ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಲಿ

93

Get real time updates directly on you device, subscribe now.


ಕುಣಿಗಲ್: ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ, ವಿನಾಕಾರಣ ಜನರನ್ನು ಅಲೆದಾಡಿಸಬೇಡಿ, ಅನಗತ್ಯವಾಗಿ ಕಡತಗಳನ್ನು ಇಟ್ಟುಕೊಂಡು ಸತಾಯಿಸುವುದು ಕಂಡು ಬಂದಲ್ಲಿ ಮುಲಾಜಿಲ್ಲದೆ ಕ್ರಮಕ್ಕೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಲೋಕಾಯುಕ್ತ ತುಮಕೂರು ಎಸ್ಪಿ ವಲಿಭಾಷ ಹೇಳಿದರು.

ಮಂಗಳವಾರ ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿರುವ ಭ್ರಷ್ಟಾಚಾರ ಅರಿವು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಕಾರ್ಯಕ್ಕೆ ಸ್ಪಂದಿಸಲು ನಿಯೋಜನೆಗೊಂಡಿದ್ದಾರೆ, ಸರ್ಕಾರ ನೀಡುವ ಸವಲತ್ತು ಬಳಸಿಕೊಂಡು ಉತ್ತಮ ಸೇವೆ ನೀಡಿ, ಬೆಸ್ಕಾಂ, ಸರ್ವೆ, ಪಿಡಿಒ ಹಾಗೂ ಕಂದಾಯ ಇಲಾಖೆಯ ಸೇವೆಗಳ ಬಗ್ಗೆ ವ್ಯಾಪಕ ದೂರು ಬರುತ್ತಿವೆ, ಈ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿ ಸುಧಾರಿಸಿಕೊಂಡು ದೂರು ಬಾರದಂತೆ ಕೆಲಸ ನಿರ್ವಹಿಸಬೇಕು, ಭ್ರಷ್ಟಾಚಾರದಿಂದ ದೇಶದ ಪ್ರಗತಿ ಕುಂಠಿತವಾಗುತ್ತದೆ ಎಂಬ ಅರಿವು ಇರಬೇಕು, ಮುಂದಿನ ದಿನಗಳಲ್ಲಿ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಎಚ್ಚರಿಸಿದರು.

ಪಟ್ಟಣದಲ್ಲಿ ಮುಖ್ಯ ರಸ್ತೆ ಲೋಕೋಪಯೋಗಿ ವಶದಲ್ಲಿದ್ದರೆ, ನಿರ್ವಹಣೆ ಪುರಸಭೆಯದ್ದಾಗಿದ್ದು ರಸ್ತೆಯಲ್ಲಿ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ, ಪೊಲೀಸರು ರಸ್ತೆ ಮಾರ್ಜಿನ್ ಮಾರ್ಕಿಂಗ್ ಮಾಡಿದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆಂಬ ದೂರಿಗೆ ಸ್ಪಂದಿಸಿದ ಎಸ್ಪಿ ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಪುರಸಭೆ ಮುಖ್ಯಾಧಿಕಾರಿ ಶಿವಪ್ರಸಾದ್ ಅವರಿಗೆ ಸೂಚನೆ ನೀಡಿದ್ದು ಎಇಇ ನಾಗರಾಜ್ ಈ ತಿಂಗಳ ಅಂತ್ಯದೊಳಗೆ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

ಅರಣ್ಯ ಇಲಾಖೆ ಒತ್ತುವರಿ ಬಗ್ಗೆ ರಂಗಸ್ವಾಮಿ ದೂರು ನಿಡಿದ್ದರ ಬಗ್ಗೆ ಆರ್ಎಫ್ ಒ ಜಗದೀಶ್ ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ತೆರವು ಸಾಧ್ಯವಾಗಿಲ್ಲ ಎಂದರು, ಪುರಸಭೆ ಸದಸ್ಯ ಶ್ರೀನಿವಾಸ್, ಪುರಸಭೆಯಲ್ಲಿ ನಿಯಮ ಮೀರಿ ಮಾಸಿಕ ಅನುದಾನ ವೆಚ್ಚ ಮಾಡಿದ್ದಾರೆಂದು, ಪ್ರಶಾಂತ್ ಎಂಬುವರು ಕೋಟೆ ಪ್ರದೇಶದಲ್ಲಿ ರಸ್ತೆಯಲ್ಲೆ ಹಸು ಕಟ್ಟುವುದರಿಂದ ನೈರ್ಮಲ್ಯ ಹದಗೆಡುತ್ತಿದೆ ಎಂದು, ಸಮೀರಬಾನು ಎಂಬುವರು ಅನಧಿಕೃತ ವಿದ್ಯುತ್ ಸಮಪರ್ಕದ ಬಗ್ಗೆ ದೂರು ನೀಡಿದರೆ, ಬೆಸ್ಕಾಂ ಸಿಬ್ಬಂದಿ ಕ್ರಮ ಕೈಗೊಳ್ಳುವುದರ ಬದಲು ಅಕ್ರಮ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ದೂರು ನೀಡಿದರು.

ವಿವಿಧ ಇಲಾಖೆಗೆ ಸೇರಿದಂತೆ 35 ಕ್ಕೂ ಹೆಚ್ಚು ಅಹವಾಲು ಸಲ್ಲಿಕೆಯಾದವು. ಲೋಕಾಯುಕ್ತ ಡಿವೈಎಸ್ಪಿ ಹರೀಶ್, ಮಂಜುನಾಥ,
ನಿರೀಕ್ಷಕರಾದ ಶಿವರುದ್ರಪ್ಪ ಮೇಟಿ, ಸತ್ಯನಾರಾಯಣ, ರಾಮರೆಡ್ಡಿ, ತಹಶೀಲ್ದಾರ್ ಯೋಗೇಶ್, ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐ ನವೀನ್ ಗೌಡ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿ ಇದ್ದರು.

Get real time updates directly on you device, subscribe now.

Comments are closed.

error: Content is protected !!