ನಾರಾಯಣ ಗುರುಗಳ ಆಶಯದಂತೆ ಸಾಗೋಣ

ಈಡಿಗ ಸಮುದಾಯ ಅಭಿವೃದ್ಧಿಯತ್ತ ಸಾಗಲಿ: ಕೆ.ಎನ್.ರಾಜಣ್ಣ

106

Get real time updates directly on you device, subscribe now.


ತುಮಕೂರು: ಅಸಹಾಯಕರು, ಅಸಂಘಟಿತರು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಸಂಘಟಿತರಾಗುವ ಅಗತ್ಯವಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ಆರ್ಯ ಈಡಿಗರ ಸಂಘ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ, ಬ್ರಹ್ಮಶ್ರೀ ನಾರಾಯಣಗುರ ಜಿಲ್ಲಾ ಜಯಂತೋತ್ಸವ ಸಮಿತಿ, ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರು 169ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬಡವರು, ನಿರ್ಗತಿಕರು, ಶೋಷಿತರು ಒಂದಾಗಿ ಸ್ವಾಭಿಮಾನದ ಬದುಕು ರೂಢಿಸಿ ಕೊಳ್ಳಬೇಕೆಂಬುದು ನಾರಾಯಣಗುರು ಅವರ ಆಶಯವಾಗಿತ್ತು, ಹಾಗಾಗಿ ಎಲ್ಲಾ ಶೋಷಿತರು, ಅಸಂಘಟಿತರು ಒಂದಾಗಲು, ನಾರಾಯಣ ಗುರು ಜಯಂತಿ ಒಂದು ವೇದಿಕೆಯಾಗಲಿ ಎಂದರು.

ದೇವರನಾಡು ಎಂದು ಕರೆಯುತ್ತಿದ್ದ ಕೇರಳದಲ್ಲಿ ಅಸ್ಪಷ್ಯತೆ, ಆನಾಚಾರ, ದೇವರ ಹೆಸರಿನಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುತಿದ್ದ ದೌರ್ಜನ್ಯ, ದಬ್ಬಾಳಿಕೆ ಕಣ್ಣಾರೆ ಕಂಡ ನಾರಾಯಣ ಗುರುಗಳು ಶೋಷಿತರಿಗಾಗಿಯೇ ನೂರಾರು ದೇವಾಲಯ ಕಟ್ಟಿಸಿದರು, ಆರ್ಥಿಕ ಸೃಢತೆ ಸಿಗಬೇಕೆಂದರೆ ಉದ್ಯೋಗ ದೊರೆಯಬೇಕು, ಉದ್ಯೋಗಕ್ಕೆ ಅಗತ್ಯ ಶಿಕ್ಷಣ ಬೇಕು ಎಂಬುದನ್ನು ಮನಗಂಡ ಗುರುಗಳು ರಾತ್ರಿ ಶಾಲೆಗಳನ್ನು ತೆರೆದು ನಿಮ್ನ ಸಮುದಾಯಗಳಿಗೆ ಶಿಕ್ಷಣ ನೀಡಲು ಮುಂದಾದರೂ ಇಂದು ಕೇರಳ ಶೇ.100 ರಷ್ಟು ಸಾಕ್ಷರತೆ ಸಾಧಿಸಿದ್ದರೆ ಅಂದು ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದರ್ಶನವೇ ಕಾರಣ ಎಂದು ಸಚಿವ ಕೆ.ಎನ್.ರಾಜಣ್ಣ ನುಡಿದರು.

