ಡೀಸಿ ಕಚೇರಿಗೆ ಕಳಪೆ ಬಣ್ಣದ ಲೇಪನ

ಬಣ್ಣ ಬಳಿಯಲು ಭರ್ತಿ 90 ಲಕ್ಷಕ್ಕೆ ಟೆಂಡರ್ ಎರಡು ಹನಿ ಮಳೆಗೆ ಕಾಮಗಾರಿ ಬಣ್ಣ ಬಯಲು!

179

Get real time updates directly on you device, subscribe now.


ತುಮಕೂರು: ಲೋಕೋಪಯೋಗಿ ಇಲಾಖೆಯ ಕಾರ್ಯವೈಖರಿ ಬಗ್ಗೆ ಹಲವು ಭಾರಿ ಚರ್ಚೆಯಾಗಿತ್ತು. ಓಬಿರಾಯನ ಕಾಲದ ವಿನ್ಯಾಸಕ್ಕೇ ಅಂಟಿಕೊಂಡು ಇಲಾಖೆ ದುಂದುವೆಚ್ಚ ಮಾಡುತ್ತಿದೆ, ರಸ್ತೆ ಕಾಮಗಾರಿಗಳು ನಿರ್ದಿಷ್ಟ ಸಮಯದಲ್ಲಿ ನಡೆಯೋದಿಲ್ಲ, ಗುಣಮಟ್ಟದ ಕಾಮಗಾರಿಯಂತೂ ಮಾಡೋದೇ ಇಲ್ಲ ಎಂಬ ಆರೋಪ ಇದ್ದೇ ಇದೆ. ಇದೀಗ ತುಮಕೂರಿನ ದೊಡ್ಡ ಕಟ್ಟಡಕ್ಕೆ ಬಣ್ಣ ಬಳಸಿ ಲೋಕೋಪಯೋಗಿ ಇಲಾಖೆಯ ಮರ್ಯಾದೆ ಬಟಾಬಯಲು ಮಾಡಿಕೊಂಡಿದೆ!.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಣ್ಣ ಲೇಪನ ಹಾಗೂ ದುರಸ್ತಿ ಕಾಮಗಾರಿ ಎಂದು ಭರ್ತಿ 90 ಲಕ್ಷಕ್ಕೆ ಟೆಂಡರ್ ಆಹ್ವಾನಿಸಿತ್ತು. ಪ್ರಕಟಣೆ ಸಂ.74/2022-23 ದಿನಾಂಕ 22-02-2023 ಕಾಮಗಾರಿ 3. ಮೆ.ಎಸ್.ಬಿ.ಸಿ. ಕನ್ಸ್ಟ್ರಕ್ಷನ್ಸ್ ಟೆಂಡರ್ನಲ್ಲಿ ಭಾಗವಹಿಸಿ 14-03-2023 ರಂದು ವರ್ಕ್ ಆರ್ಡರ್ ಪಡೆಯಿತು.
ಜಿಲ್ಲಾಧಿಕಾರಿ ಕಟ್ಟಡಕ್ಕೆ ಬಣ್ಣ ಲೇಪನ, ಕಾಂಪೌಂಡ್ ಸುತ್ತಲೂ ಪೈಯಿಂಟಿಂಗ್, ಶೌಚಾಲಯ ದುರಸ್ತಿ, ಕಿಟಕಿ ಅಥವಾ ಬಾಗಿಲು ದುರಸ್ತಿ, ಪಾರ್ಕ್ ದುರಸ್ತಿ, ನಿರ್ವಹಣೆ, ಫೆನ್ಸಿಂಗ್ ಇತ್ಯಾದಿ ಅನಿವಾರ್ಯ ದುರಸ್ತಿ ಕಾಮಗಾರಿಗಳು ಇರುತ್ತವೆ. ಆದರೆ ಬಣ್ಣ ಲೇಪನ-ದುರಸ್ತಿ ಕಾಮಗಾರಿ ಎಂದು ಭರ್ತಿ 92,69,275-00 ರೂ. ಮೆ.ಎಸ್.ಬಿ.ಸಿ.ಕನ್ಸ್ಟ್ರಕ್ಷನ್ಸ್ಗೆ ಲೋಕೋಪಯೋಗಿ ಇಲಾಖೆ ಅಗ್ರಿಮೆಂಟ್ ಮಾಡಿಕೊಂಡಿದೆ.

ಬಣ್ಣ ಬಳೆದು ವಾರ ಕಳೆದಿಲ್ಲ, ಆಗಲೇ ಬಣ್ಣ ಕಳೆದುಕೊಂಡಿದೆ. ಸರ್ಕಾರದ ದೊಡ್ಡ ಕಟ್ಟಡಗಳಿಗೆ ಹಲವು ವರ್ಷಗಳ ನಂತರ ಬಣ್ಣ ಲೇಪನ ಹಾಗೂ ದುರಸ್ತಿ ಕಾರ್ಯ ನಡೆಯುವಾಗ ವಿನ್ಯಾಸ ಬದಲಾವಣೆಯಾದರೂ ಮಾಡಬೇಕು. ಆದರೆ ಇಲ್ಲಿ ಅದ್ಯಾವುದೂ ಆಗಿಲ್ಲ. ಮಾಡುವ ಕೆಲಸವಾದ್ರೂ ಗುಣಮಟ್ಟದಿಂದ ಕೂಡಿದೆ ಎಂದರೆ ಅದೂ ಇಲ್ಲ.

