ಪೂರ್ಣಿಮಾರಿಂದ ಕಾಡುಗೊಲ್ಲರಿಗೆ ಅನ್ಯಾಯ

ಮಾಜಿ ಶಾಸಕಿ ವಿರುದ್ಧ ಕಾಡುಗೊಲ್ಲ ಮುಖಂಡರ ಆಕ್ರೋಶ

178

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಸ್ಥಾಪನೆಯಾದ ಕಾಡುಗೊಲ್ಲರ ಅಭಿವೃದ್ಧಿ ನಿಗಮ ನೋಂದಾಯಿಸದಂತೆ, ಕಾಡುಗೊಲ್ಲರನ್ನು ಎಸ್ಟಿ ಜಾತಿ ಪಟ್ಟಿಗೆ ಸೇರಿಸಲು ಅಡ್ಡಗಾಲಾಗಿರುವ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಅವರು ಕಾಡುಗೊಲ್ಲರ ಹೆಸರನ್ನು ತಮ್ಮ ರಾಜಕೀಯ ಅಭಿವೃದ್ಧಿಗೆ ಬಳಕೆ ಮಾಡುವುದನ್ನು ಕೈ ಬಿಡಲಿ ಎಂದು ತುಮಕೂರು ಜಿಲ್ಲಾ ಕಾಡುಗೊಲ್ಲ ಮುಖಂಡರ ವೇದಿಕೆ ಜಿ.ಕೆ.ನಾಗಣ್ಣ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಗೊಲ್ಲ ಸಮುದಾಯಕ್ಕೆ ಸೇರಿದಂತೆ ಮಾಜಿ ಸಚಿವರಾದ ಎ.ಕೃಷ್ಣಪ್ಪ ಕುಟುಂಬಕ್ಕೆ ಸೇರಿದ ಪೂರ್ಣಿಮ ಶ್ರೀನಿವಾಸ್ ಅವರು ಮೊದಲು ತಾವು ಕಾಡುಗೊಲ್ಲರೋ, ಊರುಗೊಲ್ಲರೋ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ, ನನ್ನ ಸಮಾಜ ಎಂದು ಹೇಳುತ್ತಾ ಕಾಡುಗೊಲ್ಲರ ಹೆಸರಿನಲ್ಲಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿರುವುದರ ಜೊತೆಗೆ ರಾಜಕೀಯ ಪಕ್ಷಗಳ ಮುಖಂಡರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಇದನ್ನು ಜಿಲ್ಲೆಯ 738 ಕಾಡುಗೊಲ್ಲರ ಹಟ್ಟಿಗಳ ಕಾಡುಗೊಲ್ಲರು ಸಂಪೂರ್ಣವಾಗಿ ವಿರೋಧಿಸುವುದಾಗಿ ತಿಳಿಸಿದರು.

