ಡಾ.ಎಂ.ವಿ.ನಾಗರಾಜ ರಾವ್ ಸಾಹಿತ್ಯ ಸೇವೆ ಶ್ಲಾಘನೀಯ

126

Get real time updates directly on you device, subscribe now.


ತುಮಕೂರು: ಹಿರಿಯ ಸಾಹಿತಿ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಡಾ.ಎಂ.ವಿ.ನಾಗರಾಜರಾವ್ ಅವರ ಬದುಕು, ಬರಹ ಕುರಿತು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ವಿರಚಿತ ಸಾಹಿತ್ಯ ಸವ್ಯಸಾಚಿ ಡಾ.ಎಂ.ವಿ.ನಾಗರಾಜರಾವ್ ಕೃತಿ ನಗರದಲ್ಲಿ ಲೋಕಾರ್ಪಣೆಯಾಯಿತು.
ಬಾಪೂಜಿ ವಿದ್ಯಾಸಂಸ್ಥೆ, ಸಿವಿಜಿ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಶುಕ್ರವಾರ ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ವಿಮರ್ಶಕ ಪ್ರೊ.ನಾ.ದಯಾನಂದ ಕೃತಿ ಬಿಡುಗಡೆ ಮಾಡಿ ಶುಭ ಕೋರಿದರು.
ಕೃತಿಕಾರ ಡಾ.ಕವಿತಾಕೃಷ್ಣ ಮಾತನಾಡಿ, ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಣ್ಣ ಹಳ್ಳಿಯಲ್ಲಿ ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಡಾ.ಎಂ.ವಿ.ನಾಗರಾಜ ರಾವ್ ಅಕ್ಷರದ ಆರಾಧನೆಯಿಂದಲೇ ತಮ್ಮ ಉದ್ಧಾರ ಎಂದು ಅರಿತು ಸಾಹಿತ್ಯಾ ಆರಾಧನೆಯಿಂದ ಬದುಕು ಬೆಳಗಿಸಿಕೊಂಡರು, ಕನ್ನಡ, ಹಿಂದಿ, ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದು ಹಲವಾರು ಕೃತಿಗಳನ್ನು ಆಯಾ ಭಾಷೆಗಳಿಗೆ ಅನುವಾದ ಮಾಡಿ ಕನ್ನಡದ ಸಾಹಿತ್ಯ ಕೀರ್ತಿ ಬೆಳಗಿದರು, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಾಕಾರಗಳಲ್ಲಿ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು ಎಂದರು.

ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ದೊರೆತವಾದರೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿಲ್ಲ, ಪ್ರಭಾವಿ ಮಂತ್ರಿ, ಶಾಸಕರು ನಾಗರಾಜ ರಾವ್ ಅವರ ಶಿಷ್ಯರಿದ್ದರೂ ಯಾರೊಬ್ಬರೂ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡಲಿಲ್ಲ, ಸಾಹಿತ್ಯ ಅಕಾಡೆಮಿಗಳೂ ಇವರತ್ತ ತಿರುಗಿ ನೋಡಲಿಲ್ಲ ಎಂದು ವಿಷಾದಿಸಿದ ಡಾ.ಕವಿತಾಕೃಷ್ಣ, ತುಮಕೂರು ವಿಶ್ವವಿದ್ಯಾಲಯವೂ ಇವರಿಗೆ ಗೌರವ ಡಾಕ್ಟರೇಟ್ ನೀಡಿ ಜಿಲ್ಲೆಯ ಸಾಹಿತ್ಯ ಘನತೆ ಗೌರವಿಸುವ ಪ್ರಯತ್ನ ಮಾಡಲಿಲ್ಲ ಎಂದು ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಎಂ.ವಿ.ನಾಗರಾಜ ರಾವ್ ಅವರು ಸರಳ, ಸಜ್ಜನಿಕೆ, ತಾಳ್ಮೆ, ಸಹನೆಯ ಮೂರ್ತಿ, ಬಡತನದ ಅನುಭವ, ಸರಳ ಬದುಕು ಅಳವಡಿಸಿಕೊಳ್ಳುವ ಸಾಧಕರು ಅತ್ಯುನ್ನತ ಸ್ಥಾನಕ್ಕೆ ಏರುತ್ತಾರೆ, ಅಂತಹವರ ಸಾಲಿನಲ್ಲಿ ನಾಗರಾಜರಾವ್ ಇದ್ದಾರೆ, ಬುದ್ಧ, ಬಸವ, ಗಾಂಧೀಜಿ ಮೋದಲಾದ ಮಹಾನುಭಾವರು ಸರಳ ಬದುಕು ನಡೆಸಿ ಅಧಿಕಾರ ಮೋಹಿಯಾಗದೆ ಸೇವೆಯನ್ನೇ ಬದುಕಾಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಡಾ.ಕವಿತಾಕೃಷ್ಣ ಅವರೂ ಜಿಲ್ಲೆಯ ಮೇರು ಸಾಹಿತಿ, 260ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಇಂತಹ ಸಾಹಿತಿ ಮತ್ತೊಬ್ಬ ಹಿರಿಯ ಸಾಹಿತಿ ಕುರಿತು ಕೃತಿ ರಚಿಸಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶ್ಲಾಸಿದರು.
ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಬಸವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ.ಎಂವಿ.ನಾಗರಾಜ ರಾವ್ ಹಾಗೂ ಡಾ.ಕವಿತಾಕೃಷ್ಣ ಅವರ ಸಾಹಿತ್ಯ ಕೊಡುಗೆ ಕೊಂಡಾಡಿದರು.

ಕವಿ ಹೆಚ್.ಕೆ.ನರಸಿಂಹಮೂರ್ತಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕ ಬೆಳ್ಳಾವಿ ಶಿವಕುಮಾರ್, ಲೇಖಕಿ ಕಮಲಾ ಬಡ್ಡಿಹಳ್ಳಿ, ಲಕ್ಷ್ಮೀಅಯ್ಯಂಗಾರ್ ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ವೇಳೆ ಚಿಕ್ಕನಾಯಕನ ಹಳ್ಳಿಯ ಶೃಂಗಾರ ಪ್ರಕಾಶನದಿಂದ ವಿವಿಧ ಕ್ಷೇತ್ರಗಳ ಆರು ಜನರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಸಮಾಜ ಸೇವೆಗಾಗಿ ಆರ್.ಪಿ.ಯಶೋಧ, ಸಂಘಟನೆಗಾಗಿ ಸುಭಾಷಿಣಿ ಆರ್.ಕುಮಾರ್, ಸಾಹಿತ್ಯದಲ್ಲಿ ಕಲಾ ಮಂಜುನಾಥ್, ಕೃಷಿಯಲ್ಲಿ ಹುಲ್ಲೇಕೆರೆಯ ಚಂದ್ರಕಲಾ ರವಿ, ಸಮಾಜ ಸೇವೆಗಾಗಿ ಯಶೋಧ ಗೂಳಯ್ಯ, ಸಂಗೀತ ಕ್ಷೇತ್ರದಿಂದ ಸವಿತಾ ಉಮಾಶಂಕರ್ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!