ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಪ್ರತಿಭಟನೆ

72

Get real time updates directly on you device, subscribe now.


ತುಮಕೂರು: ಬೆಳಗಾವಿಯ ಖಾನಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಗಾಧಿ ಘೋಷಿಸಿದಂತೆ ಸ್ಕೀಂ ನೌಕರರಿಗೆ ಗೌರವಧನ ಹೆಚ್ಚಳವನ್ನು ಕಾಂಗ್ರೆಸ್ ಪಕ್ಷದ ಆರನೇ ಗ್ಯಾರಂಟಿಯಾಗಿ ಘೋಷಣೆ ಮಾಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಟೌನ್ಹಾಲ್ ವೃತ್ತದಿಂದ ಹೊರಟ ಸಿಪಿಐ ಪಕ್ಷದ ಮೆರವಣಿಗೆ ಎಂ.ಜಿ.ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಕೆಲ ಕಾಲ ಧರಣಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಭಾರತ್ ಕಮ್ಯುನಿಸ್ಟ್ ಪಕ್ಷದ ರಾಜ್ಯ ಮಹಿಳಾ ಕಾರ್ಯದರ್ಶಿ ಜೋತಿ ಮಾತನಾಡಿ, ಖಾನಾಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನೀಡಿದ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತರಿಗೆ ಮಾಸಿಕ 15,000 ಮತ್ತು ಸಹಾಯಕಿಯರಿಗೆ 10,000 ರೂ. ಗೌರವ ಧನ ಹೆಚ್ಚಳ ಪಡಿಸಬೇಕು, ಭಾರತ ಕಮ್ಯುನಿಸ್ಟ್ ಒತ್ತಾಯ ಹಾಗೂ ಆಶಾ ಕಾರ್ಯಕರ್ತರಿಗೆ ಮಾಸಿಕ 8 ಸಾವಿರ ರೂ. ಮತ್ತು ಅಕ್ಷರ ದಾಸೋಹ ಬಿಸಿ ಊಟ ಕಾರ್ಯಕರ್ತರಿಗೆ 6 ಸಾವಿರ ರೂ. ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಾ ಬಂದರೂ ಕಾರ್ಮಿಕರು, ದುಡಿಯುವ ವರ್ಗಕ್ಕೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿಲ್ಲ, ಅಲ್ಲದೆ ರದ್ದಾಗಿರುವ ಕಾರ್ಮಿಕ ಕಾಯ್ದೆಗಳನ್ನು ಪುನಹ ಜಾರಿಗೆ ತರಬೇಕು ಎಂಬುದು ಸಿಪಿಐ ಪಕ್ಷದ ಆಗ್ರಹವಾಗಿದೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ರಾಜ್ಯದಲ್ಲಿ 50 ಲಕ್ಷ ಬಡ ಕುಟುಂಬಗಳಿಗೆ ಮನೆ ಕಟ್ಟಿಸಿ ಕೊಡುವ ವಿಚಾರ ಪ್ರಸ್ತಾಪಿಸಲಾಗಿತ್ತು, ಇಲ್ಲಿನವರೆಗೂ ಯಾವುದೇ ಮನೆ ಕಟ್ಟಿಸಿ ಕೊಟ್ಟಿಲ್ಲ, ಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು, ಕಾರ್ಮಿಕರಿಗೆ ಸವಲತ್ತು ಒದಗಿಸಬೇಕೆಂಬುದು ಪಕ್ಷದ ಒತ್ತಾಯವಾಗಿದೆ ಎಂದರು.

ಕರ್ನಾಟಕ ರಾಜ್ಯದಲ್ಲಿ 17 ಲಕ್ಷ ಎಕರೆ ಸರಕಾರಿ ಭೂಮಿ ಖಾಲಿ ಇದೆ, ಈ ಸರಕಾರಿ ಭೂಮಿಯಲ್ಲಿ ಮುಂದಿನ 25 ವರ್ಷಕ್ಕೆ ಇದರಲ್ಲಿ 5 ಲಕ್ಷ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕರಿಗಾಗಿ ಮೀಸಲಿಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾಧ್ಯಕ್ಷ ಗಿರೀಶ್ ಮಾತನಾಡಿ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ 6 ಗ್ಯಾರಂಟಿ ಘೋಷಿಸಿದ್ದು, ಆದರೆ ಅಧಿಕಾರಕ್ಕೆ ಬಂದ ಮೇಲೆ ಐದೇ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಎಂದು ಸುಳ್ಳು ಹೇಳುವ ಮೂಲಕ ಆರನೇ ಗ್ಯಾರಂಟಿ ಕೈ ಬಿಟ್ಟಿದ್ದಾರೆ, ಈ 6ನೇ ಗ್ಯಾರಂಟಿಯಲ್ಲಿ ಶ್ರಮಿಕರು, ಕಾರ್ಮಿಕರು, ಆಶಾ ಕಾರ್ಯಕರ್ತರು, ಸಹಾಯಕಿಯರು ಸೇರಿದಂತೆ ಇನ್ನೂ ಅನೇಕ ಮಹಿಳಾ ಕಾರ್ಮಿಕರಿಗೆ ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕಂಬೆಗೌಡ, ಜಿಲ್ಲಾ ಖಜಾಂಚಿ ಅಶ್ವಥ್ ನಾರಾಯಣ, ಜಿಲ್ಲಾ ಸಹ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಸಹ ಕಾರ್ಯದರ್ಶಿ ಚಂದ್ರಶೇಖರ್.ಜಿ, ತಿಪಟೂರು ತಾಲೂಕು ಕಾರ್ಯದರ್ಶಿ ಗೋವಿಂದರಾಜು.ಸಿ.ಎಸ್, ಪಾವಗಡ ತಾಲೂಕ ಕಾರ್ಯದರ್ಶಿ, ರಾಮಕೃಷ್ಣ, ಶಿರಾ ತಾಲೂಕು ಕಾರ್ಯದರ್ಶಿ ಭೂತರಾಜು, ಜಿಲ್ಲಾ ಮುಖಂಡರು ರುದ್ರಪ್ಪ, ಎಐಎಸ್ಎಫ್ ರಾಜ್ಯ ಕಾರ್ಯದರ್ಶಿ ಲವ, ತೇಜಶ್ವಿನಿ, ಕಾರ್ಮಿಕ ಮುಖಂಡರಾದ ಪಿಟ್ವೆಲ್ ರಮೇಶ್, ಪಿಜೋ ಮಾರ್ಗೋ ವೆಂಕೋಬರಾವ್, ಜೆಮ್ಸ್ ಶಾಂತರಾಜು ಸೇರಿದಂತೆ ಜಿಲ್ಲೆಯ ಅನೇಕ ಕಾರ್ಮಿಕರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!