ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಪ್ರತಿಭಟನೆ

70

Get real time updates directly on you device, subscribe now.


ತುಮಕೂರು: ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಾಜಿ ಕಾರ್ಪೋರೇಟರ್ ಅವರ ಮನೆಯ ಮೇಲೆ ಐಟಿ ರೈಡ್ ನಡೆದು 42 ಕೋಟಿ ರೂ. ಹೆಚ್ಚು ಹಣ ಸಿಕ್ಕಿರುವುದನ್ನು ಖಂಡಿಸಿ ನವೆಂಬರ್ ನಲ್ಲಿ ನಡೆಯುವ ಐದು ರಾಜ್ಯಗಳ ಚುನಾವಣೆಗೆ ಹಣ ಹೊಂದಿಸಲು ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ನೇತೃತ್ವವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡು ಧರಣಿ ನಡೆಸುತ್ತಿದ್ದ ಬಿಜೆಪಿ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜಿ.ಬಿ.ಜೋತಿಗಣೇಶ್, ಕಾಂಗ್ರೆಸ್ ಪಕ್ಷದ ಐದು ರಾಜ್ಯಗಳ ಚುನಾವಣೆಗೆ ಹಣ ಒದಗಿಸಲು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದಕ್ಕೆ ಐಟಿ ರೈಡ್ ನಡೆದ ಎರಡು ಸ್ಥಳಗಳಲ್ಲಿ ದೊರೆತಿರುವ ಕೋಟಿ, ಕೋಟಿ ಅಕ್ರಮ ಹಣವೇ ಸಾಕ್ಷಿಯಾಗಿದೆ, ಮಾಧ್ಯಮಗಳ ಮೂಲಕ ಇಡೀ ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ಹಗಲು ದರೋಡೆ ಪರಿಚಯವಾಗಿದೆ, ಈಗಾಗಲೇ ಇವರ ಐದು ಗ್ಯಾರಂಟಿಗಳ ನಂಬಿ ಮತ ನೀಡಿದ ಜನತೆಗೆ ಕತ್ತಲೇ ಭಾಗ್ಯ ಕರುಣಿಸಿದ್ದಾರೆ, ಅಭಿವೃದ್ಧಿ ಎಂಬುದು ಶೂನ್ಯವಾಗಿದೆ, ಸರಕಾರ ಬಂದು ಐದು ತಿಂಗಳು ಕಳೆದರೂ ಅಭಿವೃದ್ಧಿಗೆ ನಯಾಪೈಸೆ ಹಣ ನೀಡಿಲ್ಲ, ಮತ ನೀಡಿದ ಜನ ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ, ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಿ ಹೋರಾಟ ನಡೆಸಲಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ರಾಜ್ಯದ ಮುಖಂಡರ ಕರೆಯ ಮೇರೆಗೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಾಲೂಕು ಕೇಂದ್ರಗಳಲ್ಲಿ, ನಂತರ ಹೋಬಳಿ, ಮಂಡಲಗಳಲ್ಲಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ, ಬಿಬಿಎಂಪಿಯ 650 ಕೋಟಿ ಕಾಮಗಾರಿಗೆ ಎನ್ ಓ ಸಿ ನೀಡಿ ಅದರಿಂದ ಸುಮಾರು 82 ಕೋಟಿ ರೂ ಕಿಕ್ ಬ್ಯಾಕ್ ಪಡೆಯಲಾಗಿದೆ, ಗ್ಯಾರಂಟಿ ಜಾರಿ ಬರದಲ್ಲಿ ರೈತರಿಗೆ ಅನುಕೂಲವಾಗಿದ್ದ ಕೃಷಿ ಸನ್ಮಾನ್, ಕೃಷಿ ವಿದ್ಯಾನಿಧಿ ಯೋಜನೆ ಕೈಬಿಟ್ಟು ರೈತರಿಗೆ ಮೋಸ ಮಾಡಿದೆ, ಇಂತಹ ಸರಕಾರ ತೊಲಗಬೇಕು, ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಭೈರಪ್ಪ, ಯುವ ಮೋರ್ಚಾ ಅಧ್ಯಕ್ಷ ಯಶಸ್ ಮತ್ತಿತರರು ಪ್ರತಿಭಟನೆ ಕುರಿತು ಮಾತನಾಡಿದರು.

ಪ್ರತಿಭಟನೆಯಲ್ಲಿ ಶಾಸಕ ಬಿ.ಸುರೇಶಗೌಡ, ನಗರ ಮಂಡಲ ಅಧ್ಯಕ್ಷ ಹನುಮಂತರಾಜು, ಸತ್ಯಮಂಗಲ ಜಗದೀಶ್, ಓಬಿಸಿ ಕಾರ್ಯಕಾರಿಣಿ ಸದಸ್ಯ ಎಸ್.ಪಿ.ಚಿದಾನಂದ್, ವಿನಯ್ ಬಿದರೆ, ಗುರುಕುಲ ಮಲ್ಲಿಕಾರ್ಜುನಯ್ಯ, ಸಂದೀಪಗೌಡ, ರುದ್ರೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ವಿಷ್ಣುವರ್ಧನ್, ಸದಸ್ಯರಾದ ರಮೇಶ್, ಮಲ್ಲಿಕಾರ್ಜುನಯ್ಯ, ಸಿದ್ದೇಗೌಡ, ಕುಮಾರ್, ವಿಜಯಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಸರೋಜಗೌಡ ಮತ್ತಿತರರು ಪಾಲ್ಗೊಂಡಿದರು.

Get real time updates directly on you device, subscribe now.

Comments are closed.

error: Content is protected !!