ಗುಬ್ಬಿ: ತಾಲೂಕಿನ ಚೇಳೂರಿನ ಬೆಸ್ಕಾಂ ಕಚೇರಿ ಮುಂದೆ ನೂರಾರು ರೈತರು ವಿದ್ಯುತ್ ಸರಿಯಾಗಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಅನ್ನದಾತರು ವಿದ್ಯುತ್ ಇಲ್ಲದೆ ಸಂಕಷ್ಟದಲ್ಲಿ ಬದುಕುತಿದ್ದಾರೆ, ಅಡಿಕೆ, ತೆಂಗು, ಬಾಳೆ ಬೆಳೆ ಬೆಳೆದಿದ್ದು ಸಮರ್ಪಕ ವಿದ್ಯುತ್ ನೀಡುತ್ತಿಲ್ಲ, ಇದರಿಂದ ರೈತರ ಜೀವನ ಅಧೋಗತಿಗೆ ಇಳಿದಿದ್ದು ತೋಟದ ಮನೆಗಳಲ್ಲಿ ವಾಸಿಸುತ್ತಿರುವ ಮನೆಯವರಿಗೂ ವಿದ್ಯುತ್ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹಾಗೂ ಸರಕಾರದ ಕಿಡಿಕಾರಿದರು.
ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸರಕಾರ ನೀಡಿರುವ ಯಾವುದೇ ಭಾಗ್ಯಗಳು ನಮಗೆ ಬೇಕಿಲ್ಲ, ರೈತರಿಗೆ ಬೇಕಾದ ವಿದ್ಯುತ್ ನ್ನು ಸರಿಯಾದ ರೀತಿಯಲ್ಲಿ ನೀಡಿದರೆ ಅದೇ ದೊಡ್ಡ ಭಾಗ್ಯವಾಗುತ್ತದೆ,
ಇದೇ ರೀತಿ ಸರಕಾರ ವಿದ್ಯುತ್ ನೀಡದೆ ಮೊಂಡತನ ತೋರಿಸಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಕರೆಗೌಡ ಮಾತನಾಡಿ, ರೈತರು ಬೆಳೆದಿರುವಂತಹ ಯಾವುದೇ ಬೆಳೆಗೆ ಬೆಂಬಲ ಬೆಲೆಯನ್ನು ಸರಕಾರ ನೀಡುತ್ತಿಲ್ಲ, ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದೆ, ಅಷ್ಟು ಇಷ್ಟು ಅಡಿಕೆ ಬೆಳೆದು ಜೀವನ ಕಟ್ಟಿಕೊಳ್ಳುವ ಸಮಯದಲ್ಲಿ ವಿದ್ಯುತ್ ನೀಡದೆ ರೈತರ ಬದುಕನ್ನು ನಾಶ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
ಕಾರ್ಯಪಾಲಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಮಾತನಾಡಿ ರಾಜ್ಯದ ಎಲ್ಲಾ ಭಾಗದಲ್ಲಿಯೂ ವಿದ್ಯುತ್ ಸಮಸ್ಯೆ ಇದೆ, ಎಲ್ಲಿಯೂ ಕೂಡ ವಿದ್ಯುತ್ ಉತ್ಪಾದನೆ ಆಗದೆ ಇರುವುದರಿಂದ ಸಮಸ್ಯೆ ಆಗುತ್ತಿದ್ದು ಭಾನುವಾರದ ವೇಳೆಗೆ ಬೇರೆ ರಾಜ್ಯಗಳಿಂದ ಮತ್ತು ಪಾವಗಡದ ಸೋಲಾರ್ ಪಾರ್ಕ್ ನಿಂದ ನಮಗೆ ಹೆಚ್ಚಿನ ವಿದ್ಯುತ್ ಒದಗಲಾಗುತ್ತೆ, ಹಿಂದೆ ಯಾವ ರೀತಿ ನೀಡಲಾಗಿತ್ತೋ ಅದೇ ರೀತಿ ಮುಂದುವರಿಸುತ್ತೇವೆ, ಇನ್ನು ತೋಟದ ಮನೆಗಳಿಗೆ ವಿದ್ಯುತ್ ನೀಡುವುದಕ್ಕೆ ವಿಶೇಷವಾಗಿ ಸರಕಾರದ ಅನುಮತಿ ಪಡೆದು ನೀಡಲಾಗುತ್ತದೆ ಎಂದು ತಿಳಿಸಿದರು.
ರೈತ ಮುಖಂಡರಾದ ಕೆಂಪರಾಜು, ರಂಗಸ್ವಾಮಿ, ಮಂಜುನಾಥ್, ಹೇಮಂತ್ ಕುಮಾರ್, ನಟರಾಜು, ರಾಜಶೇಖರ್, ಶಿವಕುಮಾರ್, ಬಾಳೆಕಾಯಿ ರಾಜು, ಲೋಕಣ್ಣ, ಎಇಇ ಕರಿಯಪ್ಪ ಬೆಸ್ಕಾಂ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ನೂರಾರು ರೈತರು ಹಾಜರಿದ್ದರು. ಪ್ರತಿಭಟನೆಗೆ ಮುನ್ನ ಚೇಳೂರಿನ ಪ್ರಮುಖ ಬೀದಿಗಳಲ್ಲಿ 500ಕ್ಕೂ ಹೆಚ್ಚು ಜನ ಮೆರವಣಿಗೆಯ ಮೂಲಕ ಬೆಸ್ಕಾಂ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
Comments are closed.