ತುಮಕೂರು: ಗುಬ್ಬಿ ತಾಲ್ಲೂಕಿನ ಸುಮಾರು 12 ಜನ ರೈತರು ತಾವು ಬೆಳೆದ ಅಡಿಕೆ ಬೆಳೆಯನ್ನು ಶಿವಮೊಗ್ಗದ ಅಡಿಕೆ ಮಂಡಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವ ವೇಳೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು 150 ಚೀಲ ಅಡಿಕೆ ಇದ್ದ ಲಾರಿ ಸೀಜ್ ಮಾಡಿ 40 ಲಕ್ಷ ರೂ. ದಂಡ ವಿಧಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿನಾರಾಯಣ ಗೌಡ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಶ ಪಡಿಸಿಕೊಂಡಿರುವ ವಾಹನವನ್ನು ಬಿಡುಗಡೆ ಮಾಡಬೇಕು, ಹಾಗೆಯೇ ರೈತರಿಗೆ ಆಗಿರುವ ನಷ್ಟ ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು
ದಿನಾಂಕ: 23-09-2023 ರಂದು ಗುಬ್ಬಿ ತಾಲ್ಲೂಕಿನ ವಿವಿಧ ಭಾಗಗಳಿಂದ ರೈತರು ಬೆಳೆದ ಅಡಿಕೆ ತುಂಬಿಕೊಂಡು ಶಿವಮೊಗ್ಗದ ಮಾರುಕಟ್ಟೆಗೆ ಸಾಗಿಸುವ ವೇಳೆ ತಿಪಟೂರು ಪೊಲೀಸರ ಸಹಕಾರದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ವಾಹನ ತಡೆದು ಠಾಣೆಯಲ್ಲಿ ಇರಿಸಿದ್ದಾರೆ, ಅಲ್ಲದೆ ಲಾರಿಯಲ್ಲಿರುವುದು ವ್ಯಾಪಾರಿಗಳಿಗೆ ಸೇರಿದ ಅಡಿಕೆ ಎಂದು ನಲವತ್ತು ಲಕ್ಷ ರೂ. ದಂಡ ವಿಧಿಸಿದ್ದಾರೆ, ಇದು ರೈತರು ನೇರವಾಗಿ ಮಾರುಕಟ್ಟೆಗೆ ಸಾಗಿಸುತ್ತಿರುವ ಅಡಿಕೆ, ಅದಕ್ಕೆ ಬೇಕಾದ ಪಹಣಿ ಇದೇ ನೋಡಿ ಎಂದು ದಾಖಲೆ ನೀಡಿದರೂ ಒಪ್ಪಿಕೊಳ್ಳದೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ರೈತರು ಇದು ನಾವು ಬೆಳೆದ ಅಡಿಕೆ, ನಮಗೆ ನೀಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ವಾಣಿಜ್ಯ ತೆರಿಗೆ ಇಲಾಖೆಯ ಈ ಕ್ರಮವನ್ನು ಖಂಡಿಸಿ ಅಕ್ಟೋಬರ್ 3 ರಂದು ತಿಪಟೂರು ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿ ಎದುರಿಗೆ ರೈತರು ಪ್ರತಿಭಟನೆಗೆ ಮುಂದಾದಾಗ ಪರಿಶೀಲಿಸಿ ಅಕ್ಟೋಬರ್ 07 ರೊಳಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ವಾಣಿಜ್ಯ ತೆರಿಗೆ ಇಲಾಖೆಯ ನಿರ್ದೇಶಕರು ಇದು ರೈತರು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಅಡಿಕೆಯೇ ಎಂದು ಪರಿಶೀಲಿಸುವ ಕೆಲಸ ಮಾಡದೆ ಅಧಿಕಾರಿಗಳ ಮಾತು ನಂಬಿ ವರ್ತಕರ ಅಡಿಕೆ ಎಂದು ಹಿಂಬರಹ ನೀಡಿ ಕೊಟ್ಟು ಮಾತಿಗೆ ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡಿಕೆ ಬಿಸಿಲಿನಲ್ಲಿ ಒಣಗಿ ಮಳೆಯಲ್ಲಿ ನೆನೆಯುವುದರಿಂದ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯಲಿದೆ, ಅಲ್ಲದೆ ತೂಕವೂ ಕಡಿಮೆಯಾಗುತ್ತಿದ್ದು, ಇದರಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಲಿದೆ, ಹಾಗಾಗಿ ಕೂಡಲೇ ರೈತರು ಮಾರುಕಟ್ಟೆಗೆ ಸಾಗಿಸುತ್ತಿದ್ದ ಅಡಿಕೆಯನ್ನು ಲಾರಿ ಸಮೇತ ಬಿಡುಗಡೆ ಮಾಡಬೇಕು, ಪರೋಕ್ಷವಾಗಿ ರೈತರಿಗೆ ತೆರಿಗೆ ಹಾಕಲು ಹೊರಟಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ತಿಳಿಸಿದರು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಕೆಲ ವ್ಯಾಪಾರಗಾರರು ಮತ್ತು ಟ್ರಾನ್ಸ್ ಪೋರ್ಟ್ ಕಂಪೆನಿಗಳ ಮಾಲೀಕರೊಂದಿಗೆ ಸೇರಿ ಬಿಲ್ ಆಗದ ಹತ್ತಾರು ಲಾರಿಗಳನ್ನು ವಿಮಲ್ ಗುಟ್ಕಾ ಕಂಪೆನಿಗೆ ಕಳುಹಿಸುತ್ತಿದ್ದಾರೆ, ಅಲ್ಲದೆ ತಮಗೆ ಮಾಮೂಲಿ ನೀಡುವ ಸಾಗಾಣಿಕೆ ವಾಹನ ಹೊಂದಿರುವ ಮಾಲೀಕರು ಮತ್ತು ವ್ಯಾಪಾರಸ್ಥರ ನೂರಾರು ಲಾರಿಗಳನ್ನು ತಾವೇ ಮುಂದೆ ನಿಂತು ಜಿಲ್ಲೆಯ ರಾಜ್ಯದ ಗಡಿ ದಾಟಿಸುತ್ತಿದ್ದಾರೆ, ಆದರೆ ತಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ಹೊರಟ ರೈತರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದು, ಇದರ ವಿರುದ್ಧ ಶೀಘ್ರದಲ್ಲೇ ಬೃಹತ್ ಹೋರಾಟ ರೂಪಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಹಿರಿಯ ಮುಖಂಡ ಕಂದೂರು ತಿಮ್ಮಯ್ಯ, ಅಡಿಕೆ ಮಾರಾಟಕ್ಕೆ ಮುಂದಾಗಿದ್ದ 12ಕ್ಕೂ ಹೆಚ್ಚು ರೈತರು, ರೈತ ಸಂಘದ ವಿವಿಧ ಮುಖಂಡರು ಹಾಜರಿದ್ದರು.
Comments are closed.