ಕಳಪೆ ಮಟ್ಟದ ಬಣ್ಣ ಲೇಪನಕ್ಕೆ 90 ಲಕ್ಷ ಹಣ ಖರ್ಚು ಮಾಡುತ್ತಿದ್ದು ಇದು ಯಾವ ಅನುದಾನದಲ್ಲಿ ನಡೆಯುತ್ತಿದೆ ಎಂಬುದು ಕೂಡ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೂ ಸಾರ್ವಜನಿಕರ ಹಣ ಸುಖಾಸುಮ್ಮನೆ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಥಳೀಯ ನಾಗರೀಕರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಡೀಸಿ ಕೊಠಡಿ, ಖಜಾನೆ ಕೊಠಡಿ, ಎಸಿ ಕೊಠಡಿ, ರೆವಿನ್ಯೂ ಸೇರಿಂದತೆ ಸಂಸದರ ಕೊಠಡಿ, ಗೃಹ ಸಚಿವರ ಕೊಠಡಿ, ವಿಧಾನ ಪರಿಷತ್ ಸದಸ್ಯರ ಕೊಠಡಿಗಳ್ಯಾವು ಈ ಬಣ್ಣ ಲೇಪನ ಕಾಮಗಾರಿಗೆ ಅಥವಾ ಇನ್ನಾವುದೇ ದುರಸ್ತಿ ಕಾಮಗಾರಿಗೆ ಒಳಪಟ್ಟಿರುವುದಿಲ್ಲ. ಆದರೆ, ಜಿಲ್ಲಾಧಿಕಾರಿಗಳ ಕಛೇರಿಯ ಹೊರ ಭಾಗದಲ್ಲಿ ಎರಡು ಮಾದರಿಯ ಬಣ್ಣ ಬಳೆದು ಇಷ್ಟು ಹಣ ಖರ್ಚು ಮಾಡಬೇಕಾಗಿ ಬಂತಾ ಎಂಬ ಮಾತು ಹರಿದಾಡುತ್ತಿದೆ.

ನವೀಕರಣದ ವೆಚ್ಚದಲ್ಲಿ ಹೊಸ ಕಟ್ಟಡವನ್ನೇ ಕಟ್ಟಬಹುದು. ಸುಣ್ಣ-ಬಣ್ಣ ಸೇರಿದಂತೆ ಕೆಲವು ಸಣ್ಣ ಕೆಲಸಗಳಿಗೂ ಕೋಟಿ ಮೊತ್ತಕ್ಕೆ ಕೋಟ್ ಮಾಡುವ ಅವಶ್ಯಕತೆ ಇರೋದಿಲ್ಲ. ಕಟ್ಟಡ ನಿರ್ವಹಣೆ ಹಾಗೂ ನಿರ್ಮಾಣದಲ್ಲಿ ರಾಷ್ಟ್ರೀಯ ಕಟ್ಟಡ ಕೋಡ್ ಅನ್ನು ಲೋಕೋಪಯೋಗಿ ಇಲಾಖೆ ಎಂಜಿನಿಯರ್ಗಳು ಅನುಸರಿಸುತ್ತಿಲ್ಲ. ಗ್ರೀನ್ ಬಿಲ್ಡಿಂಗ್ ಎಂದರೆ ಪರಿಸರಸ್ನೇಹಿ ಎಂದರ್ಥ. ಆದರೆ ಇವರು ಹಸಿರು ಬಣ್ಣ ಬಳಿಯುವುದಷ್ಟೇ ಎಂದು ಭಾವಿಸಿದ್ದಾರೆ ಆದರೆ, ಮಳೆ ಬಂದರೆ ಸಾಕು ಕಾಮಗಾರಿ ಬಣ್ಣ ಬಯಲಾಗುತ್ತೆ.

ಬಲಾಢ್ಯರಿಗೆ ಟೆಂಡರ್ ಮಾಡಿಕೊಂಡು ಕಳಪೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ಕುಮ್ಮಕ್ಕು ನೀಡುತ್ತಿದೆ, ಅನಗತ್ಯ ದುಂದುವೆಚ್ಚ ಮಾಡಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ, ಜಿಲ್ಲಾಧಿಕಾರಿಗಳು ಈ ಕಳಪೆ ಕಾಮಗಾರಿ ಬಗ್ಗೆ ಗುಣಮಟ್ಟ ನಿಯಂತ್ರಣ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ ನಂತರ ತನಿಖಾ ತಂಡ ವಾಸ್ತವಾಂಶ ಬಯಲು ಮಾಡಬೇಕು.

Get real time updates directly on you device, subscribe now.

Comments are closed.

error: Content is protected !!