ತುಮಕೂರು: ಜಿಲ್ಲೆಗೆ ಘನ ಉಚ್ಛ ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ನಡಾವಳಿಯಂತೆ ಗೊರೂರಿನ ಹೇಮಾವತಿ ಜಲಾಶಯದಿಂದ 2023- 24ನೇ ಸಾಲಿಗೆ ಹರಿಸಬೇಕಾದ ನಮ್ಮ ಪಾಲಿನ 25 ಟಿಎಂಸಿ ನೀರನ್ನು ನಾಗರಿಕರಿಗೆ ಕುಡಿಯಲು, ರೈತರಿಗೆ ಕೃಷಿ ಮತ್ತು ಜನ ಜಾನುವಾರು, ಅಂತರ್ಜಲ ವೃದ್ಧಿಯ ಸಂಬಂಧಿಸಿದ ಚಟುವಟಿಕೆಗಳಿಗೆ ತಕ್ಷಣವೇ ಹರಿಸಬೇಕೆಂದು ಸರ್ಕಾರಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಹೇಮಾವತಿ ನೀರು ಹರಿಸಲು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮತ್ತು ತುಮಕೂರು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರದ ಮೂಲಕ ಮನವಿ ಮಾಡಿರುವ ಬಗ್ಗೆ ವಿವರ ನೀಡಿದರು.
ಗೊರೂರು ಹೇಮಾವತಿ ಜಲಾಶಯದಲ್ಲಿ ಕಳೆದ 2-3 ತಿಂಗಳ ಹಿಂದೆ 26 ಟಿಎಂಸಿ ನೀರು ಸಂಗ್ರಹವಿತ್ತು, ಸದ್ಯ ಇದೀಗ 18 ಟಿಎಂಸಿ ನೀರು ಗೊರೂರು ಜಲ ಸಂಗ್ರಹಾಗಾರದಲ್ಲಿದ್ದು 4 ಟಿಎಂಸಿ ಡೆಡ್ ಸ್ಟೋರೇಜ್ ಕಳೆದು 14 ಟಿಎಂಸಿ ನೀರು ಲಭ್ಯವಿರುತ್ತದೆ, ತುಮಕೂರು ಜಿಲ್ಲೆಗೆ ಕಳೆದ ಬೇಸಿಗೆಯ ಅವಧಿಯೂ ಸೇರಿದಂತೆ 9.08.2003 ರಿಂದ 18.09.2023 ರವರೆಗಿನ ಒಂದು ತಿಂಗಳು ಮಾತ್ರ ಸುಮಾರು 5.70 ಟಿಎಂಸಿ ಹೇಮಾವತಿ ನೀರನ್ನು ಗೊರೂರು ಜಲಾಶಯದಿಂದ ಹರಿಸಲಾಗಿದೆ ಎಂಬುದನ್ನು ದಾಖಲೆ ಸ್ಟಪ್ಟಪಡಿಸಿವೆ ಎಂಬ ಮಾಹಿತಿ ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರವೇ ಘೋಷಿಸಿದೆ, ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದ್ದು ಸರ್ಕಾರವೇ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದರಿಂದ ಜನ- ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಗೊರೂರು ಹೇಮಾವತಿ ಜಲ ಸಂಗ್ರಹಾಗಾರದಿಂದ ತಕ್ಷಣವೇ ತುಮಕೂರು ಜಿಲ್ಲೆಗೆ ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕೆರೆಗಳಿಗೆ ಪ್ರಥಮ ಆದ್ಯತೆ ಮೇರೆಗೆ ಸದ್ಯ ಗೊರೂರು ಹೇಮಾವತಿ ಜಲಾಶಯದಲ್ಲಿರುವ 14 ಟಿಎಂಸಿ ನೀರನ್ನು ಹಂಚಿಕೆ ಪ್ರಮಾಣದಲ್ಲಿ ಜಿಲ್ಲೆಯ ನಗರ ಪ್ರದೇಶ ಸೇರಿದಂತೆ ಎಲ್ಲಾ ತಾಲ್ಲೂಕುಗಳ ವಿಧಾನಸಭಾ ಕ್ಷೇತ್ರಗಳಲ್ಲಿನ ಕೆರೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.