ಈಡಿಗರೆಂದರೆ ಶ್ರೀಮಂತರು ಎಂಬ ಭಾವನೆ ಇತರೆ ಸಮುದಾಯಗಳಲ್ಲಿ ಇದೆ, ಆದರೆ ಇದು ತಪ್ಪು, ಗ್ರಾಮೀಣ ಭಾಗದಲ್ಲಿ ಇಂದಿಗೂ ಕಡು ಬಡತನದಲ್ಲಿ ಬದುಕುತ್ತಿರುವವರನ್ನು ನಾವು ಕಾಣಬಹುದು, ಹೆಂಡ, ಸಾರಾಯಿ ಮಾರಾಟ ಮಾಡುವಾಗ ಒಂದಷ್ಟು ಬದುಕು ನಡೆಯುತ್ತಿತ್ತು, ಆದರೆ ಈಗ ಹೆಂಡದ ಗುತ್ತಿಗೆ ಬೇರೆ ಸಮುದಾಯಗಳ ಕೈಯಲ್ಲಿದೆ, ಹಾಗಾಗಿ ಬದುಕಿಗಾಗಿ ನಿತ್ಯ ಸಂಘರ್ಷವನ್ನು ಈ ಸಮುದಾಯ ಎದುರಿಸುತ್ತಿದೆ, ಸಮುದಾಯದ ಕೆಲ ಹಿರಿಯರು ಸಮಾಜಕ್ಕಾಗಿ ಕೆಲಸ ಮಾಡಿದ ಪರಿಣಾಮ ಒಂದಷ್ಟು ವಿದ್ಯಾರ್ಥಿ ನಿಲಯಗಳು ತೆರೆದು ಸಮುದಾಯದ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ, ಬಂಗಾರಪ್ಪ, ಆರ್.ಎಲ್.ಜಾಲಪ್ಪ, ಜೆ.ಪಿ.ನಾರಾಯಣ ಸ್ವಾಮಿ ಸೇರಿದಂತೆ ಹಲವರು ಸಮುದಾಯಕ್ಕಾಗಿ ದುಡಿದ್ದಾರೆ, ಅವರನ್ನು ಸ್ಮರಿಸಿಕೊಂಡು ದುಶ್ಚಟಗಳಿಂದ ದೂರವಾಗಿ ವೈಷಮ್ಯ ಮರೆತು ಒಂದಾದರೆ ಆರ್ಥಿಕವಾಗಿ ಸದೃಢಗೊಳ್ಳಲು ಸಾಧ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಕೋರಿಕೆಯಂತೆ ತುಮಕೂರು ನಗರ ಮತ್ತು ಮಧುಗಿರಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಕೆ.ಎನ್.ರಾಜಣ್ಣ ಭರವಸೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಶೋಷಿತರನ್ನು ಮೇಲೆತ್ತಲು ಪ್ರಯತ್ನಿಸಿದವರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಮುಖರು, ಒಂದೇ ದೈವ, ಒಂದೇ ಜಾತಿ, ಒಂದೇ ಧರ್ಮ ಎಂಬ ಘೋಷವಾಕ್ಯದೊಂದಿಗೆ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದರು, ಹಿಂದುಳಿದ ವರ್ಗಗಳನ್ನು ಮರೆತರೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಲಿದೆ, ಜಾತಿ ರಹಿತ ಸಮಾಜ ನಾರಾಯಣ ಗುರುಗಳ ಕನಸಾಗಿತ್ತು ಎಂದರು.

ಆರ್ಯ ಈಡಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವಿಖ್ಯಾತನಂದ ಮಹಾ ಸ್ವಾಮೀಜಿ ಮಾತನಾಡಿ, ಕೇರಳ ಇಂದು ಬುದ್ಧಿವಂತರ ನಾಡು ಎನಿಸಿಕೊಂಡಿದ್ದರೆ ಅದರ ಹಿಂದಿನ ಶಕ್ತಿ ಬ್ರಹ್ಮಶ್ರೀ ನಾರಾಯಣಗುರು, ಯಾರನ್ನು ದೂಷಿಸದೆ ಶಾಂತಿ ಮತ್ತು ಶಿಕ್ಷಣದ ಮೂಲಕ ಎಲ್ಲಾ ಶೋಷಿತ ಸಮುದಾಯಗಳನ್ನು ಒಗ್ಗೂಡಿಸಿ ದೇವಾಲಯ ಸ್ಥಾಪನೆಯ ಜೊತೆಗೆ ಗುಡಿ ಕೈಗಾರಿಕೆ ಮೂಲಕ ಆರ್ಥಿಕ ಸದೃಢತೆ ತಂದುಕೊಟ್ಟರು, ಅವರನ್ನು ಹೆಚ್ಚು ಹೆಚ್ಚು ಅರಿಯುವ ಕೆಲಸ ಆಗಬೇಕೆಂದರು.
ಜಿಲ್ಲಾ ಆರ್ಯ ಈಡಿಗರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ನಾರಾಯಣಗುರು ಜಯಂತೋತ್ಸವದ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ, ಬಂಗಾರಪ್ಪ ನವರ ಕಾಲದಲ್ಲಿ ಸಮುದಾಯಕ್ಕೆ ನೀಡಿದ್ದ ಎರಡು ಎಕರೆ ಜಾಗದಲ್ಲಿ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳ ಹಾಸ್ಟೆಲ್ ನಡೆಯುತ್ತಿದ್ದು, ಉಳಿದ ಜಾಗದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿರ್ಮಿಸಬೇಕೆಂಬ ಒತ್ತಾಸೆ ಸಮುದಾಯದ್ದು, ಸಚಿವರು ಸರಕಾರದೊಂದಿಗೆ ಮಾತನಾಡಿ ಅನುದಾನ ಕೊಡಿಸುವಂತೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ರಾಜ್ಯಾಧ್ಯಕ್ಷ ತಿಮ್ಮೇಗೌಡ, ಅಬಕಾರಿ ಗುತ್ತಿಗೆದಾರ ಮಹದೇವ್, ನಾರಾಯಣ ಗುರು ಸಮಾಜ ಟ್ರಸ್ಟ್ ನ ಮಾಧವನ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಚಲನಚಿತ್ರ ನಿರ್ಮಾಪಕ ರವಿ ಆರ್ ಗರಣಿ, ಶಾಸಕರಾದ ಜೋತಿಗಣೇಶ್, ಹೆಚ್.ವಿ.ವೆಂಕಟೇಶ್, ಬಿಎಸ್ಎನ್ಡಿಪಿ ಜಿಲ್ಲಾಧ್ಯಕ್ಷ ಊರುಕೆರೆ ಪುರುಷೋತ್ತಮ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!