ಕಾಡುಗೊಲ್ಲ ಮುಖಂಡರ ತೇಜೋವಧೆ ಸಲ್ಲದು

66

Get real time updates directly on you device, subscribe now.


ತುಮಕೂರು: ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ದಶಕಗಳಿಂದ ದುಡಿದ ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿ.ಟಿ.ಶ್ರೀನಿವಾಸ್, ಸಣ್ಣಮುದ್ದಯ್ಯ ಅವರನ್ನು ಸ್ವಯಂ ಘೋಷಿತ ಕಾಡುಗೊಲ್ಲ ಮುಖಂಡರು ಅವಹೇಳನ ಮಾಡುವುದು ಸರಿಯಲ್ಲ ಎಂದು ಕಾಡುಗೊಲ್ಲ ಯುವಕ ಮಿತ್ರ ಬಳಗದ ಅರುಣ್ ಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯ ವಾಸಿಸುವ ಕಾಡುಗೊಲ್ಲರ ಹಟ್ಟಿಗಳನ್ನು ನೋಡದವರು, ಅಭಿವೃದ್ಧಿಗಾಗಿ ಹೋರಾಡದವರು ಚುನಾವಣೆ ಸಂದರ್ಭದಲ್ಲಿ ಮುಖಂಡರಾಗಲೂ, ಹಣಕ್ಕಾಗಿ ಸಮುದಾಯದ ಮುಖಂಡರನ್ನು ಟೀಕಿಸುವ ಮೂಲಕ ಸಮುದಾಯದ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.

