ಸರ್ಕಾರಿ ನೌಕರರ ಕ್ರೀಡಾಕೂಟ ಯಶಸ್ಸಿಗೆ ಶ್ರಮಿಸಿ: ಡೀಸಿ

127

Get real time updates directly on you device, subscribe now.


ತುಮಕೂರು: ಜಿಲ್ಲೆಯಲ್ಲಿ ಅಕ್ಟೋಬರ್ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದ್ದು, ತುಮಕೂರು ಕ್ರೀಡಾಕೂಟ ಅವಿಸ್ಮರಣೀಯ ನೆನಪಾಗಿಸುವ ನಿಟ್ಟಿನಲ್ಲಿ ಸುವ್ಯವಸ್ಥಿತವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ- 2023ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ರಾಜ್ಯದಿಂದ 3500 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 9952 ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾಕೂಟ ನಡೆಯುವ ಸಮಯದಲ್ಲಿ ಯಾವುದೇ ಗೊಂದಲ ಉಂಟಾಗದ ರೀತಿಯಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳಬೇಕು, ಸ್ವಾಗತ, ಸಾರಿಗೆ, ಆಹಾರ, ಕ್ರೀಡೆಗಳ ಆಯೋಜನೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕ್ರೀಡಾಕೂಟ ಯಶಸ್ವಿಯಾಗಿ ಸಂಘಟಿಸಲು ಸಮಿತಿಗಳನ್ನು ರಚಿಸಲಾಗಿರುವ ವಿವಿಧ ಉಪ ಸಮಿತಿಗಳ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಭಾಗವಹಿಸುವವರ ಅನುಕೂಲಕ್ಕಾಗಿ ಮಾಹಿತಿ ಸಹಾಯವಾಣಿ ಸ್ಥಾಪಿಸಬೇಕು, ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ಬೇಕಾಗುವ ಉತ್ತಮ ವಸತಿ ಸೌಕರ್ಯ, ಸಾರಿಗೆ, ಊಟದ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಅವರ ವಸತಿ ಸ್ಥಳದಿಂದ ಕ್ರೀಡಾಂಗಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು, ಪ್ರತಿ ಜಿಲ್ಲೆಯ ಕ್ರೀಡಾ ಪಟುಗಳ ಉಸ್ತುವಾರಿಗೆ ಅಧಿಕಾರಿಗಳನ್ನು ನಿಯೋಜಿಸಿ ಮತ್ತು ಕ್ರೀಡಾಕೂಟ ಮುಗಿಯುವವರೆಗೆ ಅವರು ಭಾಗವಹಿಸುವವರ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರಿಗಳು ಮತ್ತು ಕ್ರೀಡಾ ಸಂಘ ಸಂಸ್ಥೆಗಳು ತೆಗೆದುಕೊಳ್ಳಬೇಕು, ಕಾರ್ಯಕ್ರಮ ನಡೆಯುವ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಪೊಲೀಸ್ ಭದ್ರತೆ ಒದಗಿಸಿ, ವೈದ್ಯರು ಮತ್ತು ಇತರ ಅರೆ ವೈದ್ಯಕೀಯ ಸಿಬ್ಬಂದಿ ಒಳಗೊಂಡ ವೈದ್ಯಕೀಯ ಸೌಲಭ್ಯ ಮತ್ತು ಆ್ಯಂಬುಲೆನ್ಸ್ ಕೂಡ ಕ್ರೀಡಾಂಗಣದಲ್ಲಿ ಸನ್ನದ್ಧವಾಗಿರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಕಾರ್ಯಕ್ರಮದಲ್ಲಿ ಯಾವುದೇ ಲೋಪ ದೋಷ ಆಗದಂತೆ ಕ್ರಮ ವಹಿಸಲು ಪ್ರತಿ ಜಿಲ್ಲೆಗೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು, ನಗರದ ವಿವಿಧ ಶಾಲಾ- ಕಾಲೇಜು, ವಿಶ್ವ ವಿದ್ಯಾಲಯದ ಸೇರಿದ 17 ಆವರಣಗಳಲ್ಲಿ ಒಟ್ಟು 21 ವಿವಿಧ ಕ್ರೀಡೆ ಏರ್ಪಡಿಸಲು ಸ್ಥಳಗಳನ್ನು ನಿಗದಿ ಮಾಡಲಾಗಿದ್ದು, ಕ್ರೀಡಾಪಟುಗಳಿಗೆ ಸಕಲ ಸೌಲಭ್ಯ ಕಲ್ಪಿಸಿ ಕಾರ್ಯಕ್ರಮಯಶಸ್ವಿಗೊಳಿಸುವಂತೆ ಸೂಚಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 53 ಇವೆಂಟ್ಸ್ ನಡೆಸಲಾಗುತ್ತದೆ, ಕಾರ್ಯಕ್ರಮ ಯಶಸ್ವಿಗೊಳಿಸಲು 8 ಸಮಿತಿ ರಚಿಸಲಾಗಿದೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೂ ಕ್ಯಾಪ್, ಟ್ರ್ಯಾಕ್ ಶೂಟ್ ಸೇರಿದಂತೆ ಎಲ್ಲಾ ಸವಲತ್ತು ನೀಡಲಾಗುವುದು, ಕಾರ್ಯಕ್ರಮದ ಉದ್ಘಾಟನೆಯನ್ನು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ನೆರವೇರಿಸಿಕೊಡಲಿದ್ದಾರೆ, ಅಕ್ಟೋಬರ್ 27 ರಂದು ಉದ್ಘಾಟನಾ ಕಾರ್ಯಕ್ರಮವಿದ್ದು ಅಕ್ಟೋಬರ್ 29 ರ ಮಧ್ಯಾಹ್ನ ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸುವ ಮೂಲಕ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ ಎಂದರು.
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಸಂಗೀತ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ರೋಹಿತ್, ಗಂಗಾಧರ್, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ತಹಸೀಲ್ದಾರ್ ಸಿದ್ದೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘದ ಪದಾಧಿಕಾರಿಗಳು ಇದ್ದರು.

ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್ ಬಾಲ್, ಅಥ್ಲೆಟಿಕ್ಸ್, ಟೆನ್ನಿಕಾಯ್ಟ್, ವೇಟ್ ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಚೆಸ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಈಜು, ಕೇರಂ, ಫುಟ್ಬಾಲ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಒಳಗೊಂಡ ಕ್ರೀಡಾಕೂಟಗಳು ನಡೆಯಲಿವೆ.
ಸಂಗೀತ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಶಾಸ್ತ್ರೀಯ ಗಾಯನ, ಹಿಂದೂಸ್ತಾನಿ, ಕರ್ನಾಟಕ ಮತ್ತು ಲಘು ಸಂಗೀತ, ಭರತನಾಟ್ಯ, ಕಥಕ್, ಮಣಿಪುರಿ, ಕೂಚಿಪುಡಿ, ಒಡಿಸ್ಸಿ ಮತ್ತು ಇತರ ಶಾಸ್ತ್ರೀಯ ನೃತ್ಯಗಳು, ಶಾಸ್ತ್ರೀಯ ವಾದ್ಯ ಸಂಗೀತ, ಜಾನಪದ ಹಾಡುಗಳು ಮತ್ತು ನೃತ್ಯಗಳು, ಕರಕುಶಲ ಪ್ರದರ್ಶನ ಮತ್ತು ಸ್ಕಿಟ್ ಗಳು ನಡೆಯಲಿವೆ, ಜಿಲ್ಲಾ ಮಟ್ಟದಲ್ಲಿ ಅರ್ಹತೆ ಪಡೆದವರು ಮಾತ್ರ ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!