ನೀರಿನ ಹಂಚಿಕೆ ಸಂಬಂಧ ತುಮಕೂರು ಶಾಖಾ ಹೇಮಾವತಿ ನಾಲಾ ವಲಯದಲ್ಲಿ ಬರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕೆರೆಗಳಿಗೆ ತುಮಕೂರು ನಗರಕ್ಕೆ 1.13 ಟಿಎಂಸಿ ನೀರು ಹಂಚಿಕೆಯಾಗಿದ್ದು ಇದರಲ್ಲಿ ಬುಗುಡನಹಳ್ಳಿ ಕೆರೆಗೆ 363 ಎಂಸಿಎಫ್ ಟಿ ನೀರು ಹರಿಸಬೇಕಾಗಿದೆ, ಆದರೆ ಕೇವಲ 179.55 ಎಂಸಿಎಫ್ಟಿ ಶೇಕಡಾ 32.56 ರಷ್ಟು ನೀರು ಮಾತ್ರ ಈ ಸಾಲಿನಲ್ಲಿ ಹರಿಸಿದ್ದು ಇನ್ನೂ ಉಳಿಕೆ ಶೇಕಡಾ 67.44 ರಷ್ಟು ನೀರಿನ ಪ್ರಮಾಣ ಜೂನ್ 2024 ಒಳಗೆ ಹರಿಸಿದ್ದರೆ ತುಮಕೂರು ಮಹಾ ನಗರಪಾಲಿಕೆ ವ್ಯಾಪ್ತಿಯ ನಾಗರಿಕರಿಗೆ ಬಳಕೆಗೆ ಅನುಕೂಲವಾಗುತ್ತದೆ, ತುಮಕೂರು ನಗರಕ್ಕೆ ಹಂಚಿಕೆಯಾದ ನೀರನ್ನು ಕುಪ್ಪೂರು ಕೆರೆಯ ನೀರನ್ನು ಅಂತರಸನಹಳ್ಳಿ ಕೈಗಾರಿಕಾ ವಸಾಹತು ಬಳಕೆ, ಹೆಬ್ಬಾಕ ಕೆರೆ, ದೇವರಾಯ ಪಟ್ಟಣ ಕೆರೆ, ಸಿದ್ದಗಂಗಾ ಕ್ಷೇತ್ರದ ಉದ್ದಾನಕಟ್ಟೆ ಹಾಗೂ ಮೈದಾಳ ಕೆರೆಗಳಿಗೆ ಕುಡಿಯವ ನೀರಿನ ಸರಬರಾಜಿಗೆ ಈವರೆವಿಗೂ ನೀರು ಹರಿಸಲಾಗಿಲ್ಲ ಎಂಬುದನ್ನು ತಿಳಿಸಿದರು.
ಈ ಎಲ್ಲಾ ಮಾಹಿತಿ ಗಮನಿಸಿ ಗೊರೂರು ಹೇಮಾವತಿ ಜಲ ಸಂಗ್ರಹಾಗಾರದಿಂದ ತಮಿಳುನಾಡಿಗೆ ನೀರು ಹರಿಸುವುದರ ಬದಲು ತುಮಕೂರು ಜಿಲ್ಲೆಗೆ ಹಾಲಿ ಇರುವ 14 ಟಿಎಂಸಿ ನೀರನ್ನು ಆದ್ಯತೆ ಮೇಲೆ ತಕ್ಷಣವೇ ಹರಿಸಿ ನಾಗರಿಕ ಬಂಧುಗಳಿಗೆ ಅವಶ್ಯವಾಗಿರುವ ಕುಡಿಯುವ ನೀರಿನ ಬವಣೆ ನೀಗಿಸಬೇಕೆಂದು ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ, ತುಮಕೂರು ಹಾಗೂ ಹಾಸನ ಉಸ್ತುವಾರಿ ಸಚಿವರು ಮತ್ತು ತುಮಕೂರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾ ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಸಾಮಾಜಿಕ ಹೋರಾಟಗಾರ ಆಟೋ ನವೀನ್ ಮತ್ತು ಪಂಚಾಕ್ಷರಯ್ಯ ಇದ್ದರು.
Comments are closed.