ಕರ್ನಾಟಕದಲ್ಲಿರುವ ಕಾಡುಗೊಲ್ಲರು ಬುಡಕಟ್ಟು ಸಮುದಾಯದಕ್ಕೆ ಸೇರಿದ್ದು, ಗೊಲ್ಲ ಅಥವಾ ಯಾದವ ಸಮುದಾಯದ ಆಚಾರ ವಿಚಾರಗಳಿಗೂ, ಕಾಡುಗೊಲ್ಲರ ಆಚಾರ, ವಿಚಾರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ, ಗೊಲ್ಲ ಮತ್ತು ಕಾಡುಗೊಲ್ಲರ ನಡುವೆ ಕೊಡು ಕೊಳ್ಳುವಿಕೆಯ ಸಂಬಂಧಗಳಿಲ್ಲ, ಹೀಗಿದ್ದರೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಡುಗೊಲ್ಲರ ಹೆಸರು ಹೇಳುತ್ತಿರುವುದು ನಿಜಕ್ಕೂ ನಾಚಿಕೇಗೇಡಿನ ಸಂಗತಿ, ಅವರು ವೈಯಕ್ತಿಕವಾಗಿ ಯಾವುದೇ ಪಕ್ಷಕ್ಕೆ ಹೋಗಲಿ ನಮ್ಮ ಅಭ್ಯಂತರವಿಲ್ಲ, ತಮ್ಮ ರಾಜಕೀಯ ಅಧಿಕಾರ, ಹಣ ಬಲದಿಂದ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲರನ್ನು ಅಭಿವೃದ್ಧಿಗೆ ಅಡ್ಡಗಾಲಾಗದಿರಲಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ತಮ್ಮ ರಾಜಕೀಯ ಅಸ್ಥಿತ್ವಕ್ಕಾಗಿ ಪೂರ್ಣಿಮ ಶ್ರೀನಿವಾಸ್ ಅವರು ಗೊಲ್ಲರಾಗಿದ್ದುಕೊಂಡು ಕಾಡುಗೊಲ್ಲರ ಹೆಸರು ಹೇಳುತ್ತಿದ್ದಾರೆ, ಆದರೆ ಇವರೇ 2020ರ ಶಿರಾ ಉಪ ಚುನಾವಣೆ ವೇಳೆ ಸರಕಾರ ಸ್ಥಾಪಿಸಿದ ಕಾಡುಗೊಲ್ಲ ಅಭಿವೃದ್ಧಿ ನಿಗಮ ಇದುವರೆಗೂ ನೋಂದಾವಣೆಯಾಗಲು ಅವಕಾಶ ನೀಡಿಲ್ಲ, ಅಲ್ಲದೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಬೇಕೆಂಬ ಕಾಡುಗೊಲ್ಲರ ಹೋರಾಟದ ದಿಕ್ಕು ತಪ್ಪಿಸಲು ರಾಜ್ಯದಲ್ಲಿ ಕಾಡುಗೊಲ್ಲರೇ ಇಲ್ಲ ಎಂದು ತಮ್ಮ ಹಿಂಬಾಲಕರ ಮೂಲಕ ಕೇಂದ್ರ ಸರಕಾರಕ್ಕೆ ತಕರಾರು ಅರ್ಜಿ ಸಲ್ಲಿಸುವ ಕೆಲಸ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಜಿ.ಕೆ.ನಾಗಣ್ಣ, ಕಾಡುಗೊಲ್ಲರು ತಮ್ಮ ನಿರಂತರ ಹೋರಾಟದ ಫಲವಾಗಿ ಕಾಡುಗೊಲ್ಲ ಎಂಬ ಜಾತಿ ಸರ್ಟಿಪಿಕೇಟ್ ಪಡೆಯುವಂತಾಗಿದೆ, ಕೇಂದ್ರದ ಪರಿಶಿಷ್ಟ ಪಂಗಡ ಜಾತಿ ಪಟ್ಟಿಗೆ ಸೇರ್ಪಡೆಗೊಂಡರೆ ಹೆಚ್ಚಿನ ಅನುಕೂಲವಾಗಲಿದೆ, ಆದರೆ ಎಂದಿಗೂ ಈ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದ ಪೂರ್ಣಿಮ ಶ್ರೀನಿವಾಸ್ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ತಮ್ಮ ಪತಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ದೊರಕಿಸಲು ಈ ರೀತಿಯ ಸುಳ್ಳು ಹೇಳುತ್ತಿರುವುದು ತರವಲ್ಲ ಎಂದರು.

ತುಮಕೂರು ಜಿಲ್ಲ ಕಾಡುಗೊಲ್ಲ ಮುಖಂಡರ ವೇದಿಕೆಯ ಅಧ್ಯಕ್ಷ ಜಿ.ಎಂ.ಈರಣ್ಣ ಮಾತನಾಡಿ, ರಾಜ್ಯದಲ್ಲಿ 1995 ರಿಂದಲೂ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದ್ದೇವೆ, ಕಳೆದ 2023ರ ಚುನಾವಣೆಯಲ್ಲಿ ಕಾಡುಗೊಲ್ಲರು ಕಾಂಗ್ರೆಸ್ ಪಕ್ಷದ ಪರ ನಿಂತಿದ್ದಾರೆ, ಇದಕ್ಕೆ ತಾಜ ನಿರ್ದೇಶನವೆಂದರೆ ಹಿರಿಯಾರು ಕ್ಷೇತ್ರ, ಮಾಜಿ ಶಾಸಕಿ ಪೂರ್ಣಿಮ ಅವರೊಂದಿಗೆ ಕಾಡುಗೊಲ್ಲರು ಇಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು, ಅಧಿಕಾರದಲ್ಲಿದ್ದ ಇದ್ದಾಗಲೂ ಸಮುದಾಯಕ್ಕೆ ನ್ಯಾಯ ಒದಗಿಸದ ಕೆಲ ನಿವೃತ್ತ ಅಧಿಕಾರಿಗಳು ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಹವಣಿಸುತಿದ್ದು, ಇವಂತಹವರನ್ನು ಪಕ್ಷ ದೂರ ಇಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಮುಖಂಡರಾದ ರಮೇಶ್, ಗೋವಿಂದರಾಜು, ಚಿನ್ನಪ್ಪ, ಚರಣ್, ಪಣಿರಾಜ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!