ್ದಗಂಗಾ ಮೆಡಿಕಲ್ ಕಾಲೇಜು ಗುಣಮಟ್ಟದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ, ವೈದ್ಯರಾಗುವವರು ಮೊದಲು ಮಾನವೀಯ ಗುಣ ಅಳವಡಿಸಿಕೊಳ್ಳಬೇಕು, ವೈದ್ಯಕೀಯ ಜ್ಞಾನದ ಜೊತೆಗೆ ಸಾಮಾಜಿಕ ಜ್ಞಾನ, ಪವಿತ್ರತೆ, ಗೌರವ, ನಮ್ರತೆ, ಮಧುರವಾಣಿ, ವಿಶ್ವಾಸವಿದ್ದಾಗ ಯಶಸ್ವಿ ವೈದ್ಯನಾಗಲು ಸಾಧ್ಯ ಎಂದರು.
ಸಿದ್ದಗಂಗಾ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಪರಮೇಶ್ ಮಾತನಾಡಿ, ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯ ಜೊತೆಗೆ ಉತ್ತಮ ವೈದ್ಯರನ್ನು ತಯಾರು ಮಾಡುವ ಮಹದಾಸೆಯಿಂದ ಸಿದ್ದಗಂಗಾ ಮಡಿಕಲ್ ಕೆಲಸ ಮಾಡುತ್ತಿದೆ, ಸುಮಾರು 400 ಹಾಸಿಗೆಗಳ ಜನರಲ್ ಬೆಡ್ ಜೊತೆಗೆ 600 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹೊಂದಿದೆ, ಗುಣಮಟ್ಟದ ಬೋಧನೆ, ಉತ್ತಮ ಮಾರ್ಗದರ್ಶನ ನಮ್ಮ ಸಿಬ್ಬಂದಿಯಿಂದ ದೊರೆಯಲಿದೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ನೀಡುವುದಾಗಿ ತಿಳಿಸಿದರು.

ಸಿದ್ದಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಜ್ಞಾನಾರ್ಜನೆಯ ಜೊತೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ, ಕ್ರೀಡಾಪಟುಗಳು, ಸಂಗೀತಗಾರರು, ಚಿತ್ರ ಕಲಾವಿದರು ಸಹ ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದರು.

ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಟಿ.ಕೆ.ನಂಜುಂಡಪ್ಪ, ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಶಿವಕುಮಾರಯ್ಯ, ಸೂಪರ್ ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಡಾ.ಭಾನುಪ್ರಕಾಶ್.ಹೆಚ್.ಎಂ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಶ್ರೀಗಳ ಆಪ್ತ ವೈದ್ಯ ಡಾ.ಶಿವಪ್ಪ, ಎಸ್ಐಟಿ ಕಾಲೇಜಿನ ನಿರ್ದೇಶಕ ಡಾ.ಚನ್ನಬಸಪ್ಪ ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!