ತುಮಕೂರು: ಮುಂಬರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಅಕ್ಟೋಬರ್ 20 ರಂದು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತಿದ್ದು, ಅವರೊಂದಿಗೆ ನಾನು ಸಹ ಕಾಂಗ್ರೆಸ್ ಪಕ್ಷ ಸೇರುತ್ತಿರುವುದಾಗಿ ಹಿರಿಯೂರಿನ ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ತಿಳಿಸಿದ್ದಾರೆ.
ಪತಿಯೊಂದಿಗೆ ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆಯಲ್ಲಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕೆ ನಮ್ಮನ್ನು ಆಹ್ವಾನಿಸಿದ್ದರು, ನಾನು ಪ್ರತಿನಿಧಿಸಿದ ಕ್ಷೇತ್ರವನ್ನು ಬಿಡಬಾರದು ಎಂಬ ಕಾರಣಕ್ಕೆ ಹಿರಿಯೂರಿನಿಂದಲೇ ಸ್ಪರ್ಧೆಗೆ ಇಳಿದಿದ್ದೆ, ಅನಿವಾರ್ಯ ಕಾರಣಗಳಿಂದ ಸೋಲು ಕಾಣಬೇಕಾಯಿತು, ಅಂತಿಮವಾಗಿ ಅಕ್ಟೋಬರ್ 20 ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದರು.
ಬಿಜೆಪಿ ಪಕ್ಷದಿಂದ ನಾನು ಶಾಸಕಿಯಾಗಿ ಆಯ್ಕೆಯಾಗಿದ್ದ ಹಿರಿಯೂರು ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಯಾವುದೇ ಕೊರತೆ ಮಾಡಿರಲಿಲ್ಲ, ಆದರೆ ಗೊಲ್ಲ ಸಮುದಾಯಕ್ಕೆ ನೀಡಬೇಕಾದ ಸವಲತ್ತುಗಳಲ್ಲಿ ಸಾಕಷ್ಟು ಹಿಂದೇಟು ಹಾಕಿತ್ತು, 2020ರ ಶಿರಾ ಉಪ ಚುನಾವಣೆ ಸಮಯದಲ್ಲಿ ತರಾತುರಿಯಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ತದನಂತರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಹೆಸರು ಬದಲಾಯಿಸಿ ಸಾಕಷ್ಟು ಗೊಂದಲ ಮಾಡಿತ್ತು ಎಂದು ದೂರಿದರು.
2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ಇನ್ನೂ ಒಂದುವರೆ ತಿಂಗಳು ಇದೇ ಎನ್ನುವಾಗ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಿ ಅನುದಾನ ನೀಡಿ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಅವಕಾಶವಿಲ್ಲದಂತೆ ಮಾಡಿದರು, ಇದು ನಮಗೆ ಬೇಸರ ತರಿಸಿದೆ, ನಾನು ಕೂಡ ಒಂದು ಸಮುದಾಯ ಪ್ರತಿನಿಧಿಸುವ ವ್ಯಕ್ತಿಯಾಗಿ, ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಾಗಿದೆ ಎಂದು ಪೂರ್ಣೀಮಾ ಶ್ರೀನಿವಾಸ್ ನುಡಿದರು.
ಪ್ರವರ್ಗ 1ರ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಪ್ರವರ್ಗ 1ರ ಅಡಿಯಲ್ಲಿ ಬರುವ ಸುಮಾರು 95 ಅತಿ ಹಿಂದುಳಿದ ಜಾತಿಗಳಿವೆ, ಅವುಗಳಲ್ಲಿ ಸುಮಾರು ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿವೆ, ಅವುಗಳಿಗೆ ನೀಡುತ್ತಿದ್ದ ಶೈಕ್ಷಣಿಕ ಸವಲತ್ತು ಹಿಂಪಡೆಯಲಾಗಿದೆ, ಹತ್ತಾರು ಬಾರಿ ಸಂಬಂಧಪಟ್ಟ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು ಸ್ಪಂದಿಸಲಿಲ್ಲ, ರಾಜ್ಯದ 36 ತಾಲೂಕುಗಳಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್ ಕಟ್ಟಡಗಳಿಗೆ ಅನುದಾನವಿಲ್ಲದೆ ಅರ್ಧಕ್ಕೆ ನಿಂತಿವೆ, ಜನರ ಬಳಿ ಯಾವ ಮುಖ ಇಟ್ಟುಕೊಂಡು ಹೋಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ, ಪ್ರಾಣಾಳಿಕೆಯಲ್ಲಿ ಈ ವಿಷಯ ಇದೆ, ಹಾಗಾಗಿ ಸಮುದಾಯದ ಹಿತದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದರು.
ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಸುಮಾರು 44 ತಾಲೂಕು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತಿದ್ದೇನೆ, ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಶಿಕ್ಷಕ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರಿಂದ ಅನುಕಂಪವಿದೆ, ಅದು ನನಗೆ ಸಹಕಾರಿಯಾಗಲಿದೆ ಎಂದ ಅವರು ಕಳೆದ 1973 ರಿಂದ ಒಂದು ಶಿಕ್ಷಣ ಸಂಸ್ಥೆ ನಡೆಸುತ್ತಾ, ಶಿಕ್ಷಕರ ಜಲ್ವಂತ ಸಮಸ್ಯೆಗಳ ಅರಿವಿದೆ, ಶೀಘ್ರದಲ್ಲಿಯೇ ಓಪಿಎಸ್ ಕುರಿತು ಒಳ್ಳೆಯ ಸುದ್ದಿ ನೌಕರರಿಗೆ ಬರಲಿದೆ ಎಂಬ ವಿಶ್ವಾಸವಿದೆ, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮನವರಿಕೆ ಮಾಡಿಕೊಡಲಾಗಿದೆ, ಬಡ್ತಿ ತಾರತಮ್ಯ, 2015 ರಿಂದಲೂ ತಡೆ ಹಿಡಿದಿರುವ ಸಿಬ್ಬಂದಿ ನೇಮಕ ಎಲ್ಲವೂ ಹಂತ ಹಂತವಾಗಿ ಬಗೆಹರಿಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಮುಖಂಡರಾದ ಚಂಗಾವರ ಮಾರಣ್ಣ ಇತರರು ಹಾಜರಿದ್ದರು.
Comments are closed.