ಪ್ರವರ್ಗ-1ರ ರಾಜ್ಯಾಧ್ಯಕ್ಷರಾಗಿರುವ ಡಿ.ಟಿ.ಶ್ರೀನಿವಾಸ್ ಅಲೆಮಾರಿ ಮತ್ತು ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಈಗ ಅವರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದು, ಅವರು ಕಾಡುಗೊಲ್ಲರ ಎಸ್ಟಿ ಮೀಸಲಾತಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆಧಾರ ರಹಿತವಾಗಿ ದೂರುತ್ತಿದ್ದಾರೆ ಎಂದರು.
ಎಲ್ಲ ಸಮುದಾಯಗಳಲ್ಲಿಯೂ ಒಳಪಂಗಡಗಳು ಸಾಮಾನ್ಯವಾಗಿದ್ದು, ಅಭಿವೃದ್ಧಿ ನಿಗಮವನ್ನು ಮಾಡುವಾಗ ಸಮಗ್ರವಾಗಿ ಮಾಡುತ್ತಾರೆ ಅದೇ ರೀತಿ ಗೊಲ್ಲ ಸಮುದಾಯಕ್ಕೂ ಅಭಿವೃದ್ಧಿ ನಿಗಮ ಘೋಷಿಸಬೇಕೆಂದು ಮನವಿ ಶಾಸಕಿಯಾಗಿದ್ದ ಪೂರ್ಣೀಮಾ ಶ್ರೀನಿವಾಸ್ ಮಾಡಿದ್ದಾರೆ, ಕಾಡುಗೊಲ್ಲ, ಗೊಲ್ಲ ಎಂದು ಎರಡು ನಿಗಮವನ್ನು ಸರ್ಕಾರ ರಚನೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಹಿರಿಯೂರು ಶಾಸಕಿಯಾಗಿ ಪೂರ್ಣಿಮಾ ಶ್ರೀನಿವಾಸ್ ಆಯ್ಕೆಯಾಗಿದ್ದಾಗ 120 ಗೊಲ್ಲರಹಟ್ಟಿಗಳ ರಸ್ತೆ ಅಭಿವೃದ್ಧಿಗೆ 30 ಕೋಟಿ, ಹಿರಿಯೂರು ತಾಲ್ಲೂಕು ಒಂದರಲ್ಲಿಯೇ ಅಲೆಮಾರಿ ಯೋಜನೆಯಡಿ 4448 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ, ರಾಜ್ಯಾದ್ಯಂತ ಇರುವ ನಮ್ಮ ಸಮುದಾಯದವರಿಗೆ 22 ಸಾವಿರ ಮನೆಗಳನ್ನು ಡಿ.ಟಿ.ಶ್ರೀನಿವಾಸ್ ಮಂಜೂರು ಮಾಡಿಸಿದ್ದಾರೆ ಇಂತಹವರನ್ನು ಕಾಡುಗೊಲ್ಲರ ವಿರೋಧಿಗಳು ಎಂದು ಹೇಳುವುದು ಸರಿಯಲ್ಲ ಎಂದರು.
ವಕೀಲರಾದ ಶಿವಕುಮಾರ್ ಮಾತನಾಡಿ 40 ವರ್ಷಗಳ ಕಾಲ ಸರ್ಕಾರಿ ನೌಕರರಾಗಿ ಸಣ್ಣ ಮುದ್ದಯ್ಯ ಅವರು ಸೇವೆ ಸಲ್ಲಿಸಿ ಸಮುದಾಯದಲ್ಲಿ ಶೈಕ್ಷಣಿಕ ಅರಿವು ಮೂಡಿಸಿದ, ವಿದ್ಯಾರ್ಥಿ ನಿಲಯ ಮಾಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ಈರಣ್ಣ ಎಂಬುವರು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಎರಡು ಬಾರಿ ಜೈಲಿಗೆ ಹೋಗಿ ಬಂದವರು, ಸಮುದಾಯಕ್ಕೆ ಏನು ಕೊಡುಗೆ ನೀಡದವರು ಸಣ್ಣ ಮುದ್ದಯ್ಯ ಅವರ ವಿರುದ್ಧ ಮಾತನಾಡಿರುವುದು ಖಂಡನೀಯ ವಿಚಾರ ಎಂದರು.
ಕಾಡುಗೊಲ್ಲ ಸಮುದಾಯದ ವಿದ್ಯಾರ್ಥಿಗಳಿಗೆ ಒಂದೇ ಒಂದು ವಿದ್ಯಾರ್ಥಿ ನಿಲಯ ಕಟ್ಟಿಸಲು ಆಗದ ಸ್ವಯಂ ಘೋಷಿತ ಮುಖಂ ಡರುಗಳು ಸಮುದಾಯಕ್ಕಾಗಿ ಸೇವೆ ಮಾಡಿರುವ ಯಾವುದೇ ಉದಾಹರಣೆಯೂ ಇಲ್ಲ, ಇವರು ಗೊಲ್ಲರಹಟ್ಟಿಗಳಲ್ಲಿ ನಾಯಕರೆಂದು ಒಪ್ಪಿಕೊಂಡಿಲ್ಲ, ಕೇವಲ ರಾಜಕೀಯ ದುರದ್ದೇಶದಿಂದ ಕಾಡುಗೊಲ್ಲ ಸಮುದಾಯವನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಗಂಗಾಧರ್ ಮಾತನಾಡಿ ಸಮುದಾಯಕ್ಕೆ ಎಸ್ಟಿ ಮೀಸಲಾತಿ ವಿಚಾರಕ್ಕಾಗಿ ದೆಹಲಿಗೆ ಹೋಗಿ ಮಾತನಾಡಿದ ನಿಯೋಗದಲ್ಲಿ ನಾನು ಇದ್ದೆ, ಕೇಂದ್ರ ಸಚಿವರಾಗಿದ್ದ ಅರ್ಜುನ್ ಮುಂಡಾ ಅವರೊಂದಿಗೆ ಮಾತುಕತೆ ನಡೆಸಿ ಮನವಿ ಕೊಟ್ಟಿದ್ದೆವು ಆದರೆ ಇದರ ಅರಿವು ಇಲ್ಲದವರು ಈ ರೀತಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಪಡೆದಿರುವುದು ಕೇವಲ 63 ಮಂದಿ ಮಾತ್ರ, ಸ್ವಯಂಘೋಷಿತ ಮುಖಂಡರುಗಳೇ ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿಲ್ಲ ಯಾವ ನೈತಿಕತೆ ಇಟ್ಟುಕೊಂಡು ಕಾಡುಗೊಲ್ಲ ಸಮುದಾಯದ ಮುಖಂಡರು ಎಂದು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜೈಪ್ರಕಾಶ್, ಗುಬ್ಬಿಹಟ್ಟಿ ಮಹಲಿಂಗಯ್ಯ, ನಾಗರಾಜು, ಶಿವರಾಜು, ರಾಮು ಕನ್ನಡಿಗ ಸತೀಶ ಪರಮೇಶ್, ಮಹಲಿಂಗಪ್ಪ ಸೇರಿದಂತೆ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!