ಕುಣಿಗಲ್: ರಸ್ತೆ ಅಪಘಾತದಲ್ಲಿ ಯುವ ಜನತೆ ಪ್ರಾಣ ಕಳೆದುಕೊಳ್ಳುತ್ತಿರುವುದು ತೀವ್ರ ಬೇಸರದ ಸಂಗತಿಯಾಗಿದೆ, ಜನತೆಗೆ ತೊಂದರೆ ಆದರೂ ಚಿಂತೆ ಇಲ್ಲ, ಜನರ ಪ್ರಾಣ ರಕ್ಷಣೆ ನಿಟ್ಟಿನಲ್ಲಿ ಸಂಚಾರ ನಿಯಮ ಕಠಿಣಗೊಳಿಸಲು ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಬುಧವಾರ ಪಟ್ಟಣದಲ್ಲಿ ಕುಣಿಗಲ್ ಪೊಲೀಸರು ಹಮ್ಮಿಕೊಂಡಿದ್ದ ಟ್ರಾಫಿಕ್ ಮೇನೆಜ್ ಮೆಂಟ್ ಕೇಂದ್ರ, ರಸ್ತೆ ಸುರಕ್ಷತಾ ಸಪ್ತಾಹ, ಹೆಲ್ಮೆಟ್ ಜಾಗೃತಿ, ಆಟೋ ಚಾಲಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನರಲ್ಲಿ ಉತ್ಸಾಹ, ಹುಮ್ಮಸ್ಸು ಹೆಚ್ಚಿದೆ, ಆದರೆ ಬೈಕ್ ಚಾಲನೆ ಮಾಡುವಾಗ ರಸ್ತೆ ಸುರಕ್ಷತಾ ಕ್ರಮ ಪಾಲಿಸದೆ ಹೆಲ್ಮೆಟ್ ಧರಿಸದೆ ಇದ್ದಾಗ ಸಂಭವಿಸುವ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ, ತಾವು ಸ್ವತಹ ವೈದ್ಯರಾಗಿದ್ದು ಅಪಘಾತವಾದಾಗ ಹೆಚ್ಚಿನದಾಗಿ ತಲೆಗೆ ಪೆಟ್ಟು ಬೀಳುತ್ತದೆ, ತಲೆ ಸೂಕ್ಷ್ಮ ಅಂಗವಾಗಿರುವ ಕಾರಣ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಇದ್ದಲ್ಲಿ ಪ್ರಾಣ ಹೋಗುವ ಸಂಭವ ಇರುತ್ತದೆ, ಒಬ್ಬ ವ್ಯಕ್ತಿ ಸತ್ತಲ್ಲಿ ಆತ ಒಂದು ಕುಟುಂಬದ ಆಧಾರವಾಗಿರುವ ಜೊತೆಗೆ ಹಲವು ಸಂಬಂಧ ಹೊಂದಿರುತ್ತಾನೆ ಎಂದರು.
ಪಟ್ಟಣದಲ್ಲಿ ಸರ್ಕಲ್ ಅಭಿವೃದ್ಧಿ ನಿಟ್ಟಿನಲ್ಲಿ, ಮುಖ್ಯರಸ್ತೆ ಟ್ರಾಫಿಕ್ ನಿಯಂತ್ರಣ ನಿಟ್ಟಿನಲ್ಲಿ ಹಲವು ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದ್ದು ರಸ್ತೆಬಳಕೆದಾರರು ಸಹ ತಮ್ಮ ಜವಾಬ್ದಾರಿ ಮೆರೆಯಬೇಕಿದೆ, ಎಂಟು ಲಕ್ಷ ರೂ. ವೆಚ್ಚದಲ್ಲಿ ಎರಡೂ ಸರ್ಕಲ್ ಗಳಲ್ಲಿ ಸಿಸಿ ಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ, ಸಾರ್ವಜನಿಕರು ಸಂಚಾರ ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಪೊಲೀಸರೊಂದಿಗೆ ಸಹಕಾರ ನೀಡಬೇಕು, ರಸ್ತೆ ಸಂಚಾರ ನಿಯಮ ಪಾಲನೆ ಮಾಡಬೇಕೆಂದರು.
ಡಿವೈಎಸ್ಪಿ ಲಕ್ಷ್ಮೀಕಾಂತ ಮಾತನಾಡಿ, ತಾಲೂಕಿನಲ್ಲಿ 2023 ಒಂದೇ ವರ್ಷದಲ್ಲಿ 279 ಅಪಘಾತ ಸಂಭವಿಸಿದ್ದು 80 ಮಂದಿ ಮೃತಪಟ್ಟರೆ, 315 ಮಂದಿ ಗಾಯಾಳುಗಳಾಗಿದ್ದಾರೆ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳು ಕುಟುಂಬದ ಆಧಾರ ಸ್ಥಂಭವಾಗಿದ್ದಾಗ ಇಡೀ ಕುಟುಂಬ ಅತಂತ್ರವಾಗುತ್ತದೆ, ರಸ್ತೆ ಸಂಚಾರ ನಿಯಮ ಪಾಲಿಸಬೇಕು, ದ್ವಿಚಕ್ರ ವಾಹನ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಮೃತಪಟ್ಟಿರುವ ಸಂಖ್ಯೆ ಹೆಚ್ಚಿದ್ದು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಜೊತೆ ವಾಹನದ ದಾಖಲೆ, ವಿಮೆ ದಾಖಲೆ ಸುಸ್ಥಿತಿಯಲ್ಲಿ ಇಡಬೇಕು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಾಗ ಅಪಘಾತವಾದಲ್ಲಿ ವಿಮೆಯೂ ಸಿಗುವುದಿಲ್ಲ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು, ತಾಲೂಕಿನಲ್ಲಿ 28 ಕಿ.ಮೀ ರಾಷ್ಟ್ರೀಯ ಹೆದ್ದಾರಿ, 40 ಕಿ.ಮೀ ರಾಜ್ಯಹೆದ್ದಾರಿ ಇದೆ, ಬೈಕ್ ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಮೃತ ಪಡುವ ಪ್ರಕರಣ ಹೆಚ್ಚಾಗಿರುವ ಕಾರಣ ಬೈಕ್ ಸವಾರರು ತಮ್ಮ ಪ್ರಾಣ ರಕ್ಷಣೆ ನಿಟ್ಟಿನಲ್ಲಿ ಹೆಲ್ಮೆಟ್ ಧರಿಸಬೇಕೆಂದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರ ನೇತೃತ್ವದಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಲು ಬೈಕ್ ಜಾಥಾ ನಡೆಸಲಾಯಿಯತು. ಸಿಪಿಐಗಳಾದ ನವೀನ್ ಗೌಡ, ಮಾದ್ಯ ನಾಯಕ್, ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್ ಬಾಬು, ಮುಖ್ಯಾಧಿಕಾರಿ ಶಿವಪ್ರಸಾದ್, ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ ಇತರರು ಇದ್ದರು.
Comments are closed.