ತುಮಕೂರು: ನಗರದ ಮರಳೂರು ದಿಣ್ಣೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ, ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುವ ಪ್ರಕರಣ ಹೆಚ್ಚಾಗಿವೆ, ಇದರಿಂದ ನಾಗರಿಕರು ಭಯ ಭೀತರಾಗಿದ್ದಾರೆ, ಬೀದಿ ನಾಯಿಗಳ ಹಾವಳಿ ತಡೆಗೆ ನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು 29ನೇ ವಾರ್ಡ್ ನ ನಗರ ಪಾಲಿಕೆ ಸದಸ್ಯೆ ನಾಜಿಮಾಬೀ ಇಸ್ಮಾಯಿಲ್ ಆರೋಪಿಸಿದ್ದಾರೆ.
ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಬೀದಿನಾಯಿ ಕಾಟದ ಬಗ್ಗೆ ತಾವು ಗಮನ ಸೆಳೆದಿದ್ದು, ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ನಾಯಿಗಳ ಸಂಖ್ಯೆಗೆ ಕಡಿವಾಣ ಹಾಕುತ್ತಿಲ್ಲ, ಬೀದಿ ನಾಯಿಗಳಿಗೆ ತೊಂದರೆ ಮಾಡಬಾರದು ಎಂಬ ಆದೇಶವಿದೆ, ಪ್ರಾಣಿ ದಯಾ ಸಂಘದವರು ಆಕ್ಷೇಪ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ, ಬೀದಿ ನಾಯಿಗಳನ್ನು ಕೊಲ್ಲುವುದು ಬೇಡ, ರಕ್ಷಿಸಬೇಕೆಂದರೆ ಊರಿನಿಂದ ಹೊರಗೆ ಸಾಗಿಸಿ, ಗೋಶಾಲೆ ಮಾದರಿಯಲ್ಲಿ ಬೀದಿ ನಾಯಿಗಳ ಫಾರಂ ಮಾಡಿ ರಕ್ಷಣೆ ಮಾಡಲಿ, ಇದಕ್ಕೆ ಸರ್ಕಾರ ಅಗತ್ಯ ನೆರವು ನೀಡಲಿ, ಏನಾದರೂ ಮಾಡಿ ನಗರವನ್ನು ಬೀದಿ ನಾಯಿಗಳಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳು ಮಕ್ಕಳ ಮೇಲೆರಗಿ ಕಚ್ಚುತ್ತವೆ, ದೊಡ್ಡವರ ಮೇಲೂ ದಾಳಿ ಮಾಡುತ್ತವೆ, ನಾಯಿ ಕಚ್ಚಿದರೆ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು, ಜೊತೆಗೆ ರಾತ್ರಿ ವೇಳೆ ನಾಯಿಗಳ ಬೊಗಳಾಟ, ಗಲಾಟೆ ಜನರ ನಿದ್ರೆ, ನೆಮ್ಮದಿ ಕೆಡಿಸುತ್ತದೆ, ಬೀದಿ ನಾಯಿಗಳ ಹಾವಳಿ ಬಗ್ಗೆ ನಾಗರಿಕರು ಪ್ರತಿನಿತ್ಯ ದೂರು ನೀಡಿ ನಾಯಿ ಕಟಕ್ಕೆ ಕಡಿವಾಣ ಹಾಕಲು ಒತ್ತಾಯಿಸುತ್ತಿದ್ದಾರೆ, ಆದರೆ ನಗರ ಪಾಲಿಕೆ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ನಾಜಿಮಾಬೀ ಇಸ್ಮಾಯಿಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳ ಕಾಟ ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವಿಪರೀತವಾಗಿ ಹೆಚ್ಚಾಗಿದೆ, ಮಕ್ಕಳು, ವೃದ್ಧರು ರಸ್ತೆಯಲ್ಲಿ ಓಡಾಡಲು ಬಿಡದೆ ಅಟ್ಟಿಸಿಕೊಂಡು ಹೋಗಿ ದಾಳಿ ಮಾಡುತ್ತವೆ, ಜನ ನಾಯಿಗಳಿಗೆ ಹೆದರುವಂತಾಗಿದೆ, ನಾಯಿಗಳ ನಿಯಂತ್ರಣ ಮಾಡದಿದ್ದರೆ ಈ ಭಾಗದ ನಗರಿಕರ ಜೊತೆ ಸೇರಿ ಬೀದಿ ನಾಯಿಗಳನ್ನು ಹಿಡಿದು ತಂದು ನಗರ ಪಾಲಿಕೆ ಕಚೇರಿಗೆ ನುಗ್ಗಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್ ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳ ಹಾವಳಿ ನಗರದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೂ ನಗರ ಪಾಲಿಕೆಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಮಾಡಲು ಪ್ರಯತ್ನ ಮಾಡುತ್ತಿಲ್ಲ, ಬೀದಿ ನಾಯಿಗಳಿಗೆ ಕಡಿವಾಣ ಹಾಕದಿದ್ದರೆ ಮುಂದೆ ನಾಗರಿಕರು ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆ, ಅದಕ್ಕೆ ಅವಕಾಶ ನೀಡದಂತೆ ಪಾಲಿಕೆಯವರು ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Comments